ಚಿಂಚೋಳಿ: ನಾಗಾ ಇದಲಾಯಿ ಗ್ರಾಮ ದಲ್ಲಿನ ಸಣ್ಣ ನೀರಾವರಿ ಕೆರೆಯ ಮಣ್ಣಿನ ಒಡ್ಡಿನಲ್ಲಿ ಬಿರುಕು ಕಾಣಿಸಿದ್ದಲ್ಲದೇ, ಕುಸಿತವಾಗುತ್ತಿರುವುದಕ್ಕೆ ಕೆರೆ ದುರಸ್ತಿ ಕಾಮಗಾರಿ ಕಳಪೆಯಾಗಿದ್ದೇ ಕಾರಣ ವಾಗಿದ್ದು, ತನಿಖೆ ನಡೆಸಬೇಕೆಂದು ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ ಒತ್ತಾಯಿಸಿರು.
ತಾಲೂಕಿನ ನಾಗಾಇದಲಾಯಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಕೆರೆಯಲ್ಲಿ ಕಾಣಿಸಿಕೊಂಡಿರುವ ಕುಸಿತ ಮತ್ತು ಬಿರುಕು ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಲೂಕಿನಲ್ಲಿ ಕಳೆದ 2020ರಲ್ಲಿ ಸುರಿದ ಭಾರಿ ಮಳೆಗೆ ಹೂಡದಳ್ಳಿ ಮತ್ತು ನಾಗಾಇದಲಾಯಿ ಗ್ರಾಮಗಳಲ್ಲಿರುವ ಕೆರೆಗಳ ಒಡ್ಡುಗಳು ಒಡೆದಿದ್ದವು. ಆ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಜೆ.ಸಿಮಾಧುಸ್ವಾಮಿ ನಾಗಾಇದಲಾಯಿ ಗ್ರಾಮಕ್ಕೆ ಭೇಟಿ ನೀಡಿ, ಕೆರೆ ದುರಸ್ತಿಕಾರ್ಯಕ್ಕೆ ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿಯಲ್ಲಿ 4ಕೋಟಿ ರೂ. ಮಂಜೂರಿಗೊಳಿಸಿದ್ದರು. ಆನಂತರ ಕೆರೆ ದುರಸ್ತಿ ಕಾಮಗಾರಿ ಕೇವಲ ಒಂದೆರೆಡು ತಿಂಗಳಲ್ಲಿ ಪೂರ್ಣಗೊಳಿಸಲಾಗಿತ್ತು. ಹೀಗಾಗಿ ಕಾಮಗಾರಿ ಕಳಪೆಯಾಗಿದೆ ಎಂದು ಆಪಾದಿಸಿದರು.
ಶಾಸಕ ಡಾ| ಅವಿನಾಶ ಜಾಧವ ಕೆರೆ ಒಡ್ಡು ಬಿರುಕು ಬಿಟ್ಟಿರುವ ಬಗ್ಗೆ ಸ್ಥಳ ಪರಿಶೀಲಿಸಿ ದುರಸ್ತಿ ಕಾರ್ಯ ನಡೆದ ಸ್ಥಳದಲ್ಲಿ ಹಾನಿ ಆಗಿಲ್ಲ. ಆದರೆ ಹಳೆ ಜಾಗದಲ್ಲಿ ಬಿರುಕು ಕಾಣಿಸುತ್ತಿದೆ ಎಂದು ಹೇಳಿರುವುದು ಸಮರ್ಪಕವಾಗಿಲ್ಲ. ಆದ್ದರಿಂದ ಕೂಡಲೇ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸೈಯದ್ ನಿಯಾಜ ಅಲಿ, ಹಣಮಂತರೆಡ್ಡಿ, ವಿಶ್ವನಾಥ ಪಾಟೀಲ, ವೀರಾರೆಡ್ಡಿ, ಬಸವಂತರೆಡ್ಡಿ, ಶೇರಖಾನ್, ರಾಜಶೇಖರ ಬೋಯಿನ್, ಸುದರ್ಶನರೆಡ್ಡಿ, ನಾಗೇಶ ಗಂಜಿ, ಸಂಗಮೇಶ ಪಾಟೀಲ, ನಾಗರಾಜ, ಸಂತೋಷ ಪೂಜಾರಿ ಇದ್ದರು.