ಬೆಂಗಳೂರು: ಗಣೇಶಮೂರ್ತಿ ವಿಸರ್ಜನೆ ವೇಳೆ ನೃತ್ಯ ಮಾಡುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಒಬ್ಬ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಡುಗೋಡಿಯ ಎ.ಕೆ.ಕಾಲೋನಿ ನಿವಾಸಿ ಶ್ರೀನಿವಾಸ (25) ಕೊಲೆಯಾದ ಯುವಕ. ಘಟನೆ ವೇಳೆ ಯುವಕನ ತಾಯಿ ಇಂದಿರಾ ಸೇರಿ ಇಬ್ಬರಿಗೆ ಗಾಯಗಳಾಗಿವೆ.
ಕೃತ್ಯ ಎಸಗಿದ ಶ್ರೀನಿವಾಸ, ವಿನಯ್, ಅಲೆಕ್ಸ್, ರಂಜಿತ್ ಹಾಗೂ ಪ್ರಶಾಂತ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಶ್ರೀ
ನಿವಾಸ್ ಕೊರಿಯರ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ತಿಂಗಳು ಎ.ಕೆ.ಕಾಲೋನಿಯಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಶ್ರೀನಿವಾಸ್, ವಿನಯ್ ಹಾಗೂ ಇತರೆ ಆರೋಪಿಗಳ ನಡುವೆ ಗಲಾಟೆ ನಡೆದಿತ್ತು. ಭಾನುವಾರ ರಾತ್ರಿ ಎ.ಕೆ.ಕಾಲೋನಿಯಲ್ಲಿ ಮತ್ತೂಂದು ಗಣೇಶ ವಿಸರ್ಜನೆ ಮೆರವಣಿಗೆ ನಡೆಯುತ್ತಿತ್ತು. ಇದೇ ವೇಳೆ ಆರೋಪಿಗಳು ಶ್ರೀನಿವಾಸ್ ಮನೆ ಮುಂಭಾಗ ಬಂದು ನೃತ್ಯ ಮಾಡಿದ್ದಾರೆ. ಆಗ ಶ್ರೀನಿವಾಸ್ ತಮ್ಮ ಮನೆ ಮುಂದೆ ಯಾಕೆ ಡ್ಯಾನ್ಸ್ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾನೆ.
ಅದು ವಿಕೋಪಕ್ಕೆ ಹೋಗಿದೆ. ಆಗ ಶ್ರೀನಿವಾಸ್ ಕೈಗೆ ಸಿಕ್ಕ ವಸ್ತುವಿನಿಂದ ಆರೋಪಿಗಳಿಗೆ ಹೊಡೆದಿದ್ದಾನೆ. ಬಳಿಕ ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು. ಕೆಲ ಸಮಯದ ನಂತರ ವಿನಯ್, ರಂಜಿತ್ ಇತರೆ ಆರೋಪಿಗಳು ಮಾರಕಾಸ್ತ್ರಗಳ ಸಮೇತ ಶ್ರೀನಿವಾಸ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿ ನಮಗೇ ಡ್ಯಾನ್ಸ್ ಮಾಡಬೇಡ ಎನ್ನುತ್ತೀಯಾ ಎಂದು ಕೂಗಾಡಿದ್ದಾರೆ. ಆಗ ಮನೆಯಿಂದ ಹೊರಗೆ ಬಂದ ಶ್ರೀನಿವಾಸ ಜತೆಗೆ ಜಗಳವಾಡಿ ಡ್ರ್ಯಾಗರ್‌ನಿಂದ ಶ್ರೀನಿವಾಸ್ ಹೊಟ್ಟೆಗೆ ಇರಿದಿದ್ದಾರೆ. ಆ ವೇಳೆ ಶ್ರೀನಿವಾಸ ತಾಯಿ ಇಂದಿರಾ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದಾಗ ಅವರಿಗೂ ಇರಿದಿದ್ದಾರೆ. ತಕ್ಷಣ ಶ್ರೀನಿವಾಸನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು. ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.