Advertisement

Dreams: ಕನಸಿಗೂ ಒಂದು ಅರ್ಥವಿದೆ

12:16 PM Jan 15, 2024 | Team Udayavani |

ಸುತ್ತಲೂ ಕತ್ತಲು. ಎತ್ತ ನೋಡಿದರೂ ಕಣ್ಣಿನ ದೂರಕ್ಕೂ ಕತ್ತಲನ್ನು ಬಿಟ್ಟು ಬೇರೇನೂ ಇಲ್ಲ. ಆದರೂ ನಾನು ಮೆಲ್ಲನೆ ನಡೆಯುತ್ತಿದ್ದೆ. ಕಾಲಿಗೆ ಸಿಕ್ಕ ಮರದ ತುಂಡು ತಾಗಿ ಅಲ್ಲೇ ಒಮ್ಮೆಲೆ ಬಿದ್ದುಬಿಟ್ಟೆ. ಬಿದ್ದಾಗ ಕಾಲಿಗೆ ಬಲವಾಗಿಯೇ ತಾಗಿತು. ಕಾಲಿನ ನೋವಿಗೋ ಅಥವಾ ಕಾಲಲ್ಲಿ ಹರಿದ ರಕ್ತದ ಅನುಭವಕ್ಕೂ ಏನೋ ಕಣ್ಣಲ್ಲಿ ಹುಟ್ಟಿದ ನೀರು ನೆಲವ ಸೋಕುತ್ತಿತ್ತು. ಆದರೂ ಧೈರ್ಯಗೆಡದೆ ಹೇಗೋ ಸಿಕ್ಕ ದಾರಿಯಲ್ಲಿ ಮುಂದೆ ಸಾಗಿದೆ.ಆದರೂ ನಾನ್ಯಾಕೊ ಅತಿ ಎನ್ನುವಂತೆ ಅಳುತ್ತಿದ್ದೆ. ಯಾಕೆ ಎಂದು ನನಗೂ ಅರಿಯಲಿಲ್ಲ.

Advertisement

ಆದರೂ ಮುಂದಕ್ಕೆ ಸಾಗುತ್ತಾ ಸುತ್ತ ನೋಡಿದಾಗ ದೂರದಲ್ಲಿ ಎಲ್ಲೋ ಒಂದು ಕಡೆ ಸಣ್ಣ ಬೆಳಕು ಕಂಡಿತು.ಕೂಡಲೇ ಅಲ್ಲಿಗೆ ಓಡಿದೆ. ಆದರೆ ಆ ಬೆಳಕಿನ ಹತ್ತಿರ ನಾ ಹೋದಂತೆ ಅದು ದೂರ ದೂರ ಸಾಗುತ್ತಿತ್ತು. ಆದಷ್ಟು ಕಷ್ಟ ಪಟ್ಟು ಓಡಿದೆ. ಕಾಲಿನ ನೋವು ಮರೆತೇ ಹೋಗಿತ್ತು ಎನ್ನುವಂತೆ. ಓಡುವಾಗ ದಾರಿಯಲ್ಲಿ ಸಿಕ್ಕ ಸಿಕ್ಕ ಕಲ್ಲು ಮುಳ್ಳುಗಳನ್ನು ಮೆಟ್ಟಿಕೊಂಡು ಸಾಗಿದೆ ಪರಿಣಾಮ ಕಾಲಿನ ಅಡಿಯಲ್ಲಿಯು ರಕ್ತ ಬರುತ್ತಿತ್ತು.ಆದ್ರೆ ಒಮ್ಮೆಲೆ ಯಾಕೋ ಕಾಣುತ್ತಿದ್ದ ಬೆಳಕು ಮರೆಯಾಗುತ್ತ ಬಂತು. ಕಣ್ಣೆಲ್ಲಾ ಮಂಜಾಗಿ ತಲೆಯಲ್ಲಿ ಏನೋ ಭಾರೀ ನೋವು ಪ್ರಾರಂಭವಾಯಿತು.

ಕಣ್ಣು ಮುಚ್ಚಿಕೊಂಡು ಅಲ್ಲೇ ಕುಳಿತಿದ್ದ ನನ್ನ ಮೈಮೇಲೆಲ್ಲಾ ನೀರಿನ ಅಭಿಷೇಕ ಆದಂತಾಗಿ ಒಮ್ಮೆಲೆ ಕಣಿºಟ್ಟು ಸುತ್ತ ನೋಡಿದೆ. ಗಡಿಯಾರ 7 ಗಂಟೆಯನ್ನು ತೋರಿಸುತ್ತಿತ್ತು. ಹತ್ತಿರದಲ್ಲಿ ತಂಗಿ ಒಂದು ಪಾತ್ರೆ ಹಿಡಿದುಕೊಂಡು ಕಣ್ಣುಗಳನ್ನೂ ಕೆಂಪಾಗಿಸಿಕೊಂಡು ನಿಂತಿದ್ದಳು. ತಲೆಯ ಬಳಿ ಅತ್ತೆಯ ಮಗು ಕೂದಲು ಹಿಡಿದು ಎಳೆಯುತ್ತಿತ್ತು. ತಂಗಿ ಕೂಡಲೇ ತನ್ನ ಸಹಸ್ರನಾಮವನ್ನು ಪ್ರಾರಂಭಿಸಿದಳು. ನಾನೋ ಅವಳ ಮಾತಿಗೆ ಕಿವಿ ಕೊಡದೆ ಸುಮ್ಮನೆ ಎದ್ದು ನಿತ್ಯಕರ್ಮಗಳನ್ನು ಮಾಡಿ ಮುಗಿಸಿದೆ.

ನನಗೆ ನಾನು ಕಂಡದ್ದು ಕನಸು ಎಂದು ತಿಳಿಯಲು ಬಹಳಷ್ಟು ಸಮಯ ಹಿಡಿದಿತ್ತು. ಕಾರಣ ನಾನು ಕಂಡದ್ದು ತುಂಬಾ ಗೋಜಲು ಗೋಜಲಾದ ಕನಸು. ಕೆಲಸಕ್ಕೆ ಹೋದರೂ ದಿನವಿಡೀ ಅದೇ ಯೋಚನೆ. ಯಾಕೋ ಕನಸು ನನ್ನ ಜೀವನಕ್ಕೆ ತುಂಬಾ ಹತ್ತಿರವಿದೆ ಎಂದೆನಿಸಿಬಿಟ್ಟಿತ್ತು. ನಾನು ಕಲಿಯುತ್ತಿದ್ದಾಗ ಅದು ಮಾಡಬೇಕು ಇದು ಮಾಡಬೇಕು ಎಂದು ಹಲವು ಕನಸುಗಳನ್ನು ಹೊತ್ತ ನನಗೆ ಇನ್ನೂ ನನ್ನ ಕನಸನ್ನು ಪೂರೈಸಲು ಸಾಧ್ಯವಾಗಲಿಲ್ಲ.

ಕನಸಲ್ಲಿ ಕಂಡ ಆ ಬೆಳಕು ನನ್ನ ಜೀವನದ ಕನಸಾಗಿತ್ತು. ಮಾಡಲೇ ಬೇಕೆಂದು ಆಸೆ ಪಟ್ಟಿದ್ದ ವಿಷಯವಾಗಿತ್ತು. ಆದರೆ ಜೀವನದಲ್ಲಿನ ಏರುಪೇರಿನಿಂದಾಗಿಯೋ ಏನೋ ಎಲ್ಲವೂ ಬದಿಗೆ ಸೇರಿಸಲಾಗಿತ್ತು. ನಾನಿನ್ನೂ ಕನಸಲ್ಲಿ ಕಂಡಂತೆ ಕತ್ತಲೆಯಲ್ಲಿಯೇ ಇದ್ದೇನೆಂದು ಮನ ಸಾರಿ ಸಾರಿ ಹೇಳಿತು. ಆಗಲೇ ನಿಶ್ಚಯಿಸಿದೆ ಏನೇ ಆಗಲಿ ನನ್ನ ಆ ಬೆಳಕನ್ನು ಹಿಡಿಯಲೇ ಬೇಕೆಂದು. ನನ್ನ ಕನಸನ್ನು ಮುಟ್ಟಲೇ ಬೇಕೆಂದು.

Advertisement

ಕೆಲವೊಮ್ಮೆ ನಮ್ಮ ಅರಿವಿಗೆ ಬಾರದ ಎಷ್ಟೋ ವಿಷಯಗಳು ನಮ್ಮ ಒಳ ಮನಸ್ಸಿಗೆ ತಿಳಿಯುತ್ತದಂತೆ. ಹಾಗೆಯೇ ಅಂತಹ ವಿಷಯಗಳು ಕನಸಿನ ಮೂಲಕ ನಮ್ಮ ಅರಿವಿನ ತೊಟ್ಟಿಲನ್ನು ಸೇರಿ ನಮಗೆ ನೆನಪಿಸುತ್ತದೆ. ಯಾವಾಗಲೋ ಏನೋ ಕನಸನ್ನು ಹೊತ್ತಿದ್ದ ನನಗೆ ಜೀವನದ ಕಲ್ಲು ಮುಳ್ಳುಗಳ ನಡುವೆ ಅದನ್ನು ತಲುಪಲು ಕಷ್ಟವಾಗಿತ್ತು. ಅದನ್ನೇ ನನಗೆ ಬೆಳಗ್ಗೆ ಬಿದ್ದ ಕನಸು ತುಂಬಾ ಸೂಕ್ಷ್ಮವಾಗಿ ಹೇಳಿತು. ನಾನೇನು ಮರೆತಿದ್ದೇನೆ ಎಂಬುದನ್ನು ತಿಳಿಸಿ ಹೇಳಿತು. ಕೆಲವೊಮ್ಮೆ ನಿದ್ದೆಯಲ್ಲಿ ಬೀಳುವ ಕನಸುಗಳಿಗೆ ಅರ್ಥವಿಲ್ಲ ಎಂದೆನಿಸಿದರೂ ಅದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿದಾಗ ಅದರ ಅರ್ಥ ಅರಿಯಲು ಸಾಧ್ಯ.

ಪೂರ್ಣಶ್ರೀ ಕೆ.

ಎಸ್‌ಡಿಎಂ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next