ಪಾವಗಡ: ಪಟ್ಟಣದ ವೈ.ಇ.ರಂಗಯ್ಯ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧನೆ ಕುಂಠಿತವಾಗಿದ್ದು, ಪ್ರಾಂಶುಪಾಲರು ಮೊಬೈಲ್ ವೀಕ್ಷಣೆಗಷ್ಟೇ ಸೀಮಿತರಾಗಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಾಂಶುಪಾಲರಿಂದ ಕಾಲೇಜು ವ್ಯವಸ್ಥೆ ಹದಗಟ್ಟಿದೆ ಎಂದು ಪ್ರಾಂಶುಪಾಲ ಕೆ.ಅರ್.ನಾರಾಯಣ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿಲ್ಲ.
ಹೆಣ್ಣುಮಕ್ಕಳ ಶೌಚಗೃಹದಲ್ಲಿ ಆರು ತಿಂಗಳಿನಿಂದ ನೀರಿಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ, ವಿದ್ಯಾರ್ಥಿಗಳು ಸಮಸ್ಯೆ ಹೇಳಲು ಹೋದರೆ ಕೇಳದೆ, ಪ್ರಾಂಶು ಪಾಲರು ಮೊಬೈಲ್ ನೋಡುವುದರಲ್ಲಿ ನಿರತರಾಗಿರುತ್ತಾರೆ ಎಂದು ಅರೋಪಿಸಲಾಗಿದೆ.
ವರ್ಗಾವಣೆ ಪ್ರಮಾಣಪತ್ರ, ಘಟಿಕೋತ್ಸವ ಪ್ರಮಾಣಪತ್ರ, ವಿದ್ಯಾರ್ಥಿ ವೇತನವೂ ನಿಗದಿತ ಸಮಯಕ್ಕೆ ಬರುತ್ತಿಲ್ಲ. ರಜಾ ತೆರಳುವ ವೇಳೆ ಮತ್ತೂಬ್ಬರಿಗೆ ಜವಾಬ್ದಾರಿ ನೀಡದೆ ತೆರಳುತ್ತಾರೆ. ಹಲವು ಬಾರಿ ಪ್ರಾಂಶು ಪಾಲರ ಕಾಣಲು ಹೋದರೂ ಸಿಗುವುದಿಲ್ಲ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ಸಿಬ್ಬಂದಿ ನಡುವೆ ಮುಸಕಿನ ಗುದ್ದಾಟದಿಂದ ಕಾಲೇಜಿನಲ್ಲಿ ಶಿಕ್ಷಣ ವ್ಯವಸ್ಥೆ ಹದಗಟ್ಟಿದೆ. ಪ್ರಾಂಶುಪಾಲರು ಮೂರು ವರ್ಷಗಳಿಂದ ಯಾವುದೇ ತರಗತಿಯಲ್ಲಿ ಒಂದು ತಾಸು ಬೋಧನೆಯೂ ಮಾಡಿಲ್ಲ. ಕಾಲೇಜಿಗೆ ಬಂದರೆ ಮೊಬೈಲ್ ನೋಡಿಕೊಂಡು ಸಮಯ ಕಳೆಯುತ್ತಾರೆ ಎಂದು ಕೆಲವರು ಸಂದೇಶದಲ್ಲಿ ಆರೋಪಿಸಿದ್ದಾರೆ.