Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ದಿನಗಳನ್ನು ನೆನಪಿಸಿಕೊಂಡ ಅವರು, ಮೂವರು ವಿಶೇಷ ಚೇತನ ಮಕ್ಕಳ ಮೂಲಕ ಶಾಲೆ ಆರಂಭಿಸಿದ ಸಂಸ್ಥಾಪಕಿ ಶಾಂತಲಾ ಸುರೇಶ್ 2012ರ ಒಂದು ವರ್ಷ ಕಾಲ ಮನೆಯಲ್ಲಿಯೇ ಇದನ್ನು ನಡೆಸಿದರು. 2013ರಲ್ಲಿ ವಿದ್ಯುಕ್ತವಾಗಿ ಸ್ಥಾಪಿಸಿದ ಚೈತನ್ಯ ವಿಶೇಷ ಶಿಕ್ಷಣ ಶಾಲೆ ಸರ್ಕಾರದ ಯಾವುದೇ ಅನುದಾನ ಇಲ್ಲದೆ ಈಗ 45 ಮಕ್ಕಳು, 8 ಜನ ಶಿಕ್ಷಕರು ಹಾಗೂ ನಾಲ್ವರು ಶಿಕ್ಷಕೇತರ ಸಿಬ್ಬಂದಿ ವರ್ಗದ ಮೂಲಕ ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ. ಕಳೆದ 10 ವರ್ಷಗಳಲ್ಲಿ ಶಾಲೆ ನಡೆದು ಬಂದ ದಾರಿಯ ಅವಲೋಕನವೇ ದಶಮಾನೋತ್ಸವ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
Related Articles
Advertisement
ಶಾಲೆಯ ಸಂಸ್ಥಾಪಕಿ ಶಾಂತಲಾ ಸುರೇಶ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ನೂರಾರು ವಿಶೇಷ ಚೇತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದೇವೆ. ನಮ್ಮ ಶಾಲೆಯ ವಿಶೇಷ ಚೇತನ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದ ವಿಶೇಷ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡು 75ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ರಾಷ್ಟ್ರಮಟ್ಟದಲ್ಲಿ ನಾಲ್ವರಿಗೆ ಅವಕಾಶ ಸಿಕ್ಕಿದೆ. ಕಲಾಂಗಣ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ಬಹುಮಾನ ಸಿಕ್ಕಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹ ಶಾಲೆ ವತಿಯಿಂದ ನೀಡಲಾಗುತ್ತಿದೆ. ದಶಮಾನೋತ್ಸವ ಹಿನ್ನೆಲೆಯಲ್ಲಿ ಇನ್ನಷ್ಟು ಯೋಜನೆಗಳನ್ನು ರೂಪಿಸಿ ಅನುಷ್ಟಾನಕ್ಕೆ ತರುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಪೋಷಕರಲ್ಲಿ ಅನವಶ್ಯಕವಾದ ಭಯವೊಂದಿದೆ. ಮಕ್ಕಳನ್ನು ಈ ಶಾಲೆಗೆ ಸೇರಿಸಿದರೆ ಆ ಮಕ್ಕಳು ‘ಬ್ರಾಂಡ್’ ಆಗಿಬಿಡುತ್ತಾರೆ ಎಂಬ ಕಾರಣದಿಂದ ಶಾಲೆಗೆ ಮಕ್ಕಳನ್ನು ಬಿಡುತ್ತಿಲ್ಲ. ಇಂತಹ ಮಕ್ಕಳು ಕೇವಲ ಮನೆಗೆ ಸೀಮಿತರಾಗಿ ಅವರಲ್ಲಿನ ಪ್ರತಿಭೆಗಳನ್ನು ಗುರ್ತಿಸುವ, ಅವಕಾಶಗಳನ್ನು ಬಳಸಿಕೊಳ್ಳುವ ಕೆಲಸ ಆಗುತ್ತಿಲ್ಲ. ಈಗಾಗಲೇ ನಮ್ಮ ಶಾಲೆಯಲ್ಲಿ ಓದಿದ ಕೆಲವು ಮಕ್ಕಳು ಸ್ವಯಂ ಉದ್ಯೋಗಕ್ಕೆ ಮುಂದಾಗಿದ್ದಾರೆ. ಕಂಪ್ಯೂಟರ್ ಆಪರೇಟಿಂಗ್ ಕಲಿತಿದ್ದಾರೆ. ಹಾಗೆ ಮಕ್ಕಳಲ್ಲಿ ಧನಾತ್ಮಕತೆ ಹೆಚ್ಚಿಸಲಾದರೂ ನಮ್ಮ ಶಾಲೆಗೆ ಆ ಮಕ್ಕಳನ್ನು ಸೇರ್ಪಡೆ ಮಾಡಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಕೆ.ಎನ್., ನಿರ್ದೇಶಕ ಎಂ.ನಾಗರಾಜ್ ಉಪಸ್ಥಿತರಿದ್ದರು.