ತಿರುವನಂತಪುರ: ಸರಕಾರಿ ಸ್ವಾಮ್ಯದ ಸಿನೆಮಾ ಥಿಯೇಟರ್‌ಗಳನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿ ಯಾಗಿಸುವ ನಿಟ್ಟಿನಲ್ಲಿ ಕೇರಳ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಅದರಂತೆ ತಿರುವನಂತಪುರದಲ್ಲಿರುವ ಕೈರಾಲಿ-ಶ್ರೀ-ನೀಲಾ ಥಿಯೇಟರ್‌ನೊಳಗೆ “ಅಳುವ ಕೊಠಡಿ'(ಕ್ರೈಯಿಂಗ್ ರೂಂ) ಯನ್ನು ನಿರ್ಮಿಸಲಾಗಿದೆ. ಇದೇನಿದು “ಅಳುವ ಕೊಠಡಿ’ ಎಂದು ಯೋಚಿಸುತ್ತಿದ್ದೀರಾ?
ಥಿಯೇಟರ್‌ನಲ್ಲಿ ಸಿನೆಮಾ ವೀಕ್ಷಣೆ ವೇಳೆ ಮಕ್ಕಳೇನಾದರೂ ಅಳಲು ಆರಂಭಿಸಿದರೆ ಆಗ ತಾಯಿಯು ಮಗುವನ್ನೆತ್ತಿಕೊಂಡು, ವೀಕ್ಷಕರ ಆಸನದ ಹಿಂಭಾಗದಲ್ಲಿರುವ ಅಳುವ ಕೊಠಡಿಗೆ ಕರೆದೊಯ್ಯಬಹುದು. ಆ ಕೊಠಡಿಯಲ್ಲೇ ಕುಳಿತುಕೊಂಡು ತಾಯಿಯು ಮಗುವನ್ನು ಸಂತೈಸುತ್ತಾ ಸಿನೆಮಾ ವೀಕ್ಷಿಸಬಹುದು.
ವಿಶೇಷವೆಂದರೆ ಈ ಕೊಠಡಿ “ಸೌಂಡ್ ಪ್ರೂಫ್’ ಆಗಿ ರುವ ಕಾರಣ ಮಗು ಅಳುವ ಶಬ್ದವು ಹೊರಗೆ ಕೇಳಿಸುವುದಿಲ್ಲ. ಹೀಗಾಗಿ ಹೊರಗೆ ಕುಳಿತ ವೀಕ್ಷಕರಿಗೂ ತೊಂದರೆ ಆಗುವುದಿಲ್ಲ. ಮಕ್ಕಳ ಪೋಷಕರೂ ಆರಾಮವಾಗಿ ಸಿನೆಮಾವನ್ನು ವೀಕ್ಷಿಸಬಹುದು.
“ಕ್ರೈಯಿಂಗ್ ರೂಂ’ನಲ್ಲಿ ತೊಟ್ಟಿಲು ಮತ್ತು ಡಯಾಪರ್ ಬದಲಾಯಿಸುವ ವ್ಯವಸ್ಥೆಯಿದೆ. ಜತೆಗೆ ಮಕ್ಕಳ ತಾಯಂದಿರಿಗೆ ಕುಳಿತುಕೊಳ್ಳಲು ಆಸನ ಗಳೂ ಇವೆ. ರಾಜ್ಯದ ಇತರ ಥಿಯೇಟರ್‌ಗಳಲ್ಲೂ ಇಂಥ ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇರಳ ಸಂಸ್ಕೃತಿ ಸಚಿವ ವಿ.ಎನ್.ವಸವನ್ ಹೇಳಿದ್ದಾರೆ.