Advertisement
ಗೂನಡ್ಕದ ಮೋಯ್ದಿನ್ ಕುಂಞಿ ಅವರ ನಾಲ್ವರು ಮಕ್ಕಳಲ್ಲಿ ಅಬ್ದುಲ್ ಖಾದರ್ ಒಬ್ಬರು. ಅವರು ತನ್ನ 12ನೇ ವಯಸ್ಸಿನಲ್ಲಿ ಮಾಣಿ- ಮೈಸೂರು ರಸ್ತೆಯ ಗೂನಡ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ಸು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಲಾರಿ ಅಬ್ದುಲ್ ಖಾದರ್ ಅವರಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಖಾದರ್ ಅವರ ಒಂದು ಕಾಲು ಸಂಪೂರ್ಣ ತುಂಡಾಗಿ ಇನ್ನೊಂದು ಕಾಲಿನ ಪಾದ ಮುರಿಯಿತು. ದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಯಿತು. ಮೂರನೇ ತರಗತಿಯಲ್ಲಿ ಓದುತ್ತಿದ್ದ ಅವರು ಈ ಕಾರಣಕ್ಕಾಗಿಯೇ ಶಾಲೆಯನ್ನೂ ತೊರೆಯಬೇಕಾಯಿತು.
ಕಾಲು ಕಳೆದುಕೊಂಡರೂ ಖಾದರ್ ಬದುಕಿನಲ್ಲಿ ಭರವಸೆ ಕಳೆದುಕೊಳ್ಳದೆ ಕೆಲವು ವರ್ಷಗಳ ಕಾಲ ಬೀದಿಗಳಲ್ಲಿ ವ್ಯಾಪಾರ ಮಾಡಿದರು. ಕಾಲು ಕಳೆದುಕೊಂಡ ತನ್ನನ್ನು ಯಾರು ಮದುವೆಯಾಗಲು ಮುಂದೆ ಬರುತ್ತಾರೆ ಎಂಬ ಆತಂಕವೂ ಅವರಿಗಿತ್ತು. ಆದರೆ, ತಮ್ಮದೇ ಊರಿನ ಅಬ್ದುಲ್ಲ ಅವರು ಮಗಳು ಅಮೀನಾ ಮನೆಯವರ ಒಪ್ಪಿಗೆಯೊಂದಿಗೆ ಖಾದರ್ ಅವರನ್ನು ಮದುವೆಯಾದರು. ಬದುಕಿನಲ್ಲಿ ಹೊಸ ಧೈರ್ಯ, ಭರವಸೆ ತುಂಬಿದರು. ಸುಮಾರು 20 ವರ್ಷಗಳ ಕಾಲ ಬಟ್ಟೆ ವ್ಯಾಪಾರ ನಡೆಸಿದ ಅಬ್ದುಲ್ ಖಾದರ್ ಪ್ರಸ್ತುತ ಮೀನು ವ್ಯಾಪಾರ ಮಾಡುತ್ತಿದ್ದಾರೆ. ಸರಕಾರದಿಂದ ರಿಯಾಯಿತಿ ದರದಲ್ಲಿ ದೊರೆತ ಮೂರು ಚಕ್ರದ ಸ್ಕೂಟರ್‌ನಲ್ಲಿ ಸುಳ್ಯದ ಮೀನು ಮಾರುಕಟ್ಟೆಯಿಂದ ಸುಮಾರು 25 ಕೆ.ಜಿ. ಮೀನು ಖರೀದಿಸಿ, ಕೊಯಿನಾಡು ತನಕ ಮೀನು ಮಾರಾಟ ಮಾಡುತ್ತಾರೆ. ಪತ್ನಿ, ಇಬ್ಬರು ಮಕ್ಕಳೊಂದಿಗೆ ಅಬ್ದುಲ್ ಖಾದರ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
Related Articles
ನಾನು ಕಾಲು ಕಳೆದುಕೊಂಡ ಮೇಲೆ ಜೀವನದಲ್ಲಿ ನಿರಾಸೆಗೊಂಡಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಆಲೋಚಿಸಿ ಬಟ್ಟೆ ವ್ಯಾಪಾರ ಆರಂಭಿಸಿದೆ. ಬಳಿಕ ಬಟ್ಟೆ ವ್ಯಾಪಾರ ಕಡಿಮೆಯಾಗುತ್ತ ಬಂತು. ಈಗ ಮೀನು ವ್ಯಾಪಾರ ಆರಂಭಿಸಿದ್ದೇನೆ. ವ್ಯಾಪಾರ ಪರವಾಗಿಲ್ಲ. ನಾನು ಎಲ್ಲದಕ್ಕೂ ಮನೆಯವರನ್ನು ಅವಲಂಬಿಸುವುದು ಸರಿಯಾಗುವುದಿಲ್ಲ. ನನಗೆ ಆರೋಗ್ಯ ಅಷ್ಟು ಸರಿ ಇಲ್ಲ. ಮದ್ದಿಗೆ ಸ್ವಲ್ಪ ಹಣ ಬೇಕಾಗುತ್ತದೆ. ಇದಕ್ಕೆಲ್ಲ ವ್ಯಾಪಾರದಲ್ಲಿ ಬಂದ ಹಣ ಹೊಂದಾಣಿಯಾಗುತ್ತದೆ.
- ಅಬ್ದುಲ್ ಖಾದರ್ ಗೂನಡ್ಕ, ಸಂಚಾರಿ ಮೀನು ವ್ಯಾಪಾರಿ
Advertisement
– ತೇಜೇಶ್ವರ್ ಕುಂದಲ್ಪಾಡಿ