Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಮಾರಕ ಹೊಡೆತ

09:09 AM Apr 21, 2022 | Team Udayavani |

ದಾಂಡೇಲಿ: ಕೋವಿಡ್‌ ನಂತರದ ದಿನಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಗರಿಗೆದರಿದೆಯಾದರೂ, ಮೊನ್ನೆ ಮೊನ್ನೆ ರ್ಯಾಪ್ಟಿಂಗ್‌ ಸಂದರ್ಭದಲ್ಲಿ ನಡೆದ ಘಟನೆ ಮುಂದಿಟ್ಟುಕೊಂಡು, ಖಾಸಗಿಯಾಗಿ ನಡೆಸುತ್ತಿರುವ ಜಲಸಾಹಸ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವುದು ಪ್ರವಾಸೋದ್ಯಮಕ್ಕೆ ಬಲವಾದ ಹೊಡೆತ ನೀಡಲು ಆರಂಭಿಸಿದೆ.

Advertisement

ಅದೇಷ್ಟೊ ಪ್ರವಾಸಿಗರು ದಾಂಡೇಲಿ, ಜೋಯಿಡಾದ ಪ್ರವಾಸೋದ್ಯಮದ ಸವಿ ಅನುಭವಿಸಲು ಈಗಾಗಲೆ ಮುಂಗಡ ಕಾಯ್ದಿರಿಸಿದ್ದಾರೆ. ಅಂಥವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕಾಏಕಿ ನೀಡಿದ ರ್ಯಾಪ್ಟಿಂಗ್‌ ಸ್ಥಗಿತದಿಂದ ಸಾಕಷ್ಟು ಪ್ರವಾಸಿಗರು ಬರಿಗೈಯಲ್ಲಿ ವಾಪಸ್‌ ಹೋಗಿದ್ದಾರೆ.

ನಿಗದಿತ ದಿನಾಂಕದವರೆಗೆ ಅವಕಾಶ ನೀಡಿ, ಆ ದಿನಗಳವರೆಗೆ ವಿಶೇಷ ಭದ್ರತೆ ಹಾಗೂ ಸಿಸಿ ಕ್ಯಾಮರಾ ಅಳವಡಿಸಿ ರ್ಯಾಪ್ಟಿಂಗಿಗೆ ಅವಕಾಶ ಮಾಡಿಕೊಡಬಹುದಿತ್ತು. ಇಲ್ಲಿ ಜಂಗಲ್‌ ಲಾಡ್ಜ್ಸ್‌ನಿಂದ ನಡೆಯುವ ಲಾಂಗ್‌ ರ್ಯಾಪ್ಟಿಂಗ್‌, ಗ್ರಾಮ ಅರಣ್ಯ ಸಮಿತಿಯಿಂದ ನಡೆಯುವ ಮಿನಿ ರ್ಯಾಪ್ಟಿಂಗಿಗೆ ಅವಕಾಶ ನೀಡಲಾಗಿದೆಯಾದರೂ, ಅದು ಸಹ ಟೆಂಡರ್‌ ಪಡೆದು ಖಾಸಗಿಯವರೆ ನಡೆಸುತ್ತಿರುವುದು ಗಮನಿಸಬೇಕಾದ ಅಂಶ.

ಜಿಲ್ಲಾಧಿಕಾರಿಯವರು ತೆಗೆದುಕೊಂಡ ಏಕಾಏಕಿ ನಿರ್ಧಾರ ಇಡೀ ಪ್ರವಾಸೋದ್ಯಮವನ್ನೆ ಬೆಚ್ಚಿ ಬೀಳಿಸುವಂತೆ ಮಾಡಿದೆ. ಜಿಲ್ಲಾಧಿಕಾರಿಯವರ ಈ ನಡೆ ಬಹಳಷ್ಟು ಜನರ ಮನಸ್ಸಿಗೆ ಬೇಸರ ತಂದೊಡ್ಡಿದೆ.

ಪ್ರವಾಸೋದ್ಯಮದಿಂದ ಖ್ಯಾತಿ: ಕೈಗಾರಿಕಾ ನಗರವಾಗಿ ಗಮನ ಸೆಳೆದಿದ್ದ ದಾಂಡೇಲಿ ಎರಡು ಕೈಗಾರಿಕೆಗಳು ಸ್ಥಗಿತಗೊಂಡ ನಂತರ ಮತ್ತೆ ಪ್ರವಾಸೋದ್ಯಮ ಚಟುವಟಿಕೆಯಿಂದ ಚೇತರಿಕೆ ಕಂಡಿತು. ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳೆದ ಈ ಭಾಗದ ಪ್ರವಾಸೋದ್ಯಮ ಜಾಗತಿಕ ಮಟ್ಟದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಹೋಂ ಸ್ಟೇ, ರೆಸಾರ್ಟ್ಸ್ಗಳು ನಿರ್ಮಾಣವಾಗುವುದರ ಮೂಲಕ ಅನೇಕರಿಗೆ ಉದ್ಯೋಗದಾಸರೆ ದೊರೆತರೆ, ಇನ್ನೂ ಬಹುತೇಕರು ಪ್ರವಾಸಿ ಏಜೆನ್ಸಿಗಳಾಗಿ, ಟೂರ್, ಟ್ರಾವೆಲ್ಸ್‌ ಏಜೆನ್ಸಿಯಾಗಿ ಹೀಗೆ ಪ್ರತ್ಯಕ್ಷ, ಪರೋಕ್ಷವಾಗಿ ಪ್ರವಾಸೋದ್ಯಮದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಆಟೋ, ಟ್ಯಾಕ್ಸಿಗಳಿಂದ ಹಿಡಿದು, ತರಕಾರಿ, ಕಿರಾಣಿ ವರ್ತಕರು ಸಹ ಪ್ರವಾಸೋದ್ಯಮ ಚಟುವಟಿಕೆಯನ್ನೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ.

Advertisement

ಹಾಗೆಯೇ ದಾಂಡೇಲಿ, ಜೋಯಿಡಾ ಭಾಗದ ನಿರುದ್ಯೋಗಿ ಯುವ ಜನತೆಗೆ ಪ್ರವಾಸೋದ್ಯಮ ಇಲಾಖೆಯಡಿ ಮೌಳಂಗಿ, ಗಣೇಶಗುಡಿಯಲ್ಲಿ ರ್ಯಾಪ್ಟಿಂಗ್‌ ತರಬೇತಿ ನೀಡಿ, ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಬಹುದು. ಇದರಿಂದ ಪ್ರವಾಸೋದ್ಯಮದ ಜೊತೆಗೆ ಸ್ಥಳೀಯರಿಗೂ ಆರ್ಥಿಕ ಪ್ರೋತ್ಸಾಹ ನೀಡಿದಂತಾಗುತ್ತದೆ.

ಸಂದೇಶ್‌.ಎಸ್‌.ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next