Advertisement

ರಾಜ್ಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಮರ

03:23 PM Jul 09, 2023 | Team Udayavani |

ಸುಬ್ರಹ್ಮಣ್ಯ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಾಲು ಸಾಲು ಹಾಲುಮಡ್ಡಿ (ಧೂಪದ) ಮರಗಳಿದ್ದು, ತೆರವುಗೊಳಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಸಾರ್ವಜನಿಕರ ಬೇಡಿಕೆಗೆ ಇನ್ನೂ ಮಾನ್ಯತೆ ದೊರೆತಿಲ್ಲ. ಇದರಿಂದ ವಾಹನ ಸವಾರರು ಆತಂಕದಲ್ಲೇ ರಸ್ತೆಯಲ್ಲಿ ಸಂಚರಿಸಬೇಕಾದ ಸ್ಥಿತಿಯಿದೆ.

Advertisement

ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಐತ್ತೂರು ಬಳಿಯಿಂದ ಕೈಕಂಬದವರೆಗೆ ಹಲವೆಡೆ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಹಾಲುಮಡ್ಡಿ ಮರಗಳಿವೆ. ಗಾಳಿ ಮಳೆಗೆ ರಸ್ತೆಗೆ ಮರ ಬೀಳುವುದದಿಂದ ಸಾರ್ವಜನಿಕರಿಗೆ ಇಲ್ಲಿ ಅಪಾಯ ತಪ್ಪಿದ್ದಲ್ಲ.

ಸುಮಾರು ಹತ್ತು ಕಿ.ಮೀ. ಉದ್ದಕ್ಕೆ ನೂರಾರು ಹಾಲು ಮಡ್ಡಿ ಮರಗಳು ರಸ್ತೆ ಬದಿಯಲ್ಲಿದ್ದು, ಹತ್ತಾರು ವರ್ಷಗಳಿಂದ ಇದರಿಂದ ಸಮಸ್ಯೆಯಾಗುತ್ತಲೇ ಇದೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಎಂದು ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಮಾಡಿದರೂ ಪ್ರಯೋಜನ ಕಂಡು ಬಂದಿಲ್ಲ ಎಂಬ ದೂರು ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಹಾಲುಮಡ್ಡಿ ಮರದಿಂದ ಧೂಪದ ಎಣ್ಣೆ ತೆಗೆಯುವ ಉದ್ದೇಶದಿಂದ ವರ್ಷಕ್ಕೊಮ್ಮೆ ಟೆಂಡರ್‌ ಕರೆದು ಧೂಪದ ಎಣ್ಣೆ ತೆಗೆಯಲು ಅನುಮತಿ ನೀಡಲಾಗುತ್ತದೆ. ಟೆಂಡರ್‌ ಪಡೆದವರು ವರ್ಷಪೂರ್ತಿ ಮರವನ್ನು ಕೆತ್ತಿ ಎಣ್ಣೆಯ ಗಟ್ಟಿ ತೆಗೆಯುತ್ತಾರೆ. ನಿಯಮ ಪ್ರಕಾರ ಮರದ ಒಂದು ಭಾಗದಿಂದ ಮಾತ್ರ ಮರವನ್ನು ಕೆತ್ತಿ ಎಣ್ಣೆ ಗಟ್ಟಿ ತೆಗೆಯಬೇಕು. ಆದರೆ ದುರಾಸೆಗೆ ಬಿದ್ದು ಮೂರೂ ಕಡೆ ಮರವನ್ನು ಕೆತ್ತುತ್ತಿದ್ದಾರೆ. ಇದರಿಂದ ಕೆತ್ತಿದ ಭಾಗದಲ್ಲಿ ಹುಳ ಕೊರೆಯಲು ಪ್ರಾರಂಭಿಸಿ ಮರ ಸಾಯಲು ಪ್ರಾರಂಭವಾಗುತ್ತದೆ. ಸ್ವಲ್ಪ ಗಾಳಿ ಬಂದರೂ ಮರ ಮುರಿದು ಬೀಳುತ್ತದೆ.

ಹಲವು ಅಪಾಯಕಾರಿ ಘಟನೆಗಳು
ಇತ್ತೀಚೆಗೆ ನೆಟ್ಟಣದಲ್ಲಿ ಹಾಲುಮಡ್ಡಿ ಮರಗಳು ಹೆದ್ದಾರಿಗೆ ಬಿದ್ದು ಅನಾಹುತ ಉಂಟಾಗಿತ್ತು. ಅದೃಷ್ಟವಶಾತ್‌ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂರು ವರ್ಷದ ಹಿಂದೆ ಕಲ್ಲಾಜೆ ಎಂಬಲ್ಲಿ ಹಾಲುಮಡ್ಡಿ ಮರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್‌ನ ಮೇಲೆ ಬಿದ್ದು ಬೈಕ್‌ ಸವಾರ ಮೃತಪಟ್ಟಿದ್ದರು. ಐದು ವರ್ಷದ ಹಿಂದೆ ಬಿಳಿನೆಲೆಯಲ್ಲಿ ಹಾಲುಮಡ್ಡಿ ಮರಗಳು ವಿದ್ಯುತ್‌ಲೈನ್‌ ಮೇಲೆ ಬಿದ್ದು ಐವತ್ತಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಹಾನಿಗೊಳಗಾಗಿ ವಾರಗಟ್ಟಲೆ ವಿದ್ಯುತ್‌ ವ್ಯತ್ಯಯವಾಗಿರುವುದಲ್ಲದೆ, ಮೆಸ್ಕಾಂಗೆ ಲಕ್ಷಾಂತರ ರೂ. ನಷ್ಟ ಉಂಟಾಗಿತ್ತು.

Advertisement

ಹಾಲುಮಡ್ಡಿ ಮರದ ದುರಂತದಿಂದ ಹಲವಾರು ವಾಹನಗಳಿಗೆ ಹಾನಿ, ಪ್ರಾಣ ಹಾನಿ, ಮೆಸ್ಕಾಂಗೆ ನಷ್ಟ ಉಂಟಾಗುತ್ತಿದ್ದರೂ ಕೆಲವೇ ಕೆಲವು ಮರ ತೆರವು ಮಾಡಿ ಉಳಿದವುಗಳನ್ನು ಹಾಗೆಯೇ ಬಿಡಲಾಗಿದೆ. ಅನಾಹುತ ಉಂಟಾದಾಗ ಸ್ಥಳಕ್ಕೆ ಬಂದು ಬಿದ್ದ ಮರದ ತೆರವು ಕಾರ್ಯದಲ್ಲಿ ತೊಡಗುತ್ತಾರೆ ಹೊರತು ಅಪಾಯಕಾರಿ ಮರಗಳ ಪೂರ್ತಿ ತೆರವಿಗೆ ಮುಂದಾಗುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ವರದಿ ಸಲ್ಲಿಸಲಾಗಿದೆ
ರಸ್ತೆ ಬದಿಯ ಅಪಾಯಕಾರಿ ಮರಗಳ ತೆರವಿನ ಬಗ್ಗೆ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ಅವರ ಸೂಚನೆಯಂತೆ ಮುಂದುವರಿಯುತ್ತೇವೆ.
-ರಾಘವೇಂದ್ರ ಎಚ್‌.ಪಿ., ವಲಯಾರ ಣ್ಯಾಧಿಕಾರಿ, ಸುಬ್ರಹ್ಮಣ್ಯ ವಲಯ

ಮನವಿ ಸಲ್ಲಿಸಲಾಗಿದೆ
ರಸ್ತೆ ಬದಿಯ ಅಪಾಯಕಾರಿ ಹಾಲುಮಡ್ಡಿ ಮರಗಳ ತೆರವಿಗೆ ಗ್ರಾ.ಪಂ. ಸಾಮಾನ್ಯ ಸಭೆ, ಗ್ರಾಮಸಭೆಗಳಲ್ಲಿ ನಿರ್ಣಯ ಮಾಡಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಹಾನಿಗಳು ಸಂಭವಿಸುತ್ತಿದ್ದರೂ ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ. ತತ್‌ಕ್ಷಣ ರಸ್ತೆ ಬದಿಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು.
-ಶಾರದಾ ದಿನೇಶ್‌,
ಉಪಾಧ್ಯಕ್ಷರು, ಬಿಳಿನೆಲೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next