ನಮ್ಮ ಕನಸುಗಳು ಕೈಗೂಡಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ತನ್ನಿಂತಾನೆ ಜಗತ್ತು ನಮ್ಮ ಆಶಯಗಳು ಕೈಗೂಡಲು ಸಹಾಯ ಹಸ್ತ ಚಾಚುತ್ತದೆ ಎಂಬುದಕ್ಕೆ S V Delos ಒಂದು ಉದಾಹರಣೆಯಷ್ಟೇ…
“ಕಾಣದ ಕಡಲಿಗೆ ಹಂಬಲಿಸಿದೆ ಮನ’… ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಪ್ರಸಿದ್ಧ ರಚನೆ. ಕೇವಲ ಕವಿಗಷ್ಟೇ ಅಲ್ಲ, ಸಾಮಾನ್ಯನಿಗೂ ಕಡಲು ಬಹುವಾಗಿ ಕಾಡಬಲ್ಲದು. ಮಾನವ ನಡೆದು ಬಂದ ಹಾದಿಯನ್ನು ಗಮನಿಸಿದಾಗ ಎಲ್ಲ ಕಾಲಘಟ್ಟಗಳಲ್ಲೂ ಕಡಲನ್ನು ದಾಟಿದ್ದಾನೆ, ದಾಟಲು ಯತ್ನಿಸಿದ್ದಾನೆ. ಸುಸಜ್ಜಿತ ನಾವೆಗಳಲ್ಲಿದ, ನಾಗರಿಕತೆ ಅಷ್ಟಾಗಿ ಬೆಳೆಯದ 17 ಮತ್ತು 18ನೇ ಶತಮಾನದಲ್ಲಿಯೂ ಕಡಲ ಯಾನದ ಹುಚ್ಚು ಜೋರಾಗಿಯೇ ಇತ್ತು.
ಹೀಗೆ ಮನುಷ್ಯ ನೀರನ್ನು ಬಿಟ್ಟು, ಆಕಾಶದಲ್ಲಿ ಹಾರುವಷ್ಟರ ಮಟ್ಟಿಗೆ ವಿಜ್ಞಾನ ಬೆಳೆದಿದ್ದರೂ ಮನುಷ್ಯ ಕಡಲ ಸೆಳೆತದಿಂದ ಮುಕ್ತನಾಗಿಲ್ಲ. ಹೀಗೆ ಉಪ್ಪುನೀರಿನೆಡೆಗೆ ಆಕರ್ಷಿತರಾದವರಲ್ಲಿ ಅಮೆರಿಕದ ಸಿಯಾಟಲ್‌ನ ಬ್ರಿಯಾನ್ ಟ್ರಾಟ್‌ಮನ್ ಕೂಡ ಒಬ್ಬರು. ಆಕರ್ಷಣೆ ಎಷ್ಟರಮಟ್ಟಿಗಿತ್ತೆಂದರೆ 2009ರ ಸುಮಾರಿನಲ್ಲಿ ಬ್ರಿಯಾನ್ ಮಾಡುತ್ತಿದ್ದ ಕೆಲಸ ಬಿಟ್ಟು, ಕೈಲಿದ್ದದ್ದನ್ನೆಲ್ಲಾ ಮಾರಿ ಕಡಲಿಗಿಳಿದೇ ಬಿಟ್ಟರು. ಆಸ್ತಿ ಮಾರಿದ ಹಣದಲ್ಲಿ ಖರೀದಿಸಿದ ನಾವೆಯ ಹೆಸರು SV Delos (ಸೇಲಿಂಗ್ ವೆಸಲ್ ಡೆಲೊಸ್). ನಂತರದಲ್ಲಿ 53 ಅಡಿ ಉದ್ದದ ಅಮೆಲ್ ಸುಪರ್ ಮರಮು (ಸೇಲಿಂಗ್ ಬೋಟ್) ಅನ್ನೇ ಈತ ಮನೆ ಮಾಡಿಕೊಂಡಿದ್ದಾನೆ.
ಸಿಯಾಟಲ್‌ನಿಂದ ಹೊರಟ ಈ ನಾವೆ ಈಗಾಗಲೇ ಜಗತ್ತಿನ ಪ್ರಮುಖ ಸಾಗರಗಳನ್ನು ದಾಟಿದೆ. ನೂರಾರು ದ್ವೀಪ, ಬಂದರುಗಳಲ್ಲಿ ಲಂಗರು ಹಾಕಿದೆ. ಕೇವಲ ಕಡಲು ದಾಟಿದ್ದರೆ ಈತ ಇಷ್ಟೊಂದು ಪ್ರಖ್ಯಾತನಾಗುತ್ತಿರಲಿಲ್ಲ. ಆದರೆ, ಈತ ಹೋದಲ್ಲೆಲ್ಲ ಸ್ಥಳೀಯರೊಂದಿಗೆ ಬೆರೆತಿದ್ದಾನೆ, ಬೆರೆತು ಕಲಿತಿದ್ದಾನೆ. ಈ ಮಹಾ ಪರ್ಯಟನೆಯಲ್ಲಿ ಬ್ರಿಯಾನ್‌ಗೆ ಸಾಥ್ ಕೊಟ್ಟಿರುವವರು ಆತನ ತಮ್ಮ ಬ್ರಾಡಿ ಟ್ರಾಟ್‌ವಾನ್ ಮತ್ತು ಗೆಳತಿ ಕರಿನ್ ಸೈರೆನ್. ಈ ಮೂವರು ಸಮುದ್ರಯಾನದ ಕಾಯಂ ಸಹಯಾತ್ರಿಕರು. ಮಾರ್ಗ ಮಧ್ಯದಲ್ಲಿ 14 ದೇಶಗಳ 50ಕ್ಕೂ ಹೆಚ್ಚು ಮಂದಿ ಸಹ ಪ್ರಯಾಣಿಕರಾಗಿ ಇವರ ಜೊತೆಗೂಡಿದ್ದಾರೆ, ನಂತರದಲ್ಲಿ ಬೀಳ್ಕೊಟ್ಟಿದ್ದಾರೆ. ಇವರ ಯಾನ ಮಾತ್ರ ಮುಂದೆ ಸಾಗುತ್ತಲೇ ಇದೆ.
ಈ ಅಭೂತ ಪೂರ್ವ ಪಯಣವನ್ನು ತಮ್ಮ ವ್ಲಾಗ್‌ನ (ಬ್ಲಾಗ್‌ನಂಥದೇ ಆದರೆ ದೃಶ್ಯ ಮಾಧ್ಯಮದ ಬಳಕೆಯಿರುತ್ತದೆ) ಮೂಲಕ ಸಂಕ್ಷಿಪ್ತವಾಗಿ ಯೂ ಟ್ಯೂಬ್‌ನಲ್ಲಿ ಬಿತ್ತರಿಸಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಾಗೆಯೇ ಲಂಗರು ಹಾಕಿದಲ್ಲೆಲ್ಲ ನೂರಾರು ಗೆಳೆಯರನ್ನು ಸಂಪಾದಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಇಂಥ ಹಲವಾರು ವ್ಲಾಗ್‌ಗಳಿವೆ. ಆದರೆ, ತಮ್ಮ ವ್ಯಕ್ತಿತ್ವ ಮತ್ತು ನಿರೂಪಣೆಯಿಂದ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದಾರೆ ಈ ಸಾಗರದ ಅಲೆಮಾರಿಗಳು. ಇವರ ಈ ನಿರಂತರ ಯಾನಗಳಿಗೆ ದುಡ್ಡು ಎಲ್ಲಿಂದ ಬರುತ್ತೆ? ಯಾರು ಕೊಡುತ್ತಾರೆ ಎಂದು ಯೋಚಿಸುತ್ತಿದ್ದೀರಾ? ಇದನ್ನೂ ಜನರೇ ಕೊಡುತ್ತಿದ್ದಾರೆ! ತಮ್ಮ ಕೈಲಾದಷ್ಟು ಹಣವನ್ನು ಇವರ ಪರ್ಯಟನೆಗೆಂದು ಕೊಡುವವರ ಸಂಖ್ಯೆ ಬಹಳಷ್ಟಿದೆ. ಉಳಿದಂತೆ ಪ್ಯಾಟ್ರಿಯಾನ್ (Patreon.com) ಎಂಬ ಕ್ರೌಡ್ ಫಂಡಿಂಗ್ ಜಾಲತಾಣದ ಮೂಲಕ ಪ್ರತಿ ತಿಂಗಳೂ ಇವರಿಗೆ ನೆರವಾಗುವವರೂ ಇದ್ದಾರೆ.
ಜಗತ್ತಿನಲ್ಲಿ ಅನೇಕರಿಗೆ ಇಂಥ ಕನಸುಗಳಿರುತ್ತವೆ. ಆದರೆ, ಹಲವು ಕಾರಣಗಳಿಂದ ಇವೆಲ್ಲ ಸಾಕಾರಗೊಳ್ಳುವುದೇ ಇಲ್ಲ. ಕನಿಷ್ಠ ಪಕ್ಷ ತಮ್ಮ ಆಸೆ- ಆಕಾಂಕ್ಷೆಗಳ ಈಡೇರಿಕೆಗೆ ಪ್ರಯತ್ನವನ್ನೂ ನಾವು ಮಾಡುವುದಿಲ್ಲ. ಅಂಥ ಹಲವರಿಗೆ S V Delosನ ಮಂದಿ ಅಪವಾದ. ಸದಾ ಹಣ, ಪ್ರತಿಷ್ಠೆಗಳ ಹಿಂದೆ ಓಡುತ್ತಿರುವ ಜಗತ್ತಿನಿಂದ ದೂರವಾಗಿ ದೂರ ಕಡಲಿನಲ್ಲಿ ಕಣ್ಮರೆಯಾಗುವ ಇವರು ನಿಜಕ್ಕೂ ಗ್ರೇಟ್.
ಕಾರ್ತಿಕ್ ಎನ್.