Advertisement

ಟಾಟಾ ಮಾರ್ಕೊಪೋಲೊ ಮೋಟಾರ್ಸ್ ಬಿಕ್ಕಟ್ಟು ಬಹುತೇಕ ಇತ್ಯರ್ಥ

04:29 PM Jul 18, 2022 | Team Udayavani |

ಬೆಂಗಳೂರು: ತೀವ್ರ ಕಂಗಟ್ಟಾಗಿ ಪರಿಣಮಿಸಿದ್ದ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಮಾರ್ಕೊಪೋಲೊ ಮೋಟಾರ್ಸ್ ಕಂಪನಿಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳು ಸಮ್ಮತಿಸಿವೆ.

Advertisement

ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ ಅವರ ಕಚೇರಿ ಕೊಠಡಿಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಜನಪ್ರತಿನಿಗಳು, ಟಾಟಾ ಮಾರ್ಕೊಪೋಲೊ ಮೋಟಾರ್ಸ್ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕೆಂಬ ಸಚಿವ ಮುರುಗೇಶ್ ನಿರಾಣಿ ಅವರ ಪ್ರಸ್ತಾವನೆಯನ್ನು ಸಭೆಯಲ್ಲಿದ್ದ ಎಲ್ಲರೂ ಸರ್ವಸಮ್ಮತದಿಂದ ಒಪ್ಪಿದರು.

ಕೈಗಾರಿಕೆಗಳು ಉಳಿಯಬೇಕು, ಜೊತೆಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಹಿತ ಕಾಯುವುದು ಸರ್ಕಾರದ ಉದ್ದೇಶ ಇದರಲ್ಲಿ ಯಾರಿಗೂ ಕೂಡ ಪ್ರತಿಷ್ಠೆ ಬೇಡ, ಎದುರಾಗಿರುವ ಸಮಸ್ಯೆಯನ್ನು ಒಟ್ಟಾಗಿ ಕುಳಿತು ಪರಿಹರಿಸಿಕೊಳ್ಳಬೇಕು ಎಂದು ನಿರಾಣಿ ಅವರು ಸಲಹೆ ಮಾಡಿದರು.

ಟಾಟಾ ಕಂಪೆನಿ ದೇಶದ ಆಸ್ತಿ. ಇಲ್ಲಿ ಲಾಭ, ನಷ್ಟಕ್ಕಿಂತ ಕಾರ್ಮಿಕರ ಹಿತ ಹಾಗೂ ಆಡಳಿತ ಮಂಡಳಿ ಎರಡೂ ಮುಖ್ಯ. ಪದೇ ಪದೇ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ, ಯಾರೂ ಕೂಡ ಪ್ರತಿಷ್ಠೆಗೆ ಹೋಗದೆ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು, ನಮಗೆ ಆಡಳಿತ ಮಂಡಳಿ ಬೇರೆ ಅಲ್ಲ , ಕಾರ್ಮಿಕರು ಬೇರೆ ಅಲ್ಲ ಇವರಿಬ್ಬರು ಒಂದೇ ನಾಣ್ಯದ ಎರಡು ಮುಖಗಳು. ಅದರಲ್ಲೂ ಟಾಟಾ ಕಂಪೆನಿಯೆಂದರೆ ಅದು ದೇಶದ ಆಸ್ತಿ. ಯಾರೂ ಕೂಡ ಇದನ್ನು ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಳ್ಳಬಾರದು ಎಂದು ಆಡಳಿತ ಮಂಡಳಿ ಮತ್ತು ಕಾರ್ಮಿಕರಿಗೆ ಮನವಿ ಮಾಡಿದರು.

Advertisement

ಸಭೆಯಲ್ಲಿ ಶಾಸಕರಾದ ಅಮೃತ್ ದೇಸಾಯಿ, ಅರವಿಂದ್ ಬೆಲ್ಲದ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ, ಕಾರ್ಯದರ್ಶಿ ಮನೋಜ್ ಜೈನ್ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next