ಸಿಂಧನೂರು: ತಾಲೂಕಿನ ದಢೇಸುಗೂರು ತುಂಗಭದ್ರಾ ನದಿ(ಹೊಳೆ)ಯಲ್ಲಿ ಒಂದೋ, ಎರಡೋ ಮೊಸಳೆ ಕಾಣಿಸುವುದು ಸಾಮಾನ್ಯ. ಆದರೆ ರವಿವಾರ ಬರೋಬ್ಬರಿ 20ಕ್ಕೂ ಹೆಚ್ಚು ಮೊಸಳೆಗಳು ಕಂಡು ಬಂದಿವೆ. ಕಳೆದ ವರ್ಷ ತುಂಗಭದ್ರಾ ಪುಷ್ಕರ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಿದ್ದ ಸ್ಥಳದ ಅನತಿ ದೂರದಲ್ಲೇ ಈ ಮೊಸಳೆಗಳ ಮೆರವಣಿಗೆ ಕಂಡು ಬಂದಿದೆ.
ದಢೇಸುಗೂರು ಸೇತುವೆ ಮೇಲೆ ಸಂಚರಿಸುತ್ತಿದ್ದ ಜನ ಕೆಲ ಹೊತ್ತು ನಿಂತು ವೀಕ್ಷಿಸಿ ಹೋಗಿದ್ದಾರೆ. ಹಲವರು ಈ ಮೊಸಳೆಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಜನರ ಗದ್ದಲ ಹೆಚ್ಚಾಗುತ್ತಿದ್ದಂತೆ ಮೊಸಳೆಗಳು ಬ್ರಿಡ್ಜ್ ಪ್ರದೇಶ ತೊರೆದು ನದಿಯ ಕೆಳಭಾಗಕ್ಕೆ ಪ್ರಯಾಣ ಬೆಳೆಸಿವೆ.
ಕಳೆದ ವರ್ಷ ಒಬ್ಬರು ಬಲಿ: ದಢೇಸುಗೂರು ಗ್ರಾಮಕ್ಕೆ ಹೊಂದಿಕೊಂಡಿರುವ ನದಿಗೆ ದೊಡ್ಡದಾದ ಸೇತುವೆ ಕಟ್ಟಲಾಗಿದೆ. ಈ ಪ್ರದೇಶಸ ಸುತ್ತಲೂ ಮೀನುಗಾರಿಕೆ ನಡೆಯುತ್ತದೆ. ಕಳೆದ ವರ್ಷವಷ್ಟೇ ನದಿ ಪಾತ್ರ ಸಮೀಪ ವ್ಯಕ್ತಿಯೊಬ್ಬರು ಮೊಸಳೆಗೆ ಬಲಿಯಾಗಿದ್ದರು. ಈ ಘಟನೆಯ ಬಳಿಕ ಭೀತಿ ಮೂಡಿತ್ತು. ಕೆಲ ದಿನಗಳ ನಂತರ ಸಹಜ ಸ್ಥಿತಿಗೆ ಮರಳಿದ ನಿರಾಳಭಾವ ಮೂಡಿದ ಬೆನ್ನಲ್ಲೇ ಮೊಸಳೆ ಹಿಂಡು ಕಾಣಿಸಿಕೊಂಡು ಜನರನ್ನು ಭಯಭೀತಗೊಳಿಸಿದೆ.
ಮುನ್ನೆಚ್ಚರಿಕೆಯೊಂದಿಗೆ ಪುಷ್ಕರ: ತಾಲೂಕು ಕಮ್ಮವಾರಿ ಸಂಘದ ವತಿಯಿಂದ 12 ವರ್ಷಕ್ಕೊಮ್ಮೆ ನಡೆಯುವ ತುಂಗಭದ್ರಾ ಪುಷ್ಕರವನ್ನು ದಢೇಸುಗೂರು ಬಳಿಯ ಶಿವ ದೇಗುಲ ಪಕ್ಕದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪುಣ್ಯಸ್ನಾನಕ್ಕೆ ಬರುವ ಜನರ ಭದ್ರತೆ ದೃಷ್ಟಿಯಿಂದ ನದಿಯಲ್ಲಿ ಕಬ್ಬಿಣ ಜಾಲರಿ ಅಳವಡಿಸಲಾಗಿತ್ತು. ಸೀಮಿತ ಪ್ರದೇಶದಲ್ಲಿ ಮಾತ್ರ ಸ್ನಾನಕ್ಕೆ ಅವಕಾಶ ನೀಡಲಾಗಿತ್ತು. ಜತೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಏನಾದರೂ ಅಚಾತುರ್ಯ ನಡೆದರೆ, ಅದನ್ನು ಪತ್ತೆ ಹಚ್ಚುವ ಉದ್ದೇಶದೊಂದಿಗೆ ಪೊಲೀಸ್ ಇಲಾಖೆ ಇಂತಹ ಮುನ್ನೆಚ್ಚರಿಕೆ ಕೈಗೊಂಡಿತ್ತು.
ನದಿ ತೊರೆದ ಮೀನುಗಾರರು: ಸಿರುಗುಪ್ಪ ಹಾಗೂ ಸಿಂಧನೂರು ಭಾಗದಲ್ಲಿ ಇಲ್ಲಿನ ಹೊಳೆ ಮೀನಿಗೆ ಹೆಚ್ಚಿನ ಬೇಡಿಕೆಯಿದೆ. ನೂರಾರು ಕುಟುಂಬಗಳು ಇಂದಿಗೂ ಮೀನುಗಾರಿಕೆಯನ್ನು ನೆಚ್ಚಿಕೊಂಡಿವೆ. ಈ ನಡುವೆ ಹೊಳೆಯಲ್ಲಿ 20ಕ್ಕೂ ಹೆಚ್ಚು ಮೊಸಳೆ ವಿಹರಿಸುತ್ತಿರುವುದನ್ನು ಕಂಡ ಬಳಿಕ ನದಿಗೆ ಇಳಿಯುವುದನ್ನು ಕೈ ಬಿಟ್ಟಿದ್ದಾರೆ. ಮೀನು ಹಿಡಿಯಲು ನದಿಗೆ ಇಳಿಯದಂತೆ ಗ್ರಾಪಂ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ನದಿ ಅಕ್ಕ-ಪಕ್ಕದಲ್ಲಿ ನೀರಾವರಿ ಕೃಷಿ ಜಮೀನು ಹೊಂದಿರುವ ರೈತರು ನದಿಪಾತ್ರದಲ್ಲಿಯೇ ಹೆಚ್ಚಾಗಿ ಸುತ್ತಾಡುತ್ತಾರೆ. ಭಾರಿ ಪ್ರಮಾಣದಲ್ಲಿ ಮೊಸಳೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಜನ ಕಂಗೆಡುವಂತಾಗಿದೆ.