Advertisement

ಪರಿಚಿತರ ಸಂತೆ, ನೀನೇಕೆ ಒಂಟಿ ನಿಂತೆ?

12:30 AM Jan 23, 2019 | Team Udayavani |

ಹಿಂದೆಲ್ಲಾ ಚಡ್ಡಿ ಬಡ್ಡಿಗಳ ಹಾಗೆ ಸ್ನೇಹಿತರಿರುತ್ತಿದ್ದರು. ಕೆಲವೊಮ್ಮೆ ಅಪ್ಪ- ಅಮ್ಮ, ಅಜ್ಜಿ- ತಾತ, ಮಾವ- ಅತ್ತೆ… ಹೀಗೆ ಒಬ್ಬರಲ್ಲಾ ಅಂದರೆ ಮತ್ತೂಬ್ಬರು ಮನೆಯಲ್ಲಿ ಸ್ನೇಹಿತರ ಸ್ಥಾನವನ್ನು ತುಂಬುತ್ತಿದ್ದರು. ಅವರ ಬಳಿ ನಾವು ನೋವು ನಲಿವನ್ನು ಹಂಚಿಕೊಳ್ಳಬಹುದಿತ್ತು. ಪರಿಹಾರ ಸಿಗದಿದ್ದರೂ ಮನಸ್ಸಿನ ಭಾರ ಹಗುರಾಗುತ್ತಿತ್ತು. ಈಗ…

Advertisement

ಹಬ್ಬಕ್ಕೆ ಸೀರೆ ಕೊಳ್ಳಲು ಅಂಗಡಿಗೆ ಹೋದಾಗ ಗೆಳತಿ ರಮಾ ಸಿಕ್ಕಿದ್ದಳು. ನಾವಿಬ್ಬರೂ ಒಂದೇ ಸ್ಕೂಲಿನಲ್ಲಿ ಓದಿದ ಬಾಲ್ಯದ ಗೆಳತಿಯರು. ಅವಳನ್ನು ನೋಡಿ ಅದೆಷ್ಟೋ ದಿನಗಳಾಗಿದ್ದವು. ಅಷ್ಟು ವರ್ಷಗಳ ನಂತರ ಸಿಕ್ಕರೂ “ಮತ್ತೆ…?’, “ಇನ್ನೇನು…?’, “ಆಮೇಲೆ…?’ ಎನ್ನುವ ಮಾತುಗಳೇ ನಮ್ಮಿಬ್ಬರ ಮಾತಿನ ನಡುವೆ ಹೆಚ್ಚಾಗಿ ಮುಜುಗರವನ್ನುಂಟು ಮಾಡಿತು. ಇನ್ನೂ ಸ್ವಲ್ಪ ಹೊತ್ತು ನಿಂತರೆ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುವುದು ಬಿಟ್ಟು ಇನ್ನೇನೂ ಬಾಕಿ ಇಲ್ಲ ಎನ್ನಿಸಿ ಉಭಯ ಕುಶಲೋಪರಿಯ ನಂತರ ಬೀಳ್ಕೊಟ್ಟೆವು.   

ಮನೆಗೆ ಬಂದ ನಂತರ ಅಯ್ಯೋ ಹೀಗೇಕಾಯಿತು? ಮೊದಲೆಲ್ಲಾ ಗಂಟೆಗಟ್ಟಲೆ ಹರಟೆ ಹೊಡೆಯುತ್ತಿದ್ದ ನಾವು ಹೀಗೇಕಾದೆವು? ನಾಲ್ಕು ವರ್ಷದ ಹಿಂದೆ ಬಾಣಂತನಕ್ಕೆಂದು ಅಮ್ಮನ ಮನೆಗೆ ಹೋಗಿದ್ದಾಗ ಸಿಕ್ಕಿದ್ದ ರಮಾಳೊಟ್ಟಿಗೆ ಸಂಜೆ ಸೂರ್ಯ ಮುಳುಗುವವರೆಗೆ ಮಾತನಾಡಿದರೂ ಮುಗಿಯದಷ್ಟು ಮಾತಿತ್ತು. ವಾರಕ್ಕೆ ಎರಡು ಬಾರಿ ಫೋನ್‌ ಮಾಡಿದರೂ ಮೊಬೈಲ್‌ ಕರೆನ್ಸಿ ಮುಖ ನೋಡಿ, “ಹಾಳಾದ್ದು’ ಎಂದು ಬೈದುಕೊಂಡು ಫೋನಿಡುತ್ತಿದ್ದೆವು. ಗಂಡ, ಮಕ್ಕಳು, ಅತ್ತೆಮಾವ, ಹೊಸದಾಗಿ ಕೊಂಡ ಸೀರೆ, ಅದಕ್ಕೊಪ್ಪುವ ರವಿಕೆ, ಕ್ರಿಕೆಟ್ಟು, ರಾಜಕೀಯ, ಪಕ್ಕದ ಮನೆಯವರ ನಾಯಿಯಿಂದ ಹಿಡಿದು ಎಲ್ಲದರ ಬಗ್ಗೆ ನಮ್ಮ ಮಾತು ಇರುತ್ತಿತ್ತು. ಆದರೆ, ಇತ್ತೀಚೆಗೆ ಅವಳೂ ಫೋನ್‌ ಮಾಡಿಲ್ಲ, ನಾನು ಕೂಡ. ಯಾಕಿಗೆ? ಎಂದು ಯೋಚಿಸುತ್ತಲೇ ಇತ್ತು ಮನಸ್ಸು. ಆಗ ಅರಿವಿಗೆ ಬಂದದ್ದು ಈಗೀಗ ನಾವು ಸಂಪರ್ಕದಲ್ಲಿರುವುದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಎಂದು.

ಸಾಮಾನ್ಯವಾಗಿ ರಮಾ ತನ್ನೆಲ್ಲಾ ಜೀವನದ ಆಗುಹೋಗುಗಳನ್ನು, ಅಭಿಪ್ರಾಯಗಳನ್ನು ಫೇಸ್‌ಬುಕ್‌, ಇನ್‌ಸ್ಟಗ್ರಾಂನಲ್ಲಿ ಹಾಕುತ್ತಾಳೆ. ನಾನು ಕೂಡ ಅದಕ್ಕೆ ಲೈಕು, ಕಮೆಂಟು ಮಾಡುತ್ತೇನೆ. ವಿಷಯಗಳನ್ನು ಅಲ್ಲಿಯೇ ಚರ್ಚೆ ಕೂಡ ಮಾಡುತ್ತೇವೆ. ಕೆಲವೊಮ್ಮೆ ಚರ್ಚೆ ವಾದವಿವಾದಗಳಿಗೂ ಕಾರಣವಾಗುತ್ತವೆ. ನಗಿಸುತ್ತವೆ, ಬೇಸರ ತರಿಸುತ್ತವೆ ಕೂಡ. ಹಾಗಾಗಿ ನಮ್ಮಿಬ್ಬರ ನಡುವೆ ಮಾತನಾಡಲು ಇನ್ನೇನೂ ಉಳಿದಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮುಖ ಕಾಣದ ಮುಖಪುಸ್ತಕದಲ್ಲಿ, ಧ್ವನಿ ಕೇಳದ ಇನ್‌ಸ್ಟಗ್ರಾಂ ಗೆಳತಿಯರಾಗಿದ್ದೇವೆ. ಎದುರಿಗೆ ಬಂದರೆ ಮುಖಮುಖ ನೋಡಿಕೊಳ್ಳುತ್ತೇವೆ. ಸಾಮಾಜಿಕ ಜಾಲತಾಣವೆಂಬ ಪ್ರಪಂಚದಲ್ಲಿ ಮಾತ್ರ ಪರಿಚಿತರಾಗಿ, ನಿಜ ಜಗತ್ತಿನಲ್ಲಿ ಅಪರಿಚಿತರಾಗಿಯೇ ಉಳಿದುಬಿಡುತ್ತೇವೆ. ಆಗಂತುಕರ ಸಂತೆಯೊಳಗೆ ಒಂಟಿ ಜೀವನ ನಡೆಸುತ್ತಾ ನಮ್ಮೊಳಗನ್ನು ಹೇಳಿಕೊಳ್ಳದೆ ಏಕಾಂಗಿಗಳಾಗಿ ಬಿಡುತ್ತೇವೆ.

ಮುಖೇಶ್‌, ಕಿಶೋರ್‌ ಹಾಡಂದ್ರೆ…
ಈಗೀಗ ನಮ್ಮಲ್ಲಿ ಬಹಳಷ್ಟು ಜನರಿಗೆ ವಿಷಾದದ ಹಾಡುಗಳನ್ನು ಅನುಭವಿಸಿ ಹಾಡುವ ಮುಖೇಶ್‌, ಕಿಶೋರ್‌ ಕುಮಾರ್‌ ಇಷ್ಟವಾಗುತ್ತಿದ್ದಾರೆ. ಇಂಗ್ಲಿಷ್‌ ಕವಿ ಶೆಲ್ಲಿ ತನ್ನ ಒಂದು ಕವನದಲ್ಲಿ ಬರೆದಿದ್ದಾನೆ – sweetest songs are those
that tell of saddest thoughts ಎಂದು. ಹದಿನಾರರ ಹರೆಯದವರಿಂದ ಹಣ್ಣು ಹಣ್ಣು ಮುದುಕರವರೆಗೆ ತಮ್ಮ ಮನದಾಳದಲ್ಲಿ ಅಡಗಿದ ಭಯ, ನೋವು, ಕಳವಳಗಳನ್ನು ಹೇಳಿಕೊಳ್ಳಬೇಕೆಂದಾಗ ಜೀವನದ ನಶ್ವರತೆಯ ಬಗ್ಗೆ, ತಲ್ಲಣಗಳ ಬಗ್ಗೆ, ಉಸಿರುಗಟ್ಟುತಿರುವ ಬದುಕಿನ ಬಗ್ಗೆ ಬರೆಯಲಾರಂಭಿಸಿದ್ದಾರೆ. ಜೀವನದ ಸಿಹಿಕಹಿ ಅನುಭವಗಳಲ್ಲಿ ನಮ್ಮನ್ನು ಆಳವಾಗಿ ಘಾಸಿಗೊಳಿಸಿದ, ಗಾಯಗೊಳಿಸಿದ, ನೋಯಿಸಿದ ಅನುಭವಗಳೇ ಬಿಟ್ಟೂ ಬಿಡದೆ ಪ್ರತಿ ಹಂತದಲ್ಲಿಯೂ ಕಾಡುತ್ತವೆ. ಪ್ರೇಮ ವೈಫ‌ಲ್ಯಗಳು, ಪರೀಕ್ಷೆಯಲ್ಲಿ ಸೋಲು, ಸಿಗದೇ ಹೋದ ಪ್ರಮೋಷನ್‌, ಖ್ಯಾತಿ, ಒಂಟಿತನ… ಹೀಗೆ… 

Advertisement

ಜಾಲತಾಣವೇ ಜೀವನ
ಬದುಕಿನ ದಾರಿಯಲ್ಲಿ ಅಚಾನಕ್‌ ಆಘಾತಗಳು ಗಟ್ಟಿಯಾಗಿರುವವರನ್ನೂ ಮೆತ್ತಗೆ ಮಾಡುತ್ತವೆಯಾದರೂ ಕೆಲವರು ಮಾತ್ರ ಅವನ್ನು ಜಯಿಸುತ್ತಾರೆ. ಹೇಗೆಂದರೆ, ಮತ್ತೆ ಮತ್ತೆ ಪ್ರಯತ್ನಿಸುವ ಮೂಲಕ. ಆದರೆ, ಪದೇಪದೆ ಸೋಲುಂಟಾದಾಗ, ಪರಿಸ್ಥಿತಿಗಳ ಮೇಲೆ ನಿಯಂತ್ರಣವಿಲ್ಲದಾದಾಗ ಹತಾಶೆ, ಖನ್ನತೆಗಳು ತೀವ್ರ ರೂಪದಲ್ಲಿ ಆವರಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಶುರುವಾಗುವ ಈ ಚಡಪಡಿಕೆ ಆತ್ಮಹತ್ಯೆಯಲ್ಲಿ ಕೊನೆಗೊಳ್ಳುವುದಿದೆ. ಹಿಂದೆಲ್ಲಾ ಚಡ್ಡಿಬಡ್ಡಿಗಳ ಹಾಗೆ ಸ್ನೇಹಿತರಿರುತ್ತಿದ್ದರು. ಕೆಲವೊಮ್ಮೆ ಅಪ್ಪ- ಅಮ್ಮ, ಅಜ್ಜಿ- ತಾತ, ಮಾವ- ಅತ್ತೆ… ಹೀಗೆ ಒಬ್ಬರಲ್ಲಾ ಅಂದರೆ ಮತ್ತೂಬ್ಬರು ಮನೆಯಲ್ಲಿ ಸ್ನೇಹಿತರ ಸ್ಥಾನವನ್ನು ತುಂಬುತ್ತಿದ್ದರು. ಅವರ ಬಳಿ ನಾವು ನೋವು ನಲಿವನ್ನು ಹಂಚಿಕೊಳ್ಳಬಹುದಿತ್ತು. ಪರಿಹಾರ ಸಿಗದಿದ್ದರೂ ಮನಸ್ಸಿನ ಭಾರ ಹಗುರಾಗುತ್ತಿತ್ತು. ಆದರೆ, ಈಗ ಸಾಮಾಜಿಕ ಜಾಲತಾಣಗಳೇ ಬದುಕಾಗಿಬಿಟ್ಟಿದೆ. ಅಲ್ಲಿ ದಿನವೂ ಒಂದಿಲ್ಲೊಂದು ಸ್ಟೇಟಸ್‌ ಹಾಕುವ ನಾವು ಖುಷಿಯಾಗಿರುವಂತೆ ತೋರಿಸಿಕೊಳ್ಳುತ್ತೇವಷ್ಟೆ. ನಿಜ ಜೀವನದಲ್ಲಿ ಮಾತ್ರ ನೊಂದು ಬೆಂದು ಕುಗ್ಗಿ ಹೋಗಿರುತ್ತೇವೆ. ಅಲ್ಲಿನ ಗೆಳೆಯರು ಎದುರಿಗೆ ಸಿಕ್ಕರೂ ಎಲ್ಲಿ ನನ್ನದು ಕೇವಲ ಬೊಗಳೆ ಎಂದು ತಿಳಿದುಕೊಳ್ಳುತ್ತಾರೋ ಎಂದು ನೆಮ್ಮದಿಯಿಂದಿರುವಂತೆ ನಟಿಸುತ್ತೇವೆ. ಅದು ಹಾಗೆಯೇ ಮುಂದುವರಿದು ಒಳಗೊಳಗೆ ಇರುವ ನೋವಿನ ಗುಡ್ಡ ಬೆಟ್ಟವಾಗಿ ಸ್ಫೋಟಿಸಿದಾಗಲೇ ಖನ್ನತೆ ಕೈಹಿಡಿದು ಬದುಕು ಸಾವಿನ ಬಾಗಿಲ ತಟ್ಟಿರುತ್ತದೆ. 

ಏಕಾಂಗಿತನವೂ ಮಾರಾಟಕ್ಕಿದೆ..!
ಈಗಿನ ಟೆಕ್ನಾಲಜಿ ಯುಗದಲ್ಲಿಯೂ ನಾವೆಲ್ಲ ಸಂತೆಯೊಳಗಿನ ಏಕಾಂಗಿಗಳೇ. ಫೇಸ್‌ಬುಕ್‌ನಲ್ಲಿ ಅದೆಷ್ಟೋ ಸಾವಿರ ಫ್ರೆಂಡ್ಸ್‌, ಆದರೆ ಕಷ್ಟಕ್ಕೆ, ಜೀವ ಮಿಡಿಯುವವರು, ನೋವಿಗೆ ಹೆಗಲಾಗುವವರು ಯಾರೂ ಇಲ್ಲ. ನಮ್ಮ ಖಾಲಿತನವನ್ನು ಸಾಮಾಜಿಕ ಜಾಲತಾಣಗಳ ಮೂಲಕ, ವೆಬ್‌ಸೈಟ್‌ಗಳ ಮೂಲಕ, ಮ್ಯಾಗಜಿನ್‌ಗಳ ಮೂಲಕ ಮರೆಯಲೆತ್ನಿಸುತ್ತೇವೆ. ಬದುಕಿನ ಪಥದಲ್ಲಿ ನಾವು ಯಾವಾಗ ಏಕಾಂಗಿಯಾಗುತ್ತೇವೆ? ನಂಬಿದವರು ಕೈ ಬಿಟ್ಟಾಗ, ಬೆನ್ನಿಗಿರಬೇಕಾದ ಸಂಬಂಧಿಕರೇ ಬೆನ್ನಿಗೆ ಚೂರಿ ಹಾಕಿದಾಗ, ಮನೆಯಿಂದ ಹೊರಗೆ ಹಾಕುವುದು, ಹೀನಾಯವಾಗಿ ನಡೆಸಿಕೊಳ್ಳುವುದು, ದಿನನಿತ್ಯ ಜಗಳ, ಭೇದ- ಭಾವ… ಹೀಗೆ ಕೌಟುಂಬಿಕ ದೌರ್ಜನ್ಯಗಳಾದರೆ ಒಬ್ಬರನ್ನೇ ಟಾರ್ಗೆಟ್‌ ಮಾಡಿ ದೂಷಿಸುವುದು, ಗುಂಪಿನಲ್ಲಿ ಸೇರಿಸಿಕೊಳ್ಳದೇ ಇರುವುದು, ನಮ್ಮ ವೀಕ್‌ನೆಸ್‌ಗಳನ್ನು ತಿಳಿದುಕೊಂಡು ಢಾಣಾ ಢಂಗುರ ಸಾರಿಕೊಂಡು ಬರುವುದು… ಹೀಗೆ ವೃತ್ತಿಪರ ಸಮಸ್ಯೆಗಳು. ಈಗೀಗ ನಮ್ಮ ಏಕಾಂಗಿತನ ಕೂಡ ಮಾರಾಟದ ಸರಕಾಗಿರುವುದೊಂದು ಸೋಜಿಗ.

ಮೊದಲು ಮನುಷ್ಯರಾಗೋಣ…
ನಮ್ಮ ಏಕಾಂಗಿತನ ನಮ್ಮ ಒಳಗನ್ನು ಕೊಲ್ಲಲು ಬಿಡಬಾರದೆಂದೇ ನಾವು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತೇವೆ. ಧ್ಯಾನ, ಪ್ರಾರ್ಥನೆ, ದೇವಾಲಯಗಳು, ಉತ್ತಮ ಹವ್ಯಾಸಗಳು, ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವುದು, ಓದು- ಬರಹದಂತಹ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು… ಹೀಗೆ, “ಶೋಕವಿಲ್ಲವದವನು ಕವಿಯಾಗಲಾರ’ ಎಂಬಂತೆ ಕಲೆ, ಸಾಹಿತ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಹಾಗೆ ನೋಡಿದರೆ, ಯಾತನೆಯಿಲ್ಲದ ಬದುಕೇ ಇಲ್ಲ. ಅದರ ಸ್ವರೂಪ, ತೀವ್ರತೆ ಮಾತ್ರ ಭಿನ್ನವಷ್ಟೇ. ನೋವಿನಿಂದ ನರಳುವವರಿಗೆ, ಮನಸು ಮೂಕವಾಗಿ ರೋದಿಸುವವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಅದನ್ನು ಮಾಡಿ ನಮ್ಮ ಮನಸ್ಸನ್ನು ನಾವು ಖುಷಿಪಡಿಸುವುದು ಮುಖ್ಯ. ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಕೆಲಸವನ್ನು ಅಪ್‌ಡೇಟ್‌ ಮಾಡಿ ಫೋಟೋ ಹಾಕಿ ಲೈಕ್‌, ಕಮೆಂಟು ಪಡೆಯಲು ಮಾಡಿದ ಸಹಾಯ ಅಥವಾ ಒಳ್ಳೆಯ ಕಾರ್ಯ ಕ್ಷಣಿಕ. ಮೊದಲು ನೋವಿಗೆ ಮಿಡಿಯೋಣ, ಮನುಷ್ಯರಾಗೋಣ.

ಮೊಬೈಲ್‌ ಕೆಟ್ಟರೆ, ಮನಸ್ಸೂ…
ಯಾರೋ ನಮ್ಮನ್ನು ಮಿಸ್‌ ಮಾಡಿಕೊಳ್ಳುವುದು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್‌ ಆದ ಮೇಲೆಯೇ ತಿಳಿಯುವುದು. ಇನ್ನು ಫೇಸ್‌ಬುಕ್‌ ಚಾಟ್‌ ಅದೆಷ್ಟು ಮನೆಗಳನ್ನು ಮುರಿದಿದೆಯೋ ಏನೋ. ವಾಟ್ಸಾéಪ್‌ ಗೀಳು ಕೂಡ ಹಾಗೆಯೆ. ಒಂದು ದಿನ ಮೊಬೈಲ್‌ ಕೆಟ್ಟು ಹೋದರೆ ನಮ್ಮ ತಳಮಳಕ್ಕೆ ಎಣೆಯಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಆ್ಯಪ್‌ಗ್ಳಿಲ್ಲದೆ “ಒಂಟಿ ಒಂಟಿಯಾಗಿರುವುದು ಬೋರೋ ಬೋರು’ ಎನ್ನುವ ಕಾಲ ಬಂದಾಗಿದೆ. 

ಜಮುನಾ ರಾಣಿ ಹೆಚ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next