Advertisement

ಕಬ್ಬನ್‌ಪಾರ್ಕಿನಲ್ಲಿ ತೆರವುಗೊಳ್ಳದ ಶಿಥಿಲ ಮರ

12:08 PM May 23, 2018 | |

ಬೆಂಗಳೂರು: ಇತ್ತೀಚೆಗೆ ಸುರಿದ ಭಾರಿ ಮಳೆ, ಬಿರುಗಾಳಿಗೆ ಕಬ್ಬನ್‌ ಪಾರ್ಕ್‌ನ ಬಿದಿರು ನೆಲಕ್ಕುರುಳಿದ್ದು, ಸಾಕಷ್ಟು ಮರಗಳು ಧರೆಗುರುಳಿವೆ. ಶಿಥಿಲಾವಸ್ಥೆಯ ಕೊಂಬೆ, ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಪ್ರವಾಸಿಗರು, ವಾಯುವಿಹಾರಿಗಳು ಆತಂಕದಲ್ಲಿ ವಿಹರಿಸುವಂತಾಗಿದೆ.

Advertisement

ನಗರದಲ್ಲಿ ಹಚ್ಚ ಹಸಿರನ್ನು ಹೊದ್ದಿರುವ ವಲಯಗಳಲ್ಲಿ ಪ್ರಮುಖವಾದ ಕಬ್ಬನ್‌ಪಾರ್ಕ್‌ಗೆ ನಿತ್ಯ ಸಾವಿರಾರು ವಾಯುವಿಹಾರಿಗಳು, ಪ್ರವಾಸಿಗರು ಬಂದು ಹೋಗುತ್ತಾರೆ. ಮಾತ್ರವಲ್ಲದೇ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತಿನಲ್ಲಿ ಸಮಯ ಕಳೆಯಲೆಂದು, ವಿರಾಮಕ್ಕೆಂದು ಬರುವವರ ಸಂಖ್ಯೆಯೂ ಕಡಿಮೆಯಿಲ್ಲ. ಮಕ್ಕಳ ಆಟೋಟ ಕೇಂದ್ರವಾದ ಬಾಲಭವನವೂ ಇರುವುದರಿಂದ ಮಕ್ಕಳು ಸೇರಿದಂತೆ ಪೋಷಕರು ದೊಡ್ಡ ಸಂಖ್ಯೆಯಲ್ಲಿರುತ್ತಾರೆ. ಹೀಗೆ ನಿತ್ಯ ಭೇಟಿ ನೀಡುವ ಸಾವಿರಾರು ಮಂದಿಗೆ ಶಿಥಿಲಾವಸ್ಥೆಯ ಮರಗಳು ಆತಂಕ ಮೂಡಿಸಿವೆ.

ಉದ್ಯಾನದ ಹಲವಡೆ ಒಣಗಿದ ಕೊಂಬೆಗಳನ್ನು ತೆರವುಗೊಳಿಸಿಲ್ಲ. ಹೀಗಾಗಿ ಭಾರಿ ಗಾಳಿ, ಮಳೆಗೆ ಕೊಂಬೆಗಳು ಮುರಿದು ಬೀಳುತ್ತಿವೆ. ಕೆಲವೆಡೆ ಮುರಿದ ಕೊಂಬೆಗಳನ್ನು ಇತರೆ ಕೊಂಬೆಗಳ ಮೇಲೆ ಬಿದ್ದಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಕೆಲವು ಮರದ ಬೇರುಗಳು ಸಡಿಲಗೊಂಡಿರುವುದು ಕೂಡ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾಗಿ ಶಿಥಿಲಗೊಂಡ ಮರ, ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂಬುದು ವಾಯುವಿಹಾರಿಗಳ ಒತ್ತಾಯ.

ಬೆಂಕಿಯ ಆತಂಕ: ಒಂದೆಡೆ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ಕಬ್ಬನ್‌ ಪಾರ್ಕ್‌ನಲ್ಲಿರುವ ಬಿದಿರ ಮೆಳೆಗಳು ಬೆಂಕಿಗಾಹುತಿಯಾಗುವ ಭೀತಿ ಮೂಡಿದೆ. ಕಬ್ಬನ್‌ಪಾರ್ಕ್‌ನಲ್ಲಿ ಸುಮಾರು 200ಕ್ಕೂ ಹೆಚ್ಚು ಬಿದಿರ ಮೆಳೆಗಳಿದ್ದು, ಇವುಗಳಲ್ಲಿ 10ಕ್ಕೂ ಹೆಚ್ಚು ಬಿದಿರ ಮೆಳೆಗಳು 40 ವರ್ಷದಷ್ಟು ಹಳೆಯವು. ಅವು ಹೂಬಿಟ್ಟು ಒಣಗಿರುವುದರಿಂದ ಬೆಂಕಿ ತಗುಲಿದರೆ ಅನಾಹುತ ಸಂಭವಿಸುವ ಸಾಧ್ಯತೆಯಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಉದ್ಯಾನವನದ ನಿರ್ವಹಣೆ ಹೊಣೆ ಹೊತ್ತ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ಒಣಗಿದ ಬಿದಿರಿನ ಮೆಳೆ ತೆರವುಗೊಳಿಸುವ ಬಗ್ಗೆ ಈ ಹಿಂದೆಯೇ ಆರಣ್ಯ ಇಲಾಖೆಗೆ ಗಮನಕ್ಕೆ ತರಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತೂಮ್ಮೆ ಇಲಾಖೆ ಗಮನಕ್ಕೆ ತಂದು ತ್ವರಿತವಾಗಿ ಒಣಗಿದ ಬಿದಿರು ತೆರವುಗೊಳಿಸಲಾಗುವುದು.

Advertisement

ಈಗಾಗಲೇ ಉದ್ಯಾನದಲ್ಲಿ ಹಾದು ಹೋಗಿರುವ ರಸ್ತೆಗಳ ಬದಿಯ ಒಣ ಮರ, ಕೊಂಬೆಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ಉದ್ಯಾನದೊಳಗೂ ಒಣ ಮರ, ಕೊಂಬೆಗಳಿದ್ದು, ಪರಿಸರತಜ್ಞ ಯಲಪ್ಪ ರೆಡ್ಡಿ ನೇತೃತ್ವದ ತಂಡ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು “ಉದಯವಾಣಿ’ಗೆ ತಿಳಿಸಿದರು. 

ಕಬ್ಬನ್‌ ಪಾರ್ಕ್‌ನಲ್ಲಿ ಹಲವು ಮರಗಳ ಮೇಲೆ ಒಣ ಕೊಂಬೆಗಳು ಸಿಕ್ಕಿಕೊಂಡಿವೆ. ಜೋರಾಗಿ ಗಾಳಿ ಬೀಸಿದಾಗ ಕೊಂಬೆ ಬಿದ್ದು ಜನರಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಪುಟ್ಟ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಬರುವುದರಿಂದ ಈ ಬಗ್ಗೆ ಸಂಬಂಧ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು.
-ಕೆ.ಎಂ.ಲೋಕೇಶ, ಖಾಸಗಿ ಕಂಪನಿ ನೌಕರ

ಕಬ್ಬನ್‌ ಪಾರ್ಕ್‌ನಲ್ಲಿ ಒಣಮರಗಳು ಮತ್ತು ಮರಗಳ ಒಣ ಕೊಂಬೆಗಳು ಸಿಕ್ಕಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ತೋಟಗಾರಿಕಾ ಇಲಾಖೆ ಒಣ ಮರ ಮತ್ತು ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಲಿದೆ.
-ಮಹಾಂತೇಶ್‌ ಮುರುಗೋಡು, ತೋಟಗಾರಿಕೆ ಉಪ ನಿರ್ದೇಶಕರು

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next