ಕಾರ್ಕಳ: ಅನಾರೋಗ್ಯ, ಬಡತನ ಇವುಗಳ ಮಧ್ಯೆ ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿ ಕೊಂಡು ಕೃಷಿ ವಿದ್ಯೆಯಲ್ಲಿ ಗೆದ್ದು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ ದುರ್ಗಾ ಗ್ರಾಮದ ಉದ್ದಪಲ್ಕೆಯ ಶೇಖರ್ ನಾಯ್ಕ್ ಹಾಗೂ ವಿಜಯಾ ನಾಯ್ಕ್ ದಂಪತಿ.
ಶೇಖರ್ ನಾಯ್ಕ ವೃತ್ತಿಯಲ್ಲಿ ಮೇಸ್ತ್ರಿ. ಅನಾರೋಗ್ಯದ ಸಮಸ್ಯೆಯಿಂದಾಗಿ ಕೆಲಸ ಮುಂದುವರಿಸಲಾಗಲಿಲ್ಲ. ಕೂಲಿ ಕೆಲಸವಿಲ್ಲದೆ ಕೈಚೆಲ್ಲಿ ಕುಳಿತಾಗ ಇವರಿಗೆ ತೋಚಿದ್ದು ಕೃಷಿ ಪದ್ಧತಿ.
ಇದ್ದ ಎರಡು ಎಕರೆ ಜಮೀನನ್ನು ಕೃಷಿಗೆ ಮೀಸಲಿಟ್ಟರು. ಆರಂಭದಲ್ಲಿ ನೀರಿನ ಸಮಸ್ಯೆ ಹಣದ ಕೊರತೆಯಿಂದ ಬಾವಿ ನಿರ್ಮಾಣದ ಕನಸನ್ನು ಕೈ ಬಿಟ್ಟರು. ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ನಿರ್ಮಿಸಿ ಅಡಿಕೆ ತೋಟ ನಿರ್ಮಾಣಕ್ಕೆ ಮುಂದಾದರು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡರು. 5 ವರ್ಷ ಗಳಿಂದ ಉದ್ಯೋಗ ಖಾತರಿ ಯೋಜನೆಯ ನೆರವು ಪಡೆದು ಸ್ವಾವಲಂಬಿಯಾಗಿದ್ದಾರೆ.
ಅಡಿಕೆ ಕೃಷಿ ಬದುಕಿನಲ್ಲಿ ಖುಷಿ 2011-12ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 450 ಮೋಹಿತ್ ನಗರ್ ಅಡಿಕೆ ಸಸಿ ನಾಟಿ ಮಾಡಿದರು. ವರ್ಷಕ್ಕೆ 3 ಕ್ಷಿಂಟಾಲ್ ಫಸಲು ತೆಗೆಯುತ್ತಾರೆ. ವಾರ್ಷಿಕವಾಗಿ 1,20,000 ರೂ. ವರೆಗೆ ಸಂಪಾದನೆಯಿದೆ.
Related Articles
ದನದ ಹಟ್ಟಿ ತೋಟಕ್ಕೆ ಸಾವಯವ ಗೊಬ್ಬರವನ್ನು ರೈತರಿಂದ ಖರೀದಿಸುವ ಬದಲು ಮನೆಯಲ್ಲೇ ಹಟ್ಟಿ ಗೊಬ್ಬರ ಉತ್ಪಾದಿಸುತ್ತಾರೆ. ದನದ ಹಟ್ಟಿ ನಿರ್ಮಾಣಕ್ಕಾಗಿ 40 ಸಾವಿರ ನೆರವು ಪಡೆದು 4 ಹಸುಗಳನ್ನು ಸಾಕುತ್ತಿದ್ದು, ದಿನಕ್ಕೆ 5 ಲೀ. ಹಾಲು ಡೈರಿಗೆ ಹಾಕುತ್ತಾರೆ. ಮಾಸಿಕ 6 ಸಾವಿರ ರೂ. ಆದಾಯ ಪಡೆಯುತ್ತಾರೆ. ಸಾವಯವ ಗೊಬ್ಬರ ಉತ್ಪಾದಿಸಿ ಅಧಿಕ ಇಳುವರಿ ಪಡೆಯುತ್ತಿದ್ದಾರೆ.
ಎರೆಹುಳು ತೊಟ್ಟಿ ಘಟಕ ಕೃಷಿಯ ಜತೆಗೆ ಎರೆಹುಳು ತೊಟ್ಟಿ ಘಟಕ ನಿರ್ಮಿಸಿಕೊಂಡು 27,000 ರೂ. ನೆರವು ಪಡೆದು ಬ್ರಹ್ಮಾವರ ತಾ|ನಿಂದ 1 ಕೆ.ಜಿ.ಗೆ 450ರಂತೆ ಪಡೆದು ಎರೆಹುಳು ಗೊಬ್ಬರದ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ.
ಮಲ್ಲಿಗೆ ಕೃಷಿ
ಶೇಖರ ನಾಯ್ಕರ ಪತ್ನಿ ವಿಜಯ ಮಲ್ಲಿಗೆ ಕೃಷಿಯಲ್ಲಿ ತೊಡಗಿಕೊಂಡಿದ್ದು ಇದೀಗ 5 ಸೆಂಟ್ಸ್ನಲ್ಲಿ ಮಲ್ಲಿಗೆ ಗಿಡ ಹಾಕಿ ಒಂದು ವರ್ಷ ಕಳೆದಿದೆ. ಸೀಸನ್ಗೆ ತಕ್ಕಂತೆ ಆದಾಯ ಗಳಿಸುತ್ತಿದ್ದಾರೆ. ಮನೆಯಲ್ಲೇ ತಯಾರಾದ ಎರೆಹುಳು ಗೊಬ್ಬರ ವನ್ನು ಮಲ್ಲಿಗೆ ಗಿಡಗಳಿಗೆ 15 ದಿನಕ್ಕೊಮ್ಮೆ ನೀಡುತ್ತಿದ್ದಾರೆ. ಪದ್ಧತಿ ಅಳವಡಿಸಿ ಪೋಷಿಸುತ್ತಿದ್ದಾರೆ.
2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ 7,999 ಮೊತ್ತದ ನೆರವು ಪಡೆದಿದ್ದಾರೆ. ಮಲ್ಲಿಗೆ ಗಿಡಗಳನ್ನು ನಾಟಿ ಮಾಡಿ 3,310 ರೂ. ಕೂಲಿ ಪಡೆಯುತ್ತಿದ್ದಾರೆ. ಅನಾರೋಗ್ಯ, ಆರ್ಥಿಕ ಮುಗ್ಗಟ್ಟು ಸಮಸ್ಯೆ ಎದುರಿಸುತ್ತಿದ್ದೆವು. ಪಿಡಿ, ತೋಟಗಾರಿಕೆಇಲಾಖೆಯ ಅಧಿಕಾರಿ ಗಳು ನೀಡಿದ ಮಾಹಿತಿಯಂತೆ ಸರಕಾರದ ಯೋಜನೆಗಳ ಪ್ರಯೋಜನ ಪಡೆದೆವು. ಮನೆಯ ಸುತ್ತ ಕಾಡು ಹಬ್ಬಿತ್ತು, ಅವುಗಳು ಹಚ್ಚ ಹಸುರಿನ ಅಡಿಕೆ ತೋಟಗಳಾಗಿವೆ. ಮುಂದೆ ಅಡಿಕೆ ತೋಟ ವಿಸ್ತರಿಸುವ ಯೋಜನೆಯಲ್ಲಿದ್ದೇವೆ ಎನ್ನುತ್ತಾರೆ ಶೇಖರ್ ನಾಯ್ಕ, ವಿಜಯಾ ದಂಪತಿ.
ಪತಿಗೆ ಪತ್ನಿ ಸಾಥ್
ಇವರ ಕೃಷಿ ಕಾಯಕಕ್ಕೆ ಪತ್ನಿ ವಿಜಯಾ ನಾಯ್ಕ ಸಾಥ್ ನೀಡುತ್ತಿದ್ದು, ಪ್ರತೀ ಸಭೆಗೆ ಹಾಜರಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಇಲಾಖೆಯಿಂದ ಮಾಹಿತಿ ಕಲೆ ಹಾಕಿ ಸಂಬಂಧಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪತ್ನಿಯೆ ನಿರ್ವಹಿಸುತ್ತಿದ್ದಾರೆ.
ಯೋಜನೆ ಫಲಪ್ರದ ಬಳಕೆ: ಯೋಜನೆ ಸಮರ್ಪಕವಾಗಿ ತಲುಪಿಸುವಲ್ಲಿ ಇಲಾಖೆ ಅಧಿಕಾರಿಗಳ ನಿರ್ವಹಣೆ ಮತ್ತು ಫಲಾನುಭವಿಗಳು ಕೂಡ ಸರಕಾರದ ಯೋಜನೆಯನ್ನು ಫಲಪ್ರದವಾಗಿ ಬಳಸಿಕೊಂಡಿದ್ದರ ಪರಿಣಾಮ ಇದು ಸಾಧ್ಯವಾಗಿದೆ. -ಗುರುದತ್ತ್, ತಾ.ಪಂ ಇಒ ಕಾರ್ಕಳ
ಆರ್ಥಿಕ ಸದೃಢತೆ ಸಾಧ್ಯ: ಇಲಾಖೆ ಸವಲತ್ತುಗಳು ದುರ್ಬಲದವ ರಿಗೆ ಮೀಸಲಾಗಿರುತ್ತದೆ.ಅದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಆರ್ಥಿಕವಾಗಿ ಸದೃಢತೆ ಜತೆಗೆ ಸ್ವಾವಲಂಬಿಯಾಗಲು ಸಾಧ್ಯ. -ಬಿ.ವಿ. ಶ್ರೀನಿವಾಸ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ
ಬಾಲಕೃಷ್ಣ ಭೀಮಗುಳಿ