ಬೆಂಗಳೂರು: ಹೋಟೆಲ್‌ನ ಕೊಠಡಿಯಲ್ಲಿ ಇಟ್ಟಿದ್ದ ಬಾಟಲಿಯಲ್ಲಿರುವುದು ಕುಡಿಯುವ ನೀರೆಂದು ಭಾವಿಸಿ ಆ್ಯಸಿಡ್ ಕುಡಿದ ಗ್ರಾಹಕನ ಬಾಯಿ ಸುಟ್ಟಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನವದೆಹಲಿ ಮೂಲದ ಅಶೋ ಮಿತ್ತಲ್(45) ಗಾಯಗೊಂಡವರು.
ಇತ್ತೀಚೆಗಷ್ಟೇ ನವದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ಅಶೋ ಮಿತ್ತಲ್ ಅವರು, ತಮ್ಮ ಪುತ್ರ ಶ್ರೂರುದ್ರಾಕ್ಷ್ ನನ್ನು ನಗರದ ಕುಂಬಳಗೋಡು ಬಳಿಯ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಸೇರಿಸಲು ಹೋಗುತ್ತಿದ್ದರು. ಕೆಂಗೇರಿ ಸಮೀಪದ ಮೈಸೂರು ರಸ್ತೆಯ ರಾಯಲ್ ಐರಾವತ್ ರೆಸಿಡೆನ್ಸಿ ಹೋಟೆಲ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದರು. ಅಲ್ಲಿಯೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಸ್ನಾನ ಮಾಡಿ ಕಾಲೇಜಿಗೆ ಕಡೆ ಹೊರಟ್ಟಿದ್ದರು. ಹೋಗುವಾಗ ಕೊಠಡಿಯಲ್ಲಿದ್ದ ನೀರಿನ ಬಾಟಲ್ ಅನ್ನು ಜತೆಗೆ ಕೊಂಡೊಯ್ದಿದ್ದರು. ಕಾಲೇಜು ಬಳಿ ನೀರಿನ ಬಾಟಲಿ ತೆರೆದು ನೀರು ಸೇವಿಸಿದ್ದರು. ಆಗ ಅವರಿಗೆ ಬಾಯಿ ಸುಟ್ಟ ಅನುಭವವಾಗಿದೆ. ತಕ್ಷಣವೇ ಕ್ರೈಸ್ಟ್ ವಿವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅನುಮಾನಗೊಂಡು ನೀರಿನ ಬಾಟಲಿ ಪರಿಶೀಲಿಸಿದಾಗ ಅದು ಆ್ಯಸಿಡ್ ಎಂಬುದು ಗೊತ್ತಾಗಿದೆ. ಈ ಸಂಬಂಧ ಅಶೋ ಮಿತ್ತಲ್ ದೂರು ನೀಡಿದ್ದಾರೆ.
ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.