Advertisement

ಡ್ಯಾನ್ಸಿಂಗ್‌ ಸ್ಟಾರ್‌ ಶ್ರುತಿಯ ವಿಸ್ಮಯ ಲೋಕ

12:41 PM Oct 04, 2017 | Team Udayavani |

ಕನ್ನಡ ಚಿತ್ರರಂಗದಲ್ಲಿ ಆಗಾಗ ಒಂದಷ್ಟು ನಾಯಕಿಯರು ಅವರ ಸಿನಿ ಆಯ್ಕೆ, ಮಾಡುವ ಕಾರ್ಯಗಳ ಮೂಲಕ ಸುದ್ದಿಯಾಗುತ್ತಾರೆ. ಸದ್ಯ ಆ ತರಹದ ಒಂದು ಸುದ್ದಿ ಹಾಗೂ ಗಮನಕ್ಕೆ ಶ್ರುತಿ ಹರಿಹರನ್‌ ಕಾರಣವಾಗಿದ್ದಾರೆ. ನೀವು ಶ್ರುತಿ ಹರಿಹರನ್‌ ಅವರ ಜರ್ನಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ವಿಭಿನ್ನತೆ ಕಾಣುತ್ತದೆ. ಡ್ಯಾನ್ಸರ್‌ ಆಗಿ ಚಿತ್ರರಂಗಕ್ಕೆ ಬಂದ ಶ್ರುತಿ “ಲೂಸಿಯಾ’ ಮೂಲಕ ನಾಯಕಿಯಾಗಿ ಇವತ್ತು ಬಹುನಿರೀಕ್ಷಿತ “ತಾರಕ್‌’ ಹಾಗೂ “ದಿ ವಿಲನ್‌’ ಚಿತ್ರಕ್ಕೆ ನಾಯಕಿಯಾಗುವವರೆಗೆ ಬೆಳೆದಿದ್ದಾರೆ. ಸ್ಟಾರ್‌ ಸಿನಿಮಾಗಳನ್ನು ಇತ್ತೀಚೆಗಷ್ಟೇ ಮಾಡುತ್ತಿರುವ ಶ್ರುತಿ ಹರಿಹರನ್‌, ಈ ಮಧ್ಯೆ ಸಾಕಷ್ಟು ಹೊಸ ಪ್ರಯೋಗಗಳ ಚಿತ್ರಗಳಲ್ಲಿ ಪಾತ್ರವಾಗಿದ್ದಾರೆ. ಜೊತೆಗೆ ತಮ್ಮದೇ ಕಲಾತ್ಮಿಕ ಎಂಬ ಬ್ಯಾನರ್‌ ಹುಟ್ಟುಹಾಕಿ, ಅಲ್ಲಿ ಕಿರುಚಿತ್ರ ಕೂಡಾ ನಿರ್ಮಿಸುತ್ತಿದ್ದಾರೆ. ಇಂತಿಪ್ಪ ಶ್ರುತಿ ತಮ್ಮ ಸಿನಿಜರ್ನಿಯ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. ಅದು ಅವರದ್ದೇ ಮಾತುಗಳಲ್ಲಿವೆ … 


ನೈಸ್‌ ಜರ್ನಿ

ಕೆರಿಯರ್‌ ತುಂಬಾ ಖುಷಿಯಾಗಿ ಸಾಗುತ್ತಿದೆ. ಈ ಖುಷಿಗೆ ಕಾರಣ ಸಾಕಷ್ಟು ಕೆಲಸಗಳು ನಡೆಯುತ್ತಿರೋದು. ಅವೆಲ್ಲವೂ ನನಗೆ ತುಂಬಾನೇ ತೃಪ್ತಿಕೊಡುವ ಕೆಲಸಗಳೆಂಬುದು ಪ್ರಮುಖ ಅಂಶ. ಒಂದು ಕಡೆ ನಟನೆ, ಮತ್ತೂಂದು ಕಡೆ ನನ್ನ “ಕಲಾತ್ಮಿಕ’ ಪ್ರೊಡಕ್ಷನ್ಸ್‌ನಡಿ ಕಿರುಚಿತ್ರ ನಿರ್ಮಾಣ ನಡೆಯುತ್ತಿದೆ. ಈಗಾಗಲೇ ನನ್ನ ಬ್ಯಾನರ್‌ನಲ್ಲಿ “ಲಾಸ್ಟ್‌ ಕನ್ನಡಿಗ’ ಎಂಬ ಕಿರುಚಿತ್ರ ಮಾಡಿದ್ದೇನೆ. ಅದು ಸುಮಾರು ಕಿರುಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಈಗ ಅದನ್ನು ಬಿಡುಗಡೆ ಮಾಡಲು ಓಡಾಡುತ್ತಿದ್ದೇನೆ. ಆಗಸ್ಟ್‌ ಕೊನೆ ವಾರದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ. ಅದು ಬಿಟ್ಟರೆ, ಮತ್ತೂಂದು ಕಿರುಚಿತ್ರ ತಯಾರಾಗಿದೆ. “ರೀಟಾ’ ಎಂಬ ಕಿರುಚಿತ್ರ ಕೂಡಾ ಮುಗಿದಿದೆ. ಇದು ಕೂಡಾ ಸಂಪೂರ್ಣ ಹೊಸಬರ ತಂಡ. ರಚನ್‌ ಎನ್ನುವವರು ನಿರ್ದೇಶನ ಮಾಡಿದ್ದಾರೆ. ಶ್ರೇಯಾ ಅಂಚನ್‌, ರೂಪಾ ನಟರಾಜ್‌, ಅಭಿನವ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತುಂಬಾ ವಿಭಿನ್ನವಾದ ಕಾನ್ಸೆಪ್ಟ್. ಮದುವೆಯಾದ ನಂತರ ಹೆಂಡತಿ ಅನುಭವಿಸುವ ಸಮಸ್ಯೆಗಳನ್ನಿಟ್ಟುಕೊಂಡು ಕಾನೂನು ಮುಂದೆ ಬಂದರೆ ಕಾನೂನು ಏನು ಹೇಳುತ್ತದೆ. ನಮ್ಮ ಭಾರತದ ಕಾನೂನು ಯಾವ ರೀತಿ ಇದೆ ಎಂಬ ಅಂಶದೊಂದಿಗೆ ಈ ಕಿರು ಚಿತ್ರ ಸಾಗುತ್ತದೆ. ಇದರ ಜೊತೆಗೆ ನನ್ನ “ವಿಸ್ಮಯ’ ಚಿತ್ರ ಕೂಡಾ ಬಿಡುಗಡೆಗೆ ರೆಡಿಯಾಗಿದೆ. ಸದ್ಯ “ತಾರಕ್‌’ ಡಬ್ಬಿಂಗ್‌ ನಡೆಯುತ್ತಿದೆ. “ಉಪೇಂದ್ರ ಮತ್ತೆ ಬಾ’ ಬಿಡುಗಡೆಯ ಹಂತಕ್ಕೆ ಬಂದಿದೆ. “ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌’ ಕೂಡಾ ಮುಗಿದಿದೆ. ಇದಲ್ಲದೇ, ಸಂಚಾರಿ ವಿಜಯ್‌ ಜೊತೆಗಿನ ಸಿನಿಮಾ ಕೂಡಾ ರೆಡಿಯಾಗುತ್ತಿದೆ. ಮಲಯಾಳಂನಲ್ಲೂ ಒಂದು ಸಿನಿಮಾ ಮಾಡುತ್ತಿದ್ದೇನೆ. ಇಷ್ಟೆಲ್ಲಾ ಕೆಲಸ ಕಾರ್ಯಗಳು ಒಟ್ಟೊಟ್ಟಿಗೆ ನಡೆಯುತ್ತಿರುವುದರಿಂದ ಖುಷಿಯಾಗಿದ್ದೇನೆ. ಎಲ್ಲದಕ್ಕೂ ನನ್ನ ಕಡೆಯಿಂದ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ. 

Advertisement

ಎರಡು ಸಿನಿಮಾ ಮಾಡಿ ವಾಪಾಸ್‌ ಹೋಗಲು ಬಂದಿರಲಿಲ್ಲ
“ಲೂಸಿಯಾ’ದಿಂದ ನನ್ನ ಜರ್ನಿ ಆರಂಭವಾಗಿದ್ದು. ಈಗ ಇಲ್ಲಿತನಕ ಬಂದಿದೆ. ಇಷ್ಟೆಲ್ಲಾ ತಿರುವು ಪಡೆದುಕೊಳ್ಳಬಹುದೆಂದು ನಾನಂದುಕೊಂಡಿರಲಿಲ್ಲ. ಆದರೆ, ಒಂದಂತೂ ನಾನು ಸ್ಪಷ್ಟವಾಗಿದ್ದೆ. ಎಷ್ಟೇ ಕಷ್ಟವಾದರೂ ಎರಡು ಸಿನಿಮಾ ಮಾಡಿ ವಾಪಾಸ್‌ ಹೋಗಬಾರದೆಂದು. ಏನೇ ಮಾಡುವುದಾದರೂ ಚಿತ್ರರಂಗದಲ್ಲೇ ಮಾಡಬೇಕೆಂಬ ದೃಢ ನಿರ್ಧಾರವನ್ನು ನಾನು ಅವತ್ತೇ ಮಾಡಿದ್ದೆ. ಒಮ್ಮೊಮ್ಮೆ ಕೂತ್ಕೊಂಡು ಯೋಚನೆ ಮಾಡುವಾಗ ನನಗೆ ಆಶ್ಚರ್ಯವಾಗುತ್ತದೆ. ಏಕೆಂದರೆ, “ರಾಟೆ’ ಚಿತ್ರ ಬಿಡುಗಡೆಯಾದ ನಂತರ ನನಗೆ ಕೆಲಸ ಸಿಗಲೇ ಇಲ್ಲ. ತುಂಬಾ ಟೆನ್ಸ್‌ ಆಯ್ತು. ಏನ್‌ ಮಾಡೋದು? ಮತ್ತೆ ಡ್ಯಾನ್ಸ್‌ನತ್ತ ಹೋಗೋದಾ ಎಂದು ಆಲೋಚಿಸಿದೆ ಕೂಡಾ. ಆಗ ನನಗೆ “ಸಿಪಾಯಿ’, “ಮಾದ ಮಾನಸಿ’ ಚಿತ್ರಗಳು ಸಿಕ್ಕವು. ಸಿನಿಮಾ ಸೋತಾಗ, ಕೆಲಸ ಕಡಿಮೆ ಸಿಗತೊಡಗಿದಾಗ ಸಹಜವಾಗಿಯೇ ಒಂದು ಸಣ್ಣ ಭಯ ಕಾಡುತ್ತಿತ್ತು. ಆದರೆ, ಒಂದು ನಂಬಿಕೆ ಇತ್ತು. ಅದು ನನ್ನ ಡ್ಯಾನ್ಸ್‌ ಮೇಲೆ. ಹಾಗಾಗಿ, ಚಿತ್ರರಂಗ ಬಿಟ್ಟು ಹೋಗುವ ಬಗ್ಗೆ ನಾನು ಯಾವತ್ತೂ ಯೋಚನೆ ಮಾಡಿರಲಿಲ್ಲ. “ಗೋಧಿ ಬಣ್ಣ ಸಾಧಾರಾಣ ಮೈ ಕಟ್ಟು’ ಚಿತ್ರ ಹಿಟ್‌ ಆದ ಮೇಲೆ ನಾನು ತಿರುಗಿ ನೋಡಲಿಲ್ಲ. ಸಾಕಷ್ಟು ಅವಕಾಶಗಳು ಬಂದವು. 

ಡ್ಯಾನ್ಸ್‌ ನನ್ನ ದೊಡ್ಡ ಶಕ್ತಿ
ನಿಮಗೆ ಗೊತ್ತಿರುವಂತೆ ನಾನು ಮೂಲತಃ ಡ್ಯಾನ್ಸರ್‌. ನಟಿಯಾಗಿ ಅದು ನನ್ನ ಕೆರಿಯರ್‌ಗೆ ದೊಡ್ಡ ಶಕ್ತಿ ಎಂದರೆ ತಪ್ಪಲ್ಲ. ಒಂದು ಹೊಸ ಎನರ್ಜಿಯನ್ನು ಡ್ಯಾನ್ಸ್‌ ಕೊಡುತ್ತೆ. ಯಾವುದೇ ಹಿನ್ನೆಲೆ ಇಲ್ಲದೇ ಕ್ಯಾಮರಾ ಮುಂದೆ ಬಂದು ನಿಲ್ಲೋದಕ್ಕೂ, ಡ್ಯಾನ್ಸ್‌ ಹಿನ್ನೆಲೆ ಅಥವಾ ರಂಗಭೂಮಿಯಿಂದ ಬಂದು ನಿಲ್ಲೋದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಡ್ಯಾನ್ಸರ್‌ ಅಥವಾ ರಂಗಭೂಮಿಯವರು ತುಂಬಾ ಸುಲಭವಾಗಿ ನಟಿಸುತ್ತಾರೆ. ನನಗೂ ಆ ತರಹದ ಒಂದು ಶಕ್ತಿಕೊಟ್ಟಿದ್ದು ಡ್ಯಾನ್ಸ್‌ ಎಂದರೆ ತಪ್ಪಲ್ಲ. ನೀವು ಯಾವುದೇ ಪಾತ್ರಕ್ಕೆ, ದೃಶ್ಯಕ್ಕೆ ತುಂಬಾ ಸುಲಭವಾಗಿ ಒಗ್ಗಿಕೊಳ್ಳಬಹುದು. ನಿಮ್ಮ ದೇಹ ಕೂಡಾ ಅಷ್ಟೊಂದು ಫ್ರೀಯಾಗಿರುತ್ತದೆ. ಭರತನಾಟ್ಯದಲ್ಲಿ ಎಲ್ಲಾ ರಸಗಳು ಬಂದು ಹೋಗುತ್ತವೆ. ಹಾಗಾಗಿ, ನನಗೆ ನಟನೆಯಲ್ಲೂ ಡ್ಯಾನ್ಸ್‌ ದೊಡ್ಡ ಪ್ಲಸ್‌. ನಿಮ್ಮ ಹಾವ-ಭಾವಗಳ ಮೂಲಕ ಬೇಗನೇ ಜನರನ್ನು ತಲುಪಬಹುದು. ಹಾಗಾಗಿ, ನೀವು ಚಿತ್ರರಂಗಕ್ಕೆ ಬರುವ ಮುಂಚೆ, ಅದರಲ್ಲೂ ನಟಿಯರು ಡ್ಯಾನ್ಸ್‌ ಕಲಿತಿದ್ದರೆ ಅದು ಅವರ ಕೆರಿಯರ್‌ಗೆ ದೊಡ್ಡ ಪ್ಲಸ್‌ ಆಗುತ್ತದೆ.

ಸ್ಟಾರ್‌ ಚಿತ್ರಗಳು ಕೊಟ್ಟ ಹೊಸ ಅನುಭವ
ನನಗೆ ಸ್ಟಾರ್‌ ಸಿನಿಮಾ ಹೊಸ ಅನುಭವ ಎಂದರೆ ತಪ್ಪಲ್ಲ. ಸ್ಟಾರ್‌ ಸಿನಿಮಾಗಳಿಗೂ, ಹೊಸಬರ ಸಿನಿಮಾಗಳ ಚಿತ್ರೀಕರಣಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಮುಖ್ಯವಾಗಿ ವಾತಾವರಣದಲ್ಲಿ ತುಂಬಾ ವಿಭಿನ್ನತೆ ಕಾಣುತ್ತದೆ. ಅದು ಯೂನಿಟ್‌ನಿಂದ ಹಿಡಿದು ಪ್ರತಿಯೊಂದರಲ್ಲೂ. ಅದರಲ್ಲೂ ದರ್ಶನ್‌ ಅವರ ಜೊತೆ “ತಾರಕ್‌’ನಲ್ಲಿ ನಟಿಸಿದ್ದು ಒಂದು ವಿಶೇಷ ಅನುಭವ ಕೊಟ್ಟಿತೆಂದರೆ ತಪ್ಪಲ್ಲ. ಶೂಟಿಂಗ್‌ ನಡೆಯುವಾಗ ಅವರನ್ನು ನೋಡಲು ಅದೆಷ್ಟೋ ಮಂದಿ ಅಭಿಮಾನಿಗಳು ಬಂದು ಸಂಜೆವರೆಗೂ ಇರುತ್ತಿದ್ದರು. ಅಷ್ಟೊಂದು ಮಂದಿಯ ಮಧ್ಯೆ ಚಿತ್ರೀಕರಣ ಮಾಡಬೇಕಿತ್ತು. ಅದೇ ಹೊಸಬರ ಸಿನಿಮಾವಾದರೆ ಅಲ್ಲಿ ಹೆಚ್ಚು ಜನ ಬರೋದಿಲ್ಲ. ನನಗೆ ಈ ತರಹದ ವಾತಾವರಣ ತುಂಬಾನೇ ಹೊಸದು. ಅತ್ತ ಕಡೆ ಹೊಸಬರ ಸಿನಿಮಾ, ಇತ್ತ ಕಡೆ ಸ್ಟಾರ್‌ಗಳ ಸಿನಿಮಾ. ನನಗೆ ವೈಯಕ್ತಿಕವಾಗಿ ಇದು ಒಳ್ಳೆಯ ಬ್ಯಾಲೆನ್ಸ್‌. ಯಾವುದೇ ಒಂದು ಕೆಟಗರಿಗೆ ಸ್ಟಿಕ್‌ ಆಗೋದು ಕೂಡಾ ನನಗೆ ಇಷ್ಟವಿಲ್ಲ. ಆ ನಿಟ್ಟಿನಲ್ಲೇ ನಾನು ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದೇನೆ ಕೂಡಾ. 

ಮಾರ್ಕೆಟ್‌ ವ್ಯಾಲ್ಯೂ ಹಾಗೂ ಕ್ರಿಯೇಟಿವ್‌ ಸಿನ್ಮಾ
ನಾನು ಮೊದಲೇ ಹೇಳಿದಂತೆ ಎರಡನ್ನೂ ಬ್ಯಾಲೆನ್ಸ್‌ ಮಾಡಿಕೊಂಡು ಬರುತ್ತಿರುವ ಖುಷಿ ನನಗಿದೆ. ನನಗೆ ಕೇವಲ ಸ್ಟಾರ್‌ ಸಿನಿಮಾಗಳಲ್ಲೇ ಮಾಡುತ್ತಾ, ಮಾರ್ಕೆಟ್‌ ವ್ಯಾಲ್ಯೂ ಹೆಚ್ಚಿಸಿಕೊಳ್ಳಬೇಕೆಂಬ ಯಾವ ಆಸೆಯೂ ಇಲ್ಲ. ಸ್ಟಾರ್‌ ಸಿನಿಮಾಗಳಿಂದ ಒಳ್ಳೆಯ ಸಂಭಾವನೆ, ಮಾರ್ಕೇಟ್‌ ವ್ಯಾಲ್ಯೂ ಬರುತ್ತದೆ. ಇದು ಒಂದು ಭಾಗವಾದರೆ, ನನ್ನ ವೈಯಕ್ತಿಕ ಖುಷಿಗಾಗಿಯೂ ನಾನು ಕೆಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ. ಅವೆಲ್ಲವೂ ಕ್ರಿಯೇಟಿವ್‌ ಖುಷಿ, ತೃಪ್ತಿಗಾಗಿ. ನನಗೆ ತುಂಬಾ ಸೂಕ್ಷ್ಮ ವಿಚಾರಗಳಿರುವ ಸಿನಿಮಾಗಳನ್ನು ಮಾಡೋದೆಂದರೆ ಇಷ್ಟ. ಸದ್ಯ ನಾನು ಒಪ್ಪಿಕೊಂಡಿರುವ “ಟೆಸ್ಲಾ’ ಚಿತ್ರದಲ್ಲಿ ಆ ತರಹದ ಒಂದು ಪಾತ್ರವಿದೆ. ಅದು ನಾಯಕಿ ಪ್ರಧಾನ ಚಿತ್ರ. ವಿನೋದ್‌ ಎನ್ನುವವರು ಆ ಸಿನಿಮಾದ ನಿರ್ದೇಶಕರು. ಐದು ವಿಭಿನ್ನ ಗೆಟಪ್‌ಗ್ಳು ಆ ಸಿನಿಮಾದಲ್ಲಿ ಬರುತ್ತವೆ. ಆ ಚಿತ್ರವನ್ನು ನನ್ನದೇ ಕಲಾತ್ಮಿಕ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಅದರ ಫ‌ಂಡಿಂಗ್‌ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದೇವೆ. ನನಗೆ ಆ ತರಹದ ವಿಭಿನ್ನ ಪ್ರಯತ್ನಗಳಲ್ಲಿ ತೊಡಗಿಸಿಕೊಳ್ಳೋದೆಂದರೆ ತುಂಬಾ ಇಷ್ಟ. ನಟಿಯಾಗಿ ಮಾಡಿದ್ದನ್ನೇ ಮಾಡುತ್ತಾ ಹೋದರೆ ಜನರ ಜೊತೆಗೆ ನಮಗೂ ಬೋರ್‌ ಆಗುತ್ತದೆ. ಹಾಗೆ ಆಗಲು ಬಿಡಬಾರದು ಎಂಬ ಕಾರಣಕ್ಕೆ ಏನಾದರೊಂದು ಹೊಸದನ್ನು ಪ್ರಯತ್ನಿಸುತ್ತಿರುತ್ತೇನೆ. 

Advertisement

ತೂಕವಿರುವ ಪಾತ್ರ
ಚಿತ್ರರಂಗದಲ್ಲಿ ಒಂದು ಮಾತಿದೆ. ಸ್ಟಾರ್‌ ಸಿನಿಮಾಗಳಲ್ಲಿ ನಾಯಕಿಯರಿಗೆ ಸ್ಕೋಪ್‌ ಇರೋದಿಲ್ಲ. ಅವರ ಪಾತ್ರಕ್ಕೆ ಪ್ರಾಮುಖ್ಯತೆ ಸಿಗೋದಿಲ್ಲ ಎನ್ನುತ್ತಾರೆ. ನನ್ನಲ್ಲೂ ಅನೇಕರು ಈ ಪ್ರಶ್ನೆಯನ್ನು ಕೇಳಿದ್ದಾರೆ. ಒಂದಂತೂ ಹೇಳುತ್ತೇನೆ. ಸದ್ಯ ನಾನು ನಟಿಸಿರುವ ಎರಡು ಸ್ಟಾರ್‌ ಸಿನಿಮಾಗಳಲ್ಲೂ ನನಗೆ ಒಳ್ಳೆಯ ಪಾತ್ರ ಸಿಕ್ಕಿದೆ. “ತಾರಕ್‌’ ನಿರ್ದೇಶಕ ಪ್ರಕಾಶ್‌ ಅವರು ಎಲ್ಲಾ ಪಾತ್ರಗಳನ್ನು ಸಮನವಾಗಿ ಪೋಷಿಸಿದ್ದಾರೆ. ಅವರು ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದಾಗಲೇ ಇಲ್ಲಿ ನನಗೆ ಒಳ್ಳೆಯ ಪಾತ್ರ ಸಿಗುತ್ತದೆಂಬ ನಂಬಿಕೆ ಇತ್ತು. ಅದು ನಿಜವಾಗಿದೆ ಕೂಡಾ. ಇನ್ನು, “ಉಪೇಂದ್ರ ಮತ್ತೆ ಬಾ’ ಚಿತ್ರದಲ್ಲೂ ಪ್ರಮುಖ ಪಾತ್ರವೇ ಸಿಕ್ಕಿದೆ. “ದಿ ವಿಲನ್‌’ನಲ್ಲಿ ನನ್ನ ಭಾಗದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ. ಅಲ್ಲಿ ಚಿಕ್ಕ ಪಾತ್ರ. ಆದರೆ ಚೆನ್ನಾಗಿದೆ. ಇಲ್ಲಿವರೆಗಿನ ನನ್ನ ಕೆರಿಯರ್‌ ಖುಷಿ ಕೊಟ್ಟಿದೆ. “ಈ ಪಾತ್ರವನ್ನು ನೀವು ಮಾಡಿದರೇನೇ ಚೆಂದ’ ಎನ್ನುತ್ತಾ ಒಂದಷ್ಟು ಅವಕಾಶಗಳು ಬರುತ್ತಿವೆ. ಅದು ನನ್ನ ಅದೃಷ್ಟ ಎನ್ನಬಹುದು. ಇದೇ ರೀತಿ ಮುಂದುವರೆಯಲಿ ಎಂದು ನಾನು ಬಯಸುತ್ತೇನೆ. ನನಗೆ ಸೋಲೋ ಹೀರೋಯಿನ್‌ ಆಗಿಯೇ ಕಾಣಿಸಿಕೊಳ್ಳಬೇಕು, ನಾನೊಬ್ಬಳೇ ಮಿಂಚಬೇಕೆಂಬ ಆಸೆ ಇಲ್ಲ. ಯಾವುದೇ ಸಿನಿಮಾದಲ್ಲೂ ನಾನು ನೋಡೊದು ಕಥೆ ಹಾಗೂ ಅದರಲ್ಲಿನ ನನ್ನ ಪಾತ್ರ. ಆ ಕಾರಣಕ್ಕಾಗಿ “ಉರ್ವಿ’, “ಹ್ಯಾಪಿ ನ್ಯೂ ಇಯರ್‌’ ಚಿತ್ರಗಳನ್ನು ಮಾಡಿದೆ. ಚಿತ್ರರಂಗದಲ್ಲಿ ಈಗ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರವುದರಿಂದ ಕೇವಲ ನನಗೊಬ್ಬಳಿಗಲ್ಲ, ಬಹುತೇಕ ಎಲ್ಲಾ ನಟಿಯರಿಗೂ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ.

ತೃಪ್ತಿಕೊಟ್ಟ ಸಿನಿಮಾ
“ಬ್ಯೂಟಿಫ‌ುಲ್‌ ಮನಸುಗಳು’ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ತುಂಬಾ ಖುಷಿ ಹಾಗೂ ತೃಪ್ತಿಕೊಟ್ಟ ಚಿತ್ರಗಳು. ಆ ಎರಡೂ ಪಾತ್ರಗಳಲ್ಲಿ ಸಾಕಷ್ಟು ವಿಭಿನ್ನತೆ ಹಾಗೂ ಹೊಸತನವಿತ್ತು. ಜನ ಕೂಡಾ ಅದನ್ನು ಇಷ್ಟಪಟ್ಟರು. ಅದು ಬಿಟ್ಟರೆ ಈಗಷ್ಟೇ ಚಿತ್ರೀಕರಣ ಮುಗಿಸಿರುವ “ತಾರಕ್‌’ನಲ್ಲಿ ಒಳ್ಳೆಯ ಪಾತ್ರವಿದೆ. ಆ ಪಾತ್ರ ಕೂಡಾ ಗಮನಸೆಳೆಯುವಂತಿದೆ.

ದರ್ಶನ್‌ ಜರ್ನಿಯೇ ಪ್ರೇರಣೆ
ದರ್ಶನ್‌ ಚಿತ್ರರಂಗದಲ್ಲಿ ಬೆಳೆದು ಬಂದ ಜರ್ನಿ ಇವತ್ತಿನ ಅನೇಕರಿಗೆ ಪ್ರೇರಣೆ ಎಂದರೆ ತಪ್ಪಲ್ಲ. ಅವರ ಜೊತೆ ನಟಿಸಿದ ಖುಷಿ ಇದೆ. ದೊಡ್ಡ ಸ್ಟಾರ್‌ ಅನ್ನೋದನ್ನು ಬಿಟ್ಟು ಅವರೊಳಗೊಬ್ಬ ಹೊಸ ಮನುಷ್ಯನನ್ನು ನೋಡಿದೆ. ಸೆಟ್‌ನಲ್ಲಿ ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. 

ಸಂಭಾವನೆ
ಹೀರೋಗಳಿಗೆ ಹೋಲಿಸಿದರೆ ನಾಯಕಿಯರಿಗೆ ಸಂಭಾವನೆ ಕಡಿಮೆ ಅನ್ನೋದು ನಿಜ. ಒಂದು ಸಿನಿಮಾದಲ್ಲಿ ನಿಮ್ಮ ಪಾತ್ರ ಹಾಗೂ ಆ ಪಾತ್ರದ ಮಹತ್ವದ ಮೇಲೆ ಸಂಭಾವನೆ ನಾಯಕಿಯ ನಿಗದಿಯಾಗಬೇಕು. ಅದು ಬಿಟ್ಟು ಹೀರೋಗೆ ಕೊಟ್ಟಷ್ಟೇ ನನಗೂ ಕೊಡಿ ಎಂದು ಕೇಳ್ಳೋಕ್ಕಾಗಲ್ಲ. ಸಂಭಾವನೆ ವಿಚಾರದಲ್ಲಿ ನಾನು ತೃಪ್ತಳಾಗಿದ್ದೇನೆ. 

ಕಾಂಟ್ರಾವರ್ಸಿಯಿಂದ ದೂರ
ನಾನು ತುಂಬಾ ಪ್ರೈವೇಟ್‌ ಪರ್ಸನ್‌. ನಾನಾಯಿತು ನನ್ನ ಕೆಲಸವಾಯಿತು ಎಂದಿರುತ್ತೇನೆ. ಶೂಟಿಂಗ್‌ ಕೂಡಲೇ ಮನೆಗೆ ಬರುತ್ತೇನೆ, ಇಲ್ವಾ ನಮ್ಮದೇ ಆದ ಒಂದು ಫ್ರೆಂಡ್ಸ್‌ ಗ್ಯಾಂಗ್‌ ಇದೆ. ಅಲ್ಲಿರುತ್ತೇನೆ. ನಾನು ತುಂಬಾ ನಾರ್ಮಲ್‌ ಆಗಿರೋದರಿಂದ ಕಾಂಟ್ರಾವರ್ಸಿಯಿಂದಲೂ ದೂರ ಇದ್ದೇನೆ ಎನ್ನಬಹುದು.

ರವಿಪ್ರಕಾಶ್‌ ರೈ; ಚಿತ್ರಗಳು: ಮನು ಮತ್ತು ಸಂಗ್ರಹ

Advertisement

Udayavani is now on Telegram. Click here to join our channel and stay updated with the latest news.

Next