ಬೆಂಗಳೂರು: ಇತ್ತೀಚೆಗಷ್ಟೇ ನಗರ ಹಾಗೂ ಗ್ರಾಮಾಂತರ ಭಾಗದ 68 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಪ್ರಕರಣ ಮಾಸುವ ಮುನ್ನವೇ ರಾಜಧಾನಿಯಲ್ಲಿರುವ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸಹಾಯ ವಾಣಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಪಾ ಸಣೆ ಬಳಿಕ ಇದೊಂದು ಹುಸಿ ಕರೆ ಎಂಬುದು ಗೊತ್ತಾ ಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೇಂದ್ರ ವಿಭಾಗದ ಪೊಲೀಸರು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಡ್ಡಳ್ಳಿ ನಿವಾಸಿ ಭಾಸ್ಕರ್(34) ಎಂಬಾತನನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಬಿ.ಕಾಂ.ಪದವೀಧರನಾಗಿರುವ ಆರೋಪಿ ಭಾಸ್ಕರ್ ಸೋಮವಾರ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ. ರಾಜಭವನದ ಸಮೀಪ ಹೋಗುವಾಗ ಪೊಲೀಸರನ್ನು ಕಂಡು, ಕುತೂಹಲಗೊಂಡಿದ್ದ. ಬಳಿಕ ತನ್ನ ಮೊಬೈಲ್‌ನಿಂದ ಎನ್‌ಐಎ ಸಹಾಯವಾಣಿಗೆ ಕರೆ ಮಾಡಿ, ರಾಜಭವನಕ್ಕೆ ಬಾಂಬ್ ಇರಿಸಿರುವುದಾಗಿ ಹೇಳಿ ಕರೆ ಸ್ಥಗಿತಗೊಳಿಸಿದ್ದ. ಬಳಿಕ ಮೆಜೆಸ್ಟಿಕ್ ತೆರಳಿ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಬಸ್‌ನಲ್ಲಿ ಆಂಧ್ರಪ್ರದೇಶದ ಚಿತ್ತೂರಿಗೆ ಪ್ರಯಾಣಿಸಿದ್ದ.
ಮತ್ತೂಂದೆಡೆ ರಾಜಭವನ ತಪಾಸಣೆ ನಡೆಸಿದ ಪೊಲೀಸರಿಗೆ ಇದು ಹುಸಿಬಾಂಬ್ ಕರೆ ಎಂಬುದು ಖಚಿತವಾಗಿತ್ತು. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ಆಂಧ್ರಪ್ರದೇಶದ ಚಿತ್ತೂರಿನ ದೇವಸ್ಥಾನವೊಂದರ ಬಳಿ ಆರೋಪಿ ಭಾಸ್ಕರ್‌ನನ್ನು ಬಂಧಿಸಲಾಗಿದೆ. ಆರೋಪಿ ವಿಚಾರಣೆಯಲ್ಲಿ ಕುತೂಹಲಕ್ಕೆ ಗೂಗಲ್ ನಲ್ಲಿ ಎನ್‌ಐಎ ಸಹಾಯವಾಣಿ ನಂಬರ್ ಶೋಧಿಸಿ ಕರೆ ಮಾಡಿದ್ದೇನೆ. ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ರಾಜಭವನದಲ್ಲಿ ಆತಂಕ: ಮತ್ತೂಂದೆಡೆ ತಡರಾತ್ರಿ ಏಕಾಏಕಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ ದಂಡು ಕಂಡ ರಾಜಭವನ ಸಿಬ್ಬಂದಿ ಆತಂಕಗೊಂಡಿದ್ದರು. ಬಳಿಕ ರಾಜಭವನದ ಎಲ್ಲೆಡೆ ತಪಾಸಣೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬರಲಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಖಚಿತ ಪಡಿಸುತ್ತಿದ್ದಂತೆ ನಿರಾಳಾದರು.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಸೋಮವಾರ ತಡರಾತ್ರಿ ಅಪರಿಚಿತ ವ್ಯಕ್ತಿ ಎನ್‌ಐಎ ಕಚೇರಿಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದ್ದು, ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.
“ರಾಜಭವನ ಕೆಲವೇ ಕ್ಷಣಗಳಲ್ಲಿ ಸ್ಫೋಟ’: ಸೋಮವಾರ ತಡರಾತ್ರಿ 11.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್‌ನಿಂದ ಎನ್‌ಐಎ ಸಹಾಯವಾಣಿಗೆ ಕರೆ ಮಾಡಿ, ರಾಜಭವನದಲ್ಲಿ ಬಾಂಬ್ ಇಟ್ಟಿದ್ದೇನೆ. ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಕರೆ ಸ್ಥಗಿತಗೊಳಿಸಿದ್ದಾನೆ. ಅದರಿಂದ ಕೂಡಲೇ ಎಚ್ಚೆತ್ತ ಎನ್‌ಐಎ ಸಿಬ್ಬಂದಿ, ಕೂಡಲೇ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ತಡರಾತ್ರಿ 12 ಗಂಟೆ ಸುಮಾರಿಗೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಹಾಗೂ ಸ್ಥಳೀಯ ಹತ್ತಾರು ಪೊಲೀಸರು ರಾಜಭವನದ ಎಲ್ಲೆಡೆ ತಪಾಸಣೆ ನಡೆಸಿದ್ದಾರೆ. ಆದರೆ, ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಕರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.