Advertisement

ಚಲಿಸುತ್ತಿದ್ದ ಕಾರು, ಸ್ಕೂಟಿ ಮೇಲೆ ಬಿದ್ದ ಮರ

12:12 AM Nov 07, 2019 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿ ನಡುವೆ ಬಳ್ಪ ಪರಿಸರದ ಆಸುಪಾಸಿನ ಮೂರು ಕಡೆಗಳಲ್ಲಿ ರಸ್ತೆ ಮೇಲೆ ಮರ ಉರುಳಿ ಬಿದ್ದಿದೆ. ಈ ಪೈಕಿ ಬಳ್ಪ- ಗುತ್ತಿಗಾರು ಕ್ರಾಸ್‌ ಬಳಿ ಚಲಿಸುತ್ತಿದ್ದ ಆಲ್ಟೊ ಕಾರು ಮತ್ತು ಸ್ಕೂಟಿ ಮೇಲೆ ಮರ ಬಿದ್ದು ಕಾರಿನ ಚಾಲಕ ಗಣೇಶ್‌ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಕಾರಿನಲ್ಲಿದ್ದ ಇನ್ನಿಬ್ಬರಿಗೂ ಅಲ್ಪ ಪ್ರಮಾಣದಲ್ಲಿ ಗಾಯಗಳಾಗಿವೆ. ಇದೇ ಘಟನೆಯಲ್ಲಿ ಸ್ಕೂಟಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಗಣೇಶ್‌ ಅವರನ್ನು ಮೊದಲಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.

Advertisement

ಬೀಸಿದ ಬಲವಾದ ಗಾಳಿ; ಹಲವೆಡೆ ರಸ್ತೆಗೆ ಬಿದ್ದ ಮರಗಳು
ಬಳ್ಪ ಪರಿಸರದಲ್ಲಿ ಬುಧವಾರ ಸಂಜೆ ಮೋಡ ಮುಸುಕಿ ಭಾರೀ ಗುಡುಗು ಮಿಂಚು ಉಂಟಾಗಿತ್ತು. ಬಲವಾದ ಗಾಳಿಯೂ ಬೀಸಿತ್ತು. ದೇವರಹಳ್ಳಿ ಗ್ರಾಮದ ಕುಜುಂಬಾರು ಎಂಬಲ್ಲಿ ಸಂಬಂಧಿಕರ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕಾಗಿ ಬಡಕ್ಕೋಡಿ ನಿವಾಸಿ ನಿವೃತ್ತ ಎಎಸ್‌ಐ ಜನಾರ್ದನ ಮತ್ತು ಅವರ ಪತ್ನಿ ಆಲ್ಟೊ ಕಾರಿನಲ್ಲಿ ತೆರಳುತ್ತಿದ್ದರು. ಕಾರನ್ನು ಅವರ ಚಿಕ್ಕಪ್ಪನ ಮಗ ಗಣೇಶ್‌ ಎಂಬವರು ಚಲಾಯಿಸುತ್ತಿದ್ದು, ಕ್ರಾಸ್‌ ಬಳಿ ತಲುಪಿದಾಗ ಬೀಸಿದ ಭಾರೀ ಗಾಳಿಯಿಂದ ರಸ್ತೆ ಪಕ್ಕದ ಮರ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿತ್ತು. ಚಾಲಕನ ಸೀಟಿನಲ್ಲಿದ್ದ ಗಣೇಶ್‌ ಅವರ ತಲೆಗೆ ಗಂಭೀರ ಏಟಾಗಿದ್ದಲ್ಲದೆ ಮರ ಬಿದ್ದ ರಭಸಕ್ಕೆ ಅವರು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡರು.
ಕಾರಿನಲ್ಲಿದ್ದ ಜನಾರ್ದನ ಮತ್ತು ಅವರ ಪತ್ನಿಗೂ ಗಾಯಗಳಾಗಿವೆ. ಇದೇ ಘಟನೆಯಲ್ಲಿ ಕಾರಿನ ಹಿಂದೆ ಚಲಿಸುತ್ತಿದ್ದ ಸ್ಕೂಟಿಯೊಂದಕ್ಕೂ ಮರದ ಗೆಲ್ಲು ಅಪ್ಪಳಿಸಿದೆ. ಸ್ಕೂಟಿ ಸವಾರ ಗಾಯಗಳೊಂದಿಗೆ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ನೆರವಿಗೆ ಬಂದ ಪತ್ರಕರ್ತ
ಇದೇ ವೇಳೆ ಪತ್ನಿ ಮತ್ತು ಮಗುವಿನ ಜತೆ ಪುತ್ತೂರಿನಿಂದ ಕಾರಿನಲ್ಲಿ ವಾಪಸಾಗುತ್ತಿದ್ದ ಸುಬ್ರಹ್ಮಣ್ಯದ ಪತ್ರಿಕೆಯೊಂದರ ವರದಿಗಾರ ಭರತ್‌ ನೆಕ್ರಾಜೆ ಗಾಯಾಳುಗಳಿಗೆ ನೆರವಾದರು. ರಸ್ತೆ ನಡುವೆ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಗಣೇಶ್‌ ಮತ್ತು ಉಳಿದವರಿಬ್ಬರನ್ನು ಅವರು ತಮ್ಮ ಕಾರಿನಲ್ಲಿ ಪುತ್ತೂರು ತನಕ ಕರೆ ತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಘಟನೆಯನ್ನು ಗಮನಿಸಿದ ಸ್ಥಳೀಯರು ತತ್‌ಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರೂ ವಿಳಂಬ ವಾಗುತ್ತಿರುವುದನ್ನು ಗಮನಿಸಿದ ಭರತ್‌, ಅದಕ್ಕೆ ಕಾಯದೆ ತನ್ನ ಕಾರಿನಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು.
ಹಲವೆಡೆ ಉರುಳಿ ಬಿದ್ದ ಮರ ಇದೇ ಹೆದ್ದಾರಿಯ ಎಣ್ಣೆಮಜಲು ತಿರುವು ಮತ್ತು ಬಳ್ಪ ಸಮೀಪ ಇನ್ನೆರಡು ಕಡೆ ಮರಗಳು ಉರುಳಿ ಬಿದ್ದಿವೆ. ಮರಗಳ ತೆರವು ಕಾರ್ಯ ತಡರಾತ್ರಿಯವರೆಗೂ ನಡೆಯಿತು. ಇತರೆಡೆಗಳಿಗಿಂತ ಬಳ್ಪ -ಯೇನೆಕಲ್ಲು ಪರಿಸರದಲ್ಲಿ ಬೀಸಿದ ಗಾಳಿ ಬಲವಾಗಿತ್ತು. ಗುಡುಗು ಮಿಂಚು ಕೂಡ ಬಹಳವಿತ್ತು. ಮೊಬೈಲ್‌ ಸಂಪರ್ಕ ಕೂಡ ಸ್ಥಗಿತಗೊಂಡು ತತ್‌ಕ್ಷಣಕ್ಕೆ ಸಂಪರ್ಕ ಮತ್ತು ಮಾಹಿತಿಗೆ ಅಡಚಣೆ ಉಂಟಾಯಿತು. ಹೀಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ತೊಡಕುಂಟಾಯಿತು.

ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲ ಪರಿಸರದಲ್ಲಿ ಗುಡುಗು ಮಿಂಚು, ಗಾಳಿ ಸಹಿತ ಭಾರೀ ಮಳೆ ಯಾಗಿದೆ. ಗಾಳಿಗೆ ಹಲವೆಡೆ ಮರ ಮತ್ತು ವಿದ್ಯುತ್‌ ಕಂಬಗಳು ಧರಾಶಾಯಿ ಯಾದ ವರದಿಯಾಗಿದೆ. ಕಡಬ- ಸುಬ್ರಹ್ಮಣ್ಯ ರಸ್ತೆ ಮಧ್ಯೆ ಮರ ಬಿದ್ದು ಸುಬ್ರಹ್ಮಣ್ಯ ನಗರ ಮತ್ತು ಗ್ರಾಮೀಣ ಭಾಗಕ್ಕೆ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ. ಮೆಸ್ಕಾಂ ಸಿಬಂದಿ, ಅರಣ್ಯ ಇಲಾಖೆ ಸಿಬಂದಿ ಮತ್ತು ಸ್ಥಳಿಯರು ರಾತ್ರಿಯೇ ರಸ್ತೆಗೆ ಬಿದ್ದ ಮರಗಳ ತೆರವು ಕಾರ್ಯಚರಣೆಯನ್ನು ನಡೆಸಿದರು .

Advertisement

Udayavani is now on Telegram. Click here to join our channel and stay updated with the latest news.

Next