Advertisement
ಒಂದು ದಿನ ಬೆಳಗಿನ ಜಾವ ನದಿಯಿಂದ ಒಂದು ಹಾಡು ತೇಲಿ ಬಂದಿತು. ಮಿನುವಾಂಗ್ ಅದನ್ನು ಆಲಿಸಿದಳು. “ಪ್ರೀತಿ ತಂಗಾಳಿಯಲಿ ಸಾಗಿ ಬಂದಿದೆ, ಅದನು ಕೇಳಿ ಚಂದಿರನ ಮುಖ ಅರಳಿದೆ’ ಎಂಬ ಆ ಹಾಡು ಕಿವಿಗೆ ಬಿದ್ದ ಕೂಡಲೇ ಮಿನುವಾಂಗ್ ಸಂತೋಷದಿಂದ ಕುಣಿದಾಡತೊಡಗಿದಳು. ಅದನ್ನು ಕಂಡು ಧನಿಕ ಆಶ್ಚರ್ಯದಿಂದ ಮಗಳ ಬಳಿಗೆ ಬಂದ, “”ಏನಾಗಿದೆ ಮಗಳೇ, ಯಾಕೆ ಇಷ್ಟೊಂದು ಸಂತೋಷಗೊಂಡಿರುವೆ?” ಎಂದು ಕೇಳಿದ. ಮಿನುವಾಂಗ್, “”ಸಂತೋಷವಾಗದೆ ಇರುತ್ತದೆಯೆ? ಇಷ್ಟು ದಿನಗಳಿಂದ ನನ್ನ ಮನಸ್ಸನ್ನು ಸಂತೋಷಪಡಿಸುವ ಮೋಹಕವಾದ ಸಂಗೀತದ ಧ್ವನಿಗಾಗಿ ಕಾದು ಕುಳಿತಿದ್ದೆ. ದೇವರ ದಯೆಯಿಂದ ಅದು ನನಗೀಗ ದೊರಕಿದೆ. ನನ್ನ ಕೈಹಿಡಿಯುವವನು ಇಲ್ಲಿಯೇ ಸನಿಹದಲ್ಲಿದ್ದಾನೆಂದು ತೋರುತ್ತಿದೆ” ಎಂದಳು.
Related Articles
Advertisement
ಯುವಕನಿಗೆ ಆಶ್ಚರ್ಯವಾಯಿತು. “”ನನ್ನನ್ನೇಕೆ ಸುಮ್ಮನೆ ತಮಾಷೆ ಮಾಡುತ್ತೀರಾ? ದುಡಿಯದೆ ನನ್ನನ್ನು ಸಾಕಲು ಧನಿಕರಿಗೇನು ಮಕ್ಕಳಿಲ್ಲವೆ? ಸುಮ್ಮನೆ ಹೋಗಿ ಇಲ್ಲಿಂದ” ಎಂದ. ಆದರೆ ಸೇವಕರು ಬಿಡಲಿಲ್ಲ. “”ನಮ್ಮ ಜೊತೆಗೆ ನೀನು ಧನಿಕರ ಮನೆಗೆ ಬರಲೇಬೇಕು. ನಾವು ಹೇಳುವುದು ಸುಳ್ಳಲ್ಲ. ಅವರ ಮಗಳು ನಿನ್ನ ಹಾಡು ಕೇಳಿದ ಮೇಲೆ ನಿನ್ನನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದು ಕುಳಿತಿದ್ದಾಳೆ. ಗೌರವದಿಂದ ಆ ಹಾಡುಗಾರನನ್ನು ಕರೆದುಕೊಂಡು ಬನ್ನಿ ಎಂದು ಒಡೆಯರು ನಮ್ಮನ್ನಿಲ್ಲಿಗೆ ಕಳುಹಿಸಿದ್ದಾರೆ. ನೀನೀಗ ಬರದಿದ್ದರೆ ಬಲವಂತವಾಗಿ ಹೊತ್ತುಕೊಂಡು ಹೋಗುತ್ತೇವೆ” ಎಂದರು.
ಸೇವಕರ ಜೊತೆಯಲ್ಲಿ ಯುವಕ ಧನಿಕನ ಮನೆಗೆ ಹೊರಟ. ಅವರು ಅವನ ದೇಹಕ್ಕೆ ಇಡೀ ಬಟ್ಟೆಯೊಂದನ್ನು ಮುಸುಕು ಹಾಕಿ ಕರೆದುಕೊಂಡು ಹೋಗಿ ಮಿನುವಾಂಗ್ ಮುಂದೆ ನಿಲ್ಲಿಸಿದರು. “”ಒಡತಿ, ನೀವು ಮೆಚ್ಚಿಕೊಂಡು ಮದುವೆಯಾಗಲು ಬಯಸಿದ ಯುವಕನನ್ನು ಕರೆದುಕೊಂಡು ಬಂದಿದ್ದೇವೆ” ಎಂದರು. ಮಿನುವಾಂಗ್ ಯುವಕನೊಂದಿಗೆ ತಾನು ಇಷ್ಟಪಟ್ಟ ಹಾಡನ್ನು ಹಾಡುವಂತೆ ಹೇಳಿದಳು. ಯುವಕ ಹಾಡಿದ. “”ನಿಜವಾಗಿಯೂ ಇವನು ನನ್ನ ಗಂಡನಾಗಬೇಕು. ಮನ ಸೆಳೆಯುವ ಕಂಠದಿಂದ ನನ್ನನ್ನು ಒಲಿಸಿಕೊಂಡ ಆ ಸುಂದರಾಂಗನ ದೇಹವನ್ನು ಯಾಕೆ ಬಟ್ಟೆಯಿಂದ ಮುಚ್ಚಿದ್ದೀರಿ? ಅದನ್ನು ತೆಗೆದು ಅವನ ಮುಖವನ್ನು ನನಗೆ ತೋರಿಸಿ” ಎಂದು ಕೂಗಿದಳು.
ಸೇವಕರು ಮೀನುಗಾರ ಯುವಕನನ್ನು ಮುಚ್ಚಿದ್ದ ಬಟ್ಟೆಯನ್ನು ಸರಿಸಿದರು. ಆದರೆ ಯುವಕನ ಮುಖ ನೋಡಿದ ಕೂಡಲೇ ಮಿನುವಾಂಗ್ ಕಿಟಾರನೆ ಕಿರುಚಿ ಕೆಳಗೆ ಬಿದ್ದು ಎಚ್ಚರ ತಪ್ಪಿದಳು. ಶೈತ್ಯೋಪಚಾರಗಳನ್ನು ಮಾಡಿದ ಬಳಿಕ ಕಣ್ತೆರೆದು, “”ದೇವರೇ, ನಾನು ಕಂಠ ಎಷ್ಟು ಚೆನ್ನಾಗಿದೆ ಎಂದುಕೊಂಡು ಇವನ ಮುಖ ನೋಡದೆ ಮದುವೆಯಾಗಲು ನಿರ್ಧರಿಸಿಬಿಟ್ಟೆ. ಕುರೂಪಿಯಾದ ಈ ಅಸಹ್ಯ ವ್ಯಕ್ತಿಯನ್ನು ಕೈಹಿಡಿದರೆ ಸುಖವಾಗಿರಲು ಸಾಧ್ಯವೇ ಇಲ್ಲ. ದುರ್ಗಂಧದಿಂದ ಮೂಗು ಮುಚ್ಚಿಕೊಳ್ಳಬೇಕಾಗಿದೆ. ನನಗೆ ಇಂತಹ ನಿರಾಸೆಯುಂಟು ಮಾಡಿದ ಅವನನ್ನು ಅರೆಕ್ಷಣ ಕೂಡ ನನ್ನ ಕಣ್ಮುಂದೆ ಇರಲು ಬಿಡಬೇಡಿ. ಕೂಡಲೇ ಇಲ್ಲಿಂದ ಕರೆದುಕೊಂಡು ಹೋಗಿ ನದಿ ತೀರದಲ್ಲಿ ಬಿಟ್ಟುಬನ್ನಿ” ಎಂದು ಸೇವಕರಿಗೆ ಹೇಳಿದಳು. ಸೇವಕರು ಅವನನ್ನು ಮರಳಿ ಕರೆತರುವಾಗ, “”ಇಂತಹ ಮುಖ ಹೊತ್ತಿರುವ ನಿನಗೆ ಈ ಜನ್ಮದಲ್ಲಿ ಯಾವ ಯುವತಿಯೊಂದಿಗೆ ಕೂಡ ಮದುವೆಯಾಗಲು ಸಾಧ್ಯವಿಲ್ಲ. ಇನ್ನೊಂದು ಜನ್ಮವೆಂಬುದು ಬಂದರೆ ಸಾಧ್ಯವಾಗಬಹುದು ಅಷ್ಟೇ” ಎಂದು ಹೇಳಿ ನದಿತೀರಕ್ಕೆ ತಲುಪಿಸಿದರು.
ಈ ಘಟನೆಯಿಂದ ಮೀನುಗಾರ ಯುವಕನಿಗೆ ತುಂಬ ದುಃಖವಾಯಿತು. ತನ್ನ ಪಾಡಿಗೆ ಖುಷಿಯಾಗಿ ಹಾಡುತ್ತ ಮೀನು ಹಿಡಿದುಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದ ಅವನು ತನಗೆ ಉಂಟಾದ ಅವಮಾನದಿಂದ ನೊಂದುಕೊಂಡ. ಆ ಕ್ಷಣದಿಂದಲೇ ಅವನಿಗೆ ಬದುಕುವುದು ಬೇಡ ಅನಿಸಿತು. ದುಡಿಯುವುದನ್ನು ನಿಲ್ಲಿಸಿದ. ಅನ್ನಾಹಾರಗಳನ್ನು ತ್ಯಜಿಸಿದ. ಕೃಶನಾಗಿ ಹಾಸಿಗೆ ಹಿಡಿದು ಒಂದು ದಿನ ಸತ್ತುಹೋದ. ಸಂಬಂಧಿಕರು ಅವನ ಎದೆಯ ಮೇಲೆ ಒಂದು ಗುಲಾಬಿಯನ್ನು ತಂದಿಟ್ಟರು. ಶವವನ್ನು ಹೂಳಲು ತೆಗೆದುಕೊಂಡು ಹೋಗುವಾಗ ಒಂದು ವಿಚಿತ್ರವು ಕಾಣಿಸಿತು. ಎದೆಯ ಮೇಲಿದ್ದ ಗುಲಾಬಿಯು ಒಂದು ಸ್ಫಟಿಕದ ಪದಕವಾಗಿ ಬದಲಾವಣೆ ಹೊಂದಿತ್ತು. ಅವರು ಪದಕವನ್ನು ಹಾಗೆಯೇ ತೆಗೆದಿಟ್ಟು ನದಿಯ ತೀರಕ್ಕೆ ತೆಗೆದುಕೊಂಡು ಹೋದರು. ದಿನವೂ ಅವನು ಮೀನು ಹಿಡಿಯುತ್ತಿದ್ದ ಸ್ಥಳದಲ್ಲಿ ಪದಕವನ್ನು ನೀರಿನೊಳಗೆ ಸೇರಿಸಿ ಮನೆಗೆ ಮರಳಿದರು.
ತನ್ನ ಮನಸ್ಸನ್ನು ಹಾಡಿನಿಂದ ಗೆದ್ದ ಯುವಕ ಸುಂದರನಾಗಿರಲಿಲ್ಲ ಎಂಬ ಹತಾಶೆಯಿಂದ ವ್ಯಥೆಗೊಂಡ ಮಿನುವಾಂಗ್ ತುಂಬ ದುಃಖಪಟ್ಟಳು. ಅವಳಿಗೆ ಊಟ ಸೇರಲಿಲ್ಲ, ನಿದ್ರೆ ಬರಲಿಲ್ಲ. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಧನಿಕನು ಹಲವಾರು ವೈದ್ಯೋಪಚಾರಗಳನ್ನು ಮಾಡಿಸಿದರೂ ಮೊದಲಿನಂತಾಗಲಿಲ್ಲ. ಆಗ ಒಬ್ಬ ಫಕೀರ ಅವನ ಮನೆಗೆ ಬಂದ. ಮಿನುವಾಂಗ್ ಅನುಭವಿಸುತ್ತಿರುವ ದುಃಖವನ್ನು ಕಂಡು ಧನಿಕನೊಂದಿಗೆ, “”ನಿನ್ನ ಮಗಳಿಗೆ ನೆಮ್ಮದಿ ಸಿಗಲು ಒಂದೇ ಒಂದು ಉಪಾಯವಿದೆ. ಇಲ್ಲಿರುವ ನದಿಯಲ್ಲಿ ಒಂದು ಸ್ಫಟಿಕದ ಪದಕವಿದೆ. ಅದನ್ನು ಹುಡುಕಿಸಿ ತಂದು ಅವಳ ಕೈಗೆ ಕೊಡು” ಎಂದು ಹೇಳಿದ. ಆ ಮಾತನ್ನು ಅಲ್ಲಗಳೆಯದೆ ಧನಿಕ ಮುಳುಗುಗಾರರನ್ನು ಕರೆಸಿದ. ನದಿಯಿಂದ ಪದಕವನ್ನು ಹುಡುಕಿ ತರುವಂತೆ ತಿಳಿಸಿದ.
ಮುಳುಗುಗಾರರು ತಂದುಕೊಟ್ಟ ಪದಕ ಮಿನುವಾಂಗ್ ಕೈ ಸೇರಿತು. ಅವಳು ಮುಟ್ಟಿದ ಕೂಡಲೇ ಪದಕವು, “”ಪ್ರೀತಿ ತಂಗಾಳಿಯಲಿ ತೇಲಿ ಬಂದಿದೆ. ಅದನು ಕೇಳಿ ಚಂದಿರನ ಮುಖ ಅರಳಿದೆ” ಎಂದು ಹಾಡತೊಡಗಿತು. ಮಿನುವಾಂಗ್ ಅಚ್ಚರಿಯಿಂದ, “”ಇದೇ ಹಾಡು ಕೇಳಿ ನಾನು ಜೀವನವನ್ನು ಹಾಳು ಮಾಡಿಕೊಂಡೆ. ನೀನು ಯಾರು ಮತ್ತೆ ನನಗೆ ತೊಂದರೆ ಕೊಡಲು ಬಂದಿರುವೆ?” ಎಂದು ಕೇಳಿದಳು.
ಆಗ ಪದಕವು ಕರಗಿ ಒಬ್ಬ ಸುಂದರನಾದ ರಾಜಕುಮಾರ ಪ್ರತ್ಯಕ್ಷನಾದ. “”ನಾನು ಒಬ್ಬ ಫಕೀರನಿಗೆ ತೊಂದರೆ ಕೊಟ್ಟೆ. ಅವನಿಂದ ಶಾಪಗ್ರಸ್ಥನಾಗಿ ಕುರೂಪಿಯಾದ ಮೀನುಗಾರನ ಜನ್ಮ ಪಡೆದೆ. ನನ್ನನ್ನು ಪ್ರೀತಿಸಿದವಳಿಂದ ತಿರಸ್ಕೃತನಾಗಿ ಜೀವವಿಲ್ಲದ ವಸ್ತುವಿನ ಜನ್ಮ ಪಡೆಯಬೇಕು, ಮರಳಿ ಅವಳ ಬಳಿಗೆ ಹೋದಾಗ ಮೊದಲಿನ ಜನ್ಮ ಬರುವುದೆಂಬ ಪರಿಹಾರವನ್ನೂ ಫಕೀರನಿಂದ ತಿಳಿದುಕೊಂಡಿದ್ದೆ. ಈಗ ನಾನು ಹಿಂದಿನ ಜನ್ಮ ಹೊಂದಿ ನಿನ್ನ ಮುಂದಿದ್ದೇನೆ. ನನ್ನ ಕೈಹಿಡಿದು ನನ್ನೊಂದಿಗೆ ನಮ್ಮ ರಾಜ್ಯಕ್ಕೆ ಬಾ” ಎಂದು ಅವನು ಹೇಳಿದ. ಮಿನುವಾಂಗ್ ಸಂತೋಷದಿಂದ ರಾಜಕುಮಾರನನ್ನು ಮದುವೆಯಾಗಿ, ಅವನ ರಾಜ್ಯಕ್ಕೆ ತೆರಳಿದಳು.
ಪ. ರಾಮಕೃಷ್ಣ ಶಾಸ್ತ್ರಿ