ಹುಣಸೂರು: ಮಾರಮ್ಮ ದೇವಸ್ಥಾನದ ಮೇಲೆ ಜೀವಂತ ಕೋಳಿ ಎಸೆದು ಹರಕೆ ತೀರಿಸುವ ವಿಶಿಷ್ಟ ಜಾತ್ರೆ ಎಂಬ ಖ್ಯಾತಿ ಪಡೆದಿರುವ ಮಲ್ಲಿನಾಥಪುರ ಬಳಿಯ ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಹುಣಸೂರು ನಗರದ ಖಜಾನೆಯಲ್ಲಿರಿಸಿದ್ದ ದೇವರ ಭಂಡಾರವನ್ನು ಶನಿವಾರವೇ ಮಲ್ಲಿ ಮಲ್ಲಿನಾಥಪುರದಲ್ಲಿರುವ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಗಿತ್ತು. ಸೋಮವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಬಳಿಕ ಸಂಪ್ರದಾಯದಂತೆ 2 ಕಿ.ಮೀ. ದೂರದ ಮಲ್ಲಿನಾಥಪುರದಿಂದ ಬೀರೇಶ್ವರ ಸ್ವಾಮಿಯನ್ನು ವಿಶೇಷ ಪೂಜೆ ಸಲ್ಲಿಸಿ, ಚಿನ್ನಾಭರಣದೊಂದಿಗೆ ಸಿಂಗರಿಸಿ, ಬೆಳ್ಳಿಯ ಮುಖವಾಡ ಹಾಕಿ ಅಲಂಕರಿಸಿ ಮೆರವಣಿಗೆ ಮೂಲಕ ಕರೆತರಲಾಯಿತು.
ಇದೇ ವೇಳೆ, ಭಕ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಬರಿಗಾಲಲ್ಲಿ ಕೊಂಬು, ಕಹಳೆ, ತಮಟೆ ಹಾಗೂ ಮಂಗಳ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾ, ದಾರಿಯುದ್ದಕ್ಕೂ ಈಡುಗಾಯಿ ಒಡೆಯುತ್ತಾ ಜಾತ್ರಾಮಾಳಕ್ಕೆ ಆಗಮಿಸಿದರು. ಈ ಜಾತ್ರೆಯಲ್ಲಿ ಸುತ್ತಮುತ್ತಲಿನ ಏಳೂರಿನ ಹಾಗೂ ರಾಜ್ಯದ ವಿವಿಧೆಡೆಯ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ದಾರಿಯುದ್ದಕ್ಕೂ ಇಡುಗಾಯಿ: ಮಲ್ಲಿನಾಥಪುರದಿಂದ ಮಾರಮ್ಮನ ಆಯುಧ ಒಡವೆ ಇಡುವ ಪೆಟ್ಟಿಗೆ(ಕುರ್ಜು)ಯನ್ನು ಹುಲಿವಾಹದಲ್ಲಿರಿಸಿ, ನಂದಿಕಂಬ ಹೊತ್ತು ಉತ್ಸವ ಮೂರ್ತಿಯೊಂದಿಗೆ ರಸ್ತೆಯುದ್ದಕ್ಕೂ ಭಕ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಈಡುಗಾಯಿ ಒಡೆಯುತ್ತಾ ಸಾಗಿ ಬಂದರೆ, ಮತ್ತೂಂದೆಡೆ ವೀರಗಾಸೆ ಕುಣಿತ, ಕುಣಿಯುವ ಗುಡ್ಡರ ಕುಣಿತ, ಕಾಡುಗುಡ್ಡರ ಕುಣಿತ ದೊಂದಿಗೆ ಬೀರೇಶ್ವರಸ್ವಾಮಿಗೆ ಉಘೇ ಉಘೇ ಎನ್ನುತ್ತಾ ಘೋಷಣೆ ಹಾಕುತ್ತಾ ಭಕ್ತಿ-ಭಾವ ಮೆರೆದರು. ಮಹಿಳೆಯರು ತಲೆ ಮೇಲೆ ತಂಬಿಟ್ಟು ಹೊತ್ತಿದ್ದರೆ, ಕೆಲವರು ಬಾಯಿಗೆ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು.
ಜೀವಂತ ಕೋಳಿ ಎಸೆದರು: ಮಧ್ಯಾಹ್ನದ ವೇಳೆಗೆ ದೇವರ(ಕುರ್ಜು) ಮೆರವಣಿಗೆ ದೇವಸ್ಥಾನದ ಬಳಿಗೆ ಆಗಮಿಸುತ್ತಿದ್ದಂತೆ ಹರಕೆ ಹೊತ್ತಿದ್ದ ಸಾವಿರಾರು ಮಂದಿ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಹಲವರು ಜೀವಂತ ಕೋಳಿಯನ್ನು ದೇವಾಲಯದ ಮೇಲೆ ಎಸೆದರೆ, ನೂರಾರು ಮಂದಿ ದೇವಸ್ಥಾನದ ಎದುರೆ ನೂರಾರು ಕೋಳಿಗಳನ್ನು ಸಂಪ್ರದಾಯದಂತೆ ಬಲಿ ಕೊಟ್ಟು ಹರಕೆ ಸಲ್ಲಿಸಿದರು. ವೃತ್ತ ನಿರೀಕ್ಷಕ ಎಚ್.ಆರ್.ಶಿವಕುಮಾರ್ ಹಾಗೂ ಎಸ್‌ಐ ಜಯಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಏಳೂರಿನ ಗ್ರಾಮದೇವತೆ: ಈ ಹೊಸಲುಮಾರಮ್ಮ ದೇವಿಯು ಸುತ್ತ ಮುತ್ತಲಿನ ಏಳು ಗ್ರಾಮಕ್ಕೆ ಸೇರಿದ್ದಾಗಿದ್ದು, ಮಲ್ಲಿನಾಥಪುರ, ಬೋಳನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಬಿಳಿಕೆರೆ, ಮೈದನಹಳ್ಳಿ, ರಾಮೇನಹಳ್ಳಿ ರಾಮಸ್ಥರು ಸೇರಿ ಜಾತ್ರಾ ಮಹೋತ್ಸವ ಆಚರಿಸಿದರು. ದೇವಾಲಯದ ಆವರಣದ ಸುತ್ತಲಿನಲ್ಲಿರುವ ಮರದ ನೆರಳಲ್ಲಿ ಕುಳಿತು ಪ್ರಸಾದ ಸ್ವೀಕರಿಸಿದರು.
ದೇವರಿಗೆ ಸಂಬಂಧಿಸಿದ ಒಡವೆ(ಭಂಡಾರ) ಆಯುಧಗಳು ಸೇರಿದಂತೆ ಎಲ್ಲವನ್ನೂ ಮೆರವಣಿಗೆಯಲ್ಲಿ ತಂದು ಗ್ರಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಸ್ಥಾನದಲ್ಲಿರಿಸಿದರು. ಭಕ್ತಾದಿಗಳಿಗೆ ಮಜ್ಜಿಗೆ-ಪಾನಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಏಳು ಗ್ರಾಮದ ಮುಖಂಡರು ಜಾತ್ರಾ ಯಶಸ್ವಿಗಾಗಿ ಶ್ರಮಿಸಿದರು.