Advertisement

ಕತ್ತಲಾಗಲೀ, ಹಗಲಾಗಲೀ ಇಲ್ಲಿ ಬೀಳುವುದು ಸಹಜ ಆಗಿದೆ!

07:30 PM Feb 08, 2022 | Team Udayavani |

ಕುಂದಾಪುರ: ಕತ್ತಲಾಗಲೀ, ಹಗಲಾಗಲೀ ಇಲ್ಲಿ ಪಾದಚಾರಿ ಪಥದಲ್ಲಿ ನಡೆದರೆ ಚರಂಡಿಗೆ ಬೀಳುವುದು ಸಹಜ ಎಂಬಷ್ಟೇ ಆಗಿದೆ! ಸ್ಥಳೀಯವಾಗಿ ರಿಕ್ಷಾ ನಿಲ್ಲಿಸುವ ಚಾಲಕರಿಗಂತೂ ಪ್ರತಿನಿತ್ಯ ಇಲ್ಲಿ ಯಾರೂ ಬೀಳದಂತೆ ಕಾಯುವುದು, ಬಿದ್ದವರನ್ನು ಎತ್ತುವುದೇ ಹೆಚ್ಚುವರಿ ಕೆಲಸವಾಗಿದೆ.

Advertisement

ಚರಂಡಿ ಸ್ಲ್ಯಾಬ್
ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಬಳಿ ಚರಂಡಿ ಸ್ಲ್ಯಾಬ್ ಕಿತ್ತು ಹೋಗಿದೆ. ಒಂದಲ್ಲ, ಎರಡಲ್ಲ ಕೆಲವು ಕಡೆ. ಸರ್ವಿಸ್‌ ರಸ್ತೆಯಲ್ಲಿ ಅತ್ಯಧಿಕ ವಾಹನಗಳು ಓಡಾಡುವ ಕಾರಣ ಪಾದಚಾರಿ ಪಥ ಅಂದರೆ ಚರಂಡಿ ಮೇಲೆ ಅಳವಡಿಸಿದ ಸ್ಲ್ಯಾಬ್ ಮೇಲೆ ನಡೆಯಬೇಕಾದ್ದು ಅನಿವಾರ್ಯ.

ರಸ್ತೆಯಲ್ಲಿ ನಡೆದರೆ ಯಾವ ವಾಹನ ಎದುರಿನಿಂದ ಬರುವುದೋ, ಹಿಂದಿನಿಂದ ಬಂದು ಢಿಕ್ಕಿಯಾಗುವುದೋ ಎಂಬ ಆತಂಕ. ಅಂತಹ ಕೆಲವು ಘಟನೆಗಳೂ ನಡೆದಿವೆ.

ರಿಕ್ಷಾದವರ ನೆರವು
ಕೆಎಸ್‌ಆರ್‌ಟಿಸಿ ಸ್ಟಾಂಡ್‌ನ‌ ರಿಕ್ಷಾ ನಿಲ್ದಾಣ ಬಳಿ, ಕೆಎಸ್‌ಆರ್‌ಟಿಸಿ ಬಸ್‌ ತಂಗುದಾಣ ಪ್ರವೇಶಿಸುವಲ್ಲಿ ಸೇರಿದಂತೆ ಅಲ್ಲಲ್ಲಿ ಸ್ಲ್ಯಾಬ್ ಬಿದ್ದಿದೆ. ಅವಸರದಲ್ಲಿ, ಮಬ್ಬು ಬೆಳಕಿನಲ್ಲಿ ಬಂದರೆ ಜನ ಹೊಂಡಕ್ಕೆ ಬೀಳುತ್ತಾರೆ. ಅದಕ್ಕಾಗಿ ರಿಕ್ಷಾ ಚಾಲಕರು ಪಾಳಿ ಪ್ರಕಾರ ಕಾವಲು ಕಾಯುತ್ತಾರೆ. ಎಚ್ಚರಿಕೆ ನೀಡುತ್ತಾರೆ. ಅರಿವಿಗೆ ಬರದೇ ಬಿದ್ದವರ ರಕ್ಷಣೆಗೆ ಧಾವಿಸುತ್ತಾರೆ. ದ್ವಿಚಕ್ರ ವಾಹನಗಳ ಪಾಲಿಗೂ ಇದು ಅಪಾಯದ ಮಾದರಿಯಲ್ಲಿದೆ. ಬಸ್‌ ನಿಲ್ದಾಣಕ್ಕೆ ತೆರಳುವ ಬಸ್‌ಗಳಿಗೂ ಸ್ವಲ್ಪ ಆಯ ತಪ್ಪಿದರೂ ಚಕ್ರ ಚರಂಡಿಯಲ್ಲಿ ಎಂಬ ಸ್ಥಿತಿ ಇದೆ.

ಪ್ರಯಾಣಿಕರು
ಕೆಎಸ್‌ಆರ್‌ಟಿಸಿ ಮೂಲಕ ಪ್ರಯಾಣ ಬೆಳೆಸುವ ಮಂದಿ ಖಾಸಗಿ ಬಸ್‌ನಿಂದ ಇಲ್ಲೇ ಇಳಿಯುತ್ತಾರೆ. ಅಂತಹವರು ಬಸ್‌ನಿಂದ ನೇರ ಹೊಂಡಕ್ಕೆ ಕಾಲಿಟ್ಟದ್ದೂ ಇದೆ. ಹೆದ್ದಾರಿಯಲ್ಲಿ ದೀಪ ಅಳವಡಿಸಬೇಕಾದ ಇಲಾಖೆ, ಗುತ್ತಿಗೆದಾರರು ಇನ್ನೂ ನಿದ್ದೆ ಮಂಪರಿನಲ್ಲಿ ಇರುವ ಕಾರಣ ಬೆಳಕಿನ ವ್ಯವಸ್ಥೆಯೂ ಕೆಲವೊಮ್ಮೆ ಇರುವುದಿಲ್ಲ. ಬಸ್‌ ನಿಲ್ದಾಣದ ಬೆಳಕೇ ಆಧಾರ. ಆದರೆ ಅದು ಎಲ್ಲ ಹೊಂಡಗಳಿಗೆ ಬೀಳುವುದಿಲ್ಲ. ಹಾಗಾಗಿ ಹೊಂಡಕ್ಕೆ ಬೀಳುವುದು ಅನಿವಾರ್ಯ ಎಂದಾಗಿದೆ.

Advertisement

ಸರಿಪಡಿಸಲಿ
ಈ ಚರಂಡಿಯನ್ನು ಹೆದ್ದಾರಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯಾಗಲೀ, ಪುರಸಭೆಯಾಗಲೀ ಸರಿಪಡಿಸಲಿ ಎಂದು ಸಾರ್ವಜನಿಕರು ಅದೆಷ್ಟೋ ಸಮಯದಿಂದ ಕಾಯುತ್ತಿದ್ದಾರೆ. ಆದರೆ ಆಡಳಿತಶಾಹಿಗೆ ಕಾಣಿಸುತ್ತಲೇ ಇಲ್ಲ. ಜನರಿಗೂ ಮನವಿ ನೀಡಿ ನೀಡಿ ಸಾಕಾಗಿದೆ.

ತೊಂದರೆ ಆಗುತ್ತಿದೆ
ಸಾರ್ವಜನಿಕರಿಗೆ ಈ ಹೊಂಡಗಳಿಂದ ತೊಂದರೆ ಆಗುತ್ತಿದೆ. ತತ್‌ಕ್ಷಣ ಸಂಬಂಧಪಟ್ಟವರು ಇದನ್ನು ದುರಸ್ತಿ ಮಾಡಬೇಕಿದೆ.
-ರಾಜೇಶ್‌ ಕಡ್ಗಿಮನೆ, ಕುಂದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next