ಬೆಂಗಳೂರು: ಸಾರಿಗೆ ನಿಯಮಗಳ ಉಲ್ಲಂಘನೆ ವಿರುದ್ಧದ “ದಂಡ ಪ್ರಯೋಗ’ ರಾಜ್ಯದಲ್ಲಿ ಈಗ ಅಕ್ಷರಶಃ ಗೊಂದಲದ ಗೂಡಾಗಿ ಪರಿಣಮಿಸಿದೆ. ಒಂದೆಡೆ ಸರ್ಕಾರ, ಗುಜರಾತ್ ಮಾದರಿ ಅನುಸರಿಸಲು ಉದ್ದೇಶಿಸಿದ್ದು, ಅದು ಜಾರಿ ಯಾಗುವವರೆಗೂ ಈ ಹಿಂದಿನ ದರ ಮುಂದು ವರಿಯಲಿದೆ ಎಂದು ಹೇಳುತ್ತಿದೆ.
ಮತ್ತೂಂದೆಡೆ, ಈಗಾಗಲೇ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯ್ದೆಗೆ ಅಧಿಸೂಚನೆ ಹೊರಡಿಸಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಭಾರೀ ದಂಡ ವಿಧಿಸುತ್ತಿದೆ. ಇದರಿಂದ “ರಾಜ್ಯದಲ್ಲಿ ಪ್ರಸ್ತುತ ಇರುವ ದಂಡದ ಪ್ರಮಾಣ ಯಾವುದು?’ ಎನ್ನುವುದರ ಬಗ್ಗೆ ಸ್ವತಃ ದಂಡ ವಿಧಿಸುವವರು ಹಾಗೂ ಅದಕ್ಕೆ ಗುರಿಯಾಗುವವರಿಬ್ಬರಿಗೂ ಸ್ಪಷ್ಟತೆ ಇಲ್ಲವಾಗಿದೆ.
ಮೃದು ಧೋರಣೆಗೆ ಸೂಚನೆ: ಗುಜರಾತಿನಲ್ಲಿ ಕೆಲವು ಗಂಭೀರ ಉಲ್ಲಂಘನೆ ಪ್ರಕರಣ ಹೊರತುಪಡಿಸಿ, ಸಾಮಾನ್ಯ ನಿಯಮಗಳ ಉಲ್ಲಂಘನೆಗೆ ಕೇಂದ್ರ ನಿಗದಿಪಡಿಸಿರುವ ದಂಡವನ್ನು ಶೇ.50 ಪರಿಷ್ಕರಿಸಿದೆ. ಇದೇ ಮಾದರಿ ಅನುಸರಿಸಲು ರಾಜ್ಯ ಸರ್ಕಾರ ಈಗ ಮುಂದಾಗಿದ್ದು, ಈ ನಿಟ್ಟಿನಲ್ಲಿ ಪರಿಷ್ಕೃತ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ.
ಆದರೆ, ತಿದ್ದುಪಡಿ ಮಾಡಲಾದ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಕಾನೂನು ಇಲಾಖೆಯನ್ನು ಕೇಳಲು ಸಾರಿಗೆ ಇಲಾಖೆ ಮುಂದಾಗಿದೆ. ಇದು ಅಂತಿಮಗೊಳ್ಳುವವರೆಗೆ “ದಂಡ ಪ್ರಯೋಗ’ದಲ್ಲಿ ತುಸು ಮೃದು ಧೋರಣೆ ಅನುಸರಿಸುವಂತೆ ಸಚಿವರಿಂದ ಸೂಚನೆ ಬಂದಿದೆ ಎಂದು ಸಾರಿಗೆ ಇಲಾಖೆ ಉನ್ನತ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪರಿಷ್ಕೃತ ದರಕ್ಕೆ ಅಧಿಸೂಚನೆ ಹೊರಡಿಸುವವರೆಗೂ ಮೌಖೀಕವಾಗಿಯೇ ಸೂಚಿಸಬೇಕಾಗುತ್ತದೆ. ಇಲ್ಲವಾದರೆ ಈಗಿರುವ ಆದೇಶ ಹಿಂಪಡೆದು, 3-4 ದಿನಗಳ ಮಟ್ಟಿಗೆ ಮತ್ತೂಂದು ಆದೇಶ ಹೊರಡಿಸಬೇಕಾಗುತ್ತದೆ. ತದನಂತರ ಇನ್ನೊಂದು ಆದೇಶ ನೀಡಬೇಕಾಗುತ್ತದೆ. ಆಗ ಅದು ಇನ್ನಷ್ಟು ಗೊಂದಲಗಳ ಗೂಡು ಆಗಲಿದೆ. ಹೀಗಾಗಿ ಮೌಖೀಕವಾಗಿ ಸೂಚನೆ ನೀಡಲಾಗಿದೆ ಎಂದೂ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ತಲುಪದ ಆದೇಶ; ದಂಡ ಸಂಗ್ರಹ ದುಪ್ಪಟ್ಟು!: ಆದರೆ, ಈ ಮೌಖೀಕ ಆದೇಶ ಇನ್ನೂ ಸಂಚಾರ ಪೊಲೀಸರನ್ನು ತಲುಪಿಲ್ಲ. ಹೀಗಾಗಿ ಶನಿವಾರವೂ ಭಾರೀ ಮೊತ್ತದ ದಂಡ ವಿಧಿಸುತ್ತಿರುವುದು ಹಲವು ಕಡೆ ಕಂಡುಬಂದಿತು.”ನಮಗೆ ಯಾವುದೇ ಲಿಖೀತ ಅಥವಾ ಮೌಖೀಕ ಆದೇಶ ಬಂದಿಲ್ಲ’ ಎಂದೂ ಕೆಲ ಸಂಚಾರ ಪೊಲೀಸ್ ಅಧಿಕಾರಿಗಳು
“ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಈ ಗೊಂದಲದ ನಡುವೆ ವಾಹನ ಸವಾರರು ಪೇಚೆಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಂಡದ ಮೊತ್ತ ಕಡಿಮೆ ಮಾಡುವುದಾಗಿ 3 ದಿನಗಳ ಹಿಂದೆಯೇ ತಿಳಿಸಿದ್ದು ವಾಹನ ಸವಾರರು ಪರಿಷ್ಕೃತ ದರದ ನಿರೀಕ್ಷೆಯಲ್ಲಿದ್ದಾರೆ.