Advertisement

Christmas ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

11:43 PM Dec 25, 2023 | Team Udayavani |

ಮಂಗಳೂರು: ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್ಮಸ್‌ ಅ‌ನ್ನು ಸೋಮವಾರ ಕರಾವಳಿಯಾದ್ಯಂತ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.

Advertisement

ಮುಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಕ್ರಿಸ್ಮಸ್‌ ಈವ್‌ನ ಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್‌ನಲ್ಲಿ ರವಿವಾರ ರಾತ್ರಿ ನೆರವೇರಿಸಿದರೆ, ಕ್ರಿಸ್ಮಸ್‌ ಪೂಜೆಯನ್ನು ತಣ್ಣೀರುಬಾವಿ ಫಾತಿಮಾ ಚರ್ಚ್‌ನಲ್ಲಿ ಸೋಮವಾರ ಮುಂಜಾನೆ ನಡೆಸಿದರು.

ಧರ್ಮಾಧ್ಯಕ್ಷರು ತಮ್ಮ ಪ್ರವಚನದಲ್ಲಿ ಕ್ರಿಸ್ತರ ಜನನದ ಬಗ್ಗೆ ವಿವರಿಸಿ, ಏಸು ಕ್ರಿಸ್ತರು ಬಡತನದ ಸಂಕೇತ ಗೋದಲಿಯಲ್ಲಿ ಜನಿಸಿ, ಬಡವರ, ರೋಗಸ್ತರ, ಸಮಾಜ ದಲ್ಲಿ ಅವಗಣಿಸಲ್ಪಟ್ಟ ಜನರ ಬಗ್ಗೆ ತನ್ನ ಕಾಳಜಿಯನ್ನು ತೋರಿಸಿದರು ಎಂದರು.

ಕ್ರಿಸ್ಮಸ್‌ ಪೂಜೆ ವೇಳೆ ಚರ್ಚಿನ ಧರ್ಮಗುರು ವಂ| ಲಾರೆನ್ಸ್‌ ಡಿ’ಸೋಜಾ, ವಂ| ಗೋಮ್ಸ್‌, ಚರ್ಚಿನ ಪಾಲನ ಸಮಿತಿ ಉಪಾಧ್ಯಕ್ಷ ಡಾರ್ಮಿನ ಕುವೆಲ್ಹೊ, ಕಾರ್ಯದರ್ಶಿ ತೆಲ್ಮಾ ಡಿ’ಸೋಜಾ ಉಪಸ್ಥಿತರಿದ್ದರು.

ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಪ್ರಯುಕ್ತ ಬಲಿ ಪೂಜೆ ನೆರವೇರಿತು. ಕ್ರೈಸ್ತ ಬಾಂಧವರು ಪರಸ್ಪರ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡು ಹಬ್ಬವನ್ನು ಸಂಭ್ರಮಿಸಿದರು. ವಿದೇಶಗಳಲ್ಲಿರುವ ಕುಟುಂಬದ ಸದಸ್ಯರು ಹಬ್ಬಕ್ಕೂ ಮುಂಚಿತವಾಗಿಯೇ ಊರಿಗೆ ಆಗಮಿಸಿದ್ದು ಮನೆಮಂದಿಯೊಂದಿಗೆ ಸೇರಿ ಹಬ್ಬ ಆಚರಿಸಿದರು. ಮನೆಗಳ ಮುಂಭಾಗ ದಲ್ಲಿ ನಕ್ಷತ್ರಗಳನ್ನು ತೂಗು ಹಾಕಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್‌ ದೀಪಗಳು ಝಗಮಗಿಸುತ್ತಿದ್ದವು.

Advertisement

ಚರ್ಚ್‌ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿಗಳು ನಿರ್ಮಾಣಗೊಂಡಿದ್ದವು. ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿ ಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಆರಾಧಿಸಲಾಯಿತು. ಕ್ರಿಸ್ಮಸ್‌ ಸಂದರ್ಭದ ವಿಶೇಷ ಗೀತೆಗಳ ಕ್ಯಾರಲ್ಸ್‌ ಗಾಯನ ನಡೆಯಿತು.

ಉಡುಪಿ: ಕ್ರೈಸ್ತ ಬಾಂಧವರ ಮನೆಗಳಲ್ಲಿ ಹಾಗೂ ಚರ್ಚ್‌ ಆವರಣದಲ್ಲಿ ಜಿಲ್ಲೆಯಾದ್ಯಂತ ಸೋಮವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೆರೆಮನೆಯವರು, ಬಂಧು ಮಿತ್ರರೊಡಗೂಡಿ ಹಬ್ಬದೂಟ ಸವಿದರು. ಹಬ್ಬದ ಹಿನ್ನೆಲೆಯಲ್ಲಿ ವಿದ್ಯುದ್ದೀಪದ ಅಲಂಕಾರ, ಗೋದಲಿ ಇತ್ಯಾದಿ ಪ್ರಮುಖ ಆಕರ್ಷಣೆಯಾಗಿತ್ತು.

ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಉಡುಪಿಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು.

ಐಸಿವೈಎಂ ಸಂಘಟನೆಯ ಸದಸ್ಯರು ಆಯಾ ಚರ್ಚ್‌ಗಳ ಮಕ್ಕಳಿಗಾಗಿ ಗೋದಲಿ ನಿರ್ಮಾಣ ಸ್ಪರ್ಧೆ ಆಯೋಜಿಸಿದ್ದು ಇದಕ್ಕಾಗಿ ಮನೆ ಮನೆಗಳಿಗೆ ಭೇಟಿ ನೀಡಿ ಗೋದಲಿ ವೀಕ್ಷಣೆ ಮಾಡುವುದರೊಂದಿಗೆ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next