Advertisement
ಮಂಗಳೂರಿನ ಉರ್ವ ಕೆನರಾ ಶಾಲೆಯ ಮುಂಭಾಗದಲ್ಲಿರುವ ಅಭಿಮಾನ್ ಪ್ಯಾಲೇಸ್ ನಿವಾಸಿಗಳಾದ ದಿನೇಶ್ ಶೆಟ್ಟಿ ಮತ್ತು ವಿಜಯಲಕ್ಷ್ಮೀ ಡಿ. ಶೆಟ್ಟಿ ಅವರೇ ಇಬ್ಬರು ಹೆಣ್ಣು ಮಕ್ಕಳ ಪಾಲಿಗೆ ಆಶ್ರಯದಾತರಾದ ಸಹೃದಯಿಗಳು. ದಿನೇಶ್ ದಂಪತಿ ಮಾಲಕತ್ವದ ಮೂಡಬಿದಿರೆ ಭೂಮಿಕಾ ಗ್ರಾನೈಟ್ಸ್ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಬಾಗಲಕೋಟೆಯ ಕಾರ್ಮಿಕ ದಂಪತಿ ಕಳೆದ ಸುಮಾರು 17 ವರ್ಷಗಳ ಹಿಂದೆ ಮಲೇರಿಯಾ ಜ್ವರಕ್ಕೆ ತುತ್ತಾಗಿ ನಿಧನಹೊಂದಿದರು. ಹೆತ್ತವರನ್ನು ಕಳೆದುಕೊಂಡು ದಿಕ್ಕು ತೋಚದಂತಾದ ಇಬ್ಬರು ಹೆಣ್ಣು ಮಕ್ಕಳಿಗೆ ಬದುಕಿನ ದಾರಿ ತೋರಿಸಿ 17 ವರ್ಷಗಳಿಂದ ಈ ದಂಪತಿ ತಮ್ಮದೇ ಮಕ್ಕಳೆಂಬಂತೆ ನೋಡಿಕೊಳ್ಳುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಬದುಕುವ ಛಲ ಹುಟ್ಟಿಸಿ, ಜೀವನ ರೂಪಿಸುವ ಕಲೆಯನ್ನೂ ಕರಗತ ಮಾಡಿಸಿದ್ದಾರೆ.
ಬಾಗಲಕೋಟೆಯ ಬಾದಾಮಿ ತಾಲೂಕಿನವರಾದ ತನುಜಾ ಮತ್ತು ಜ್ಯೋತಿ ಹೆತ್ತವರು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಆಟವಾಡಿಕೊಂಡೇ ಬೆಳೆದವರು. ಆದರೆ ಹಠಾತ್ತಾಗಿ ಬಂದೆರಗಿದ ಹೆತ್ತವರ ಸಾವು ಇಬ್ಬರು ಮಕ್ಕಳನ್ನು ಕಂಗೆಡಿಸಿತ್ತು. ಆದರೆ ಸಂಸ್ಥೆಯ ಮಾಲಕ ದಂಪತಿ ಈ ಮಕ್ಕಳನ್ನು ಸುಮ್ಮನೇ ಬಿಡಲಿಲ್ಲ. ತಮ್ಮದೇ ಮಕ್ಕಳಂತೆ ಪೋಷಿಸಿ, ಇಬ್ಬರನ್ನೂ ಸುಶಿಕ್ಷಿತರನ್ನಾಗಿ ಮಾಡಬೇಕೆಂದು ಶ್ರಮಿಸುತ್ತಿದ್ದಾರೆ. ದಿನೇಶ್-ವಿಜಯಲಕ್ಷ್ಮೀ ದಂಪತಿಯ ಪುತ್ರಿ ದಿಶಾಳೊಂದಿಗೆ ತಾವೂ ಸೇರಿಕೊಂಡು ಓದುತ್ತಾ, ಬರೆಯುತ್ತಾ ಅಕ್ಷರ ಜ್ಞಾನ ಸಂಪಾದಿಸಿದ್ದಾರೆ. 24 ವರ್ಷದ ಜ್ಯೋತಿ ಪೈಟಿಂಗ್ ತರಬೇತಿ ಕಲಿತುಕೊಂಡದ್ದಲ್ಲದೇ ತಾನು ಬಿಡಿಸಿದ ಚಿತ್ರಗಳನ್ನೇ ಮನೆಯ ಸೌಂದರ್ಯ ವೃದ್ಧಿಗೆ ಬಳಸಿಕೊಂಡಿದ್ದಾರೆ. ಎಕ್ಸಿಬಿಶನ್‌ಗಳಲ್ಲಿ ತನ್ನ ಪೈಟಿಂಗ್‌ಗಳನ್ನು ಪ್ರದರ್ಶನಕ್ಕಿಟ್ಟು ಭೇಷ್ ಎನಿಸಿಕೊಂಡಿದ್ದಾರೆ. ಎಂಬ್ರಾçಡರಿ, ಟೈಲರಿಂಗ್‌ನಲ್ಲಿಯೂ ಈಕೆ ಸಿದ್ಧಹಸ್ತಳು. ಮನೆಯಲ್ಲೇ ಓದು ಬರಹ ಕಲಿತು ಇದೀಗ ಖಾಸಗಿಯಾಗಿ ಎಸೆಸ್ಸೆಲ್ಸಿ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ತನುಜಾ 1ನೇ ತರಗತಿಯಲ್ಲಿ ಓದಿದ್ದು ಕೇವಲ ಮೂರು ತಿಂಗಳು. ಸುಮಾರು 10 ವರ್ಷಗಳ ಅನಂತರ ಖಾಸಗಿಯಾಗಿ ಎಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬರೆದು ಕ್ರಮವಾಗಿ ಶೇ. 46, ಶೇ. 79 ಅಂಕ ಗಳಿಸಿದರು. ಪ್ರಸ್ತುತ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ. ಬ್ಯೂಟಿಶಿಯನ್ ತರಬೇತಿ ಪಡೆದಿರುವ ತನುಜಾ, ಸಾಹಿತ್ಯ ರಚನೆ, ಕ್ರೀಡೆ, ಹಾಡುಗಾರಿಕೆ, ಹೊಸ ಹೊಸ ಅಡುಗೆಯಲ್ಲಿ ಎತ್ತಿದ ಕೈ. ಐಎಎಸ್ ಮಾಡಬೇಕೆಂಬ ಕನಸು ತನುಜಾಳದ್ದು. “ಈ ಮನೆಯಲ್ಲಿ ನಮಗೆ ಆಶ್ರಯ ನೀಡಿರುವುದಲ್ಲದೇ ಮನೆಯ ಮಕ್ಕಳಂತೇ ನೋಡಿಕೊಳ್ಳುತ್ತಿರುವುದು ನಮ್ಮ ಪಾಲಿನ ಅದೃಷ್ಟ. ಯಾವುದೇ ಸಮಸ್ಯೆ ಆಗದಂತೆ ನಮ್ಮನ್ನು ಬೆಳೆಸುತ್ತಿದ್ದಾರೆ. ಅವರ ಇಷ್ಟದಂತೆ ನಾವು ಬದುಕಿನಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದೇವೆ. ಅದನ್ನು ನನಸಾಗಿಸುವ ಛಲವೂ ಇದೆ’ ಎನ್ನುತ್ತಾರೆ ತನುಜಾ.
Related Articles
ತನುಜಾ ಮತ್ತು ಜ್ಯೋತಿಯ ಹೆತ್ತವರಿಗೆ ಐವರು ಮಕ್ಕಳು. ಓರ್ವ ಅಕ್ಕ ಮತ್ತು ಇಬ್ಬರು ಗಂಡು ಮಕ್ಕಳ ಪೈಕಿ ಓರ್ವರಿಗೆ ಮದುವೆಯಾಗಿದ್ದರೆ, ಇನ್ನೊಬ್ಬ ಹುಡುಗ ಊರಿನಲ್ಲೇ ಐಟಿಐ ಓದುತ್ತಿದ್ದಾನೆ. ಇವರ ಹೆತ್ತವರ ಕಾಯಕನಿಷ್ಠೆಗೆ ಮನಸೋತ ದಿನೇಶ್ ಶೆಟ್ಟಿ ದಂಪತಿ, ಕಾರ್ಮಿಕ ದಂಪತಿಯ ಸಾವಿನಿಂದ ನಿಷ್ಠಾವಂತ ಕಾರ್ಮಿಕರನ್ನು ಕಳೆದುಕೊಂಡ ದುಃಖದ ಜೊತೆಗೆ ಅವರ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾದರು. ಎಳವೆಯಲ್ಲೇ ಉತ್ತಮ ನಡವಳಿಕೆ ರೂಢಿಸಿಕೊಂಡ ಇಬ್ಬರು ಮಕ್ಕಳನ್ನು ತಮ್ಮದೇ ಮಕ್ಕಳಂತೆ ಸಾಕಿ ಸಲಹಿ ಬೆಳೆಸುವ ಸಂಕಲ್ಪ ತೊಟ್ಟರು. ಇದೀಗ 17 ವರ್ಷಗಳಿಂದ ಮಕ್ಕಳ ಬಾಳಲ್ಲಿ ಬೆಳಕಿನ ಸುಧೆ ಹರಿಸುತ್ತಿದ್ದಾರೆ. ಅಲ್ಲದೇ ಮಾನವೀಯತೆಯ ಅಂತಃಕರಣಕ್ಕೆ ಸಾಕ್ಷಿಯಾಗಿದ್ದಾರೆ.
Advertisement
ಎಲ್ಲಕ್ಕೂ ಸೈಈ ಇಬ್ಬರು ಮಕ್ಕಳು ನಮ್ಮ ಮನೆಯ ದೀಪಗಳಿದ್ದಂತೆ. ನಮ್ಮದೇ ಮಕ್ಕಳಂತೆ ಅವರನ್ನು ಬೆಳೆಸಿದ್ದೇವೆ. ಮನೆಯಲ್ಲೇ ಅಕ್ಷರ ಕಲಿತು ಸಾಧನೆ ಮಾಡಿದ ಈ ಮಕ್ಕಳು ಎಲ್ಲ ರಂಗಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪೈಟಿಂಗ್, ಹಾಡುಗಾರಿಕೆ, ಕ್ರೀಡೆ, ಸಾಹಿತ್ಯ ಹೀಗೆ ಎಲ್ಲವೂ ಗೊತ್ತು. ಅವರಿಂದ ನಾವೂ ಕಲಿತದ್ದೆಷ್ಟೋ.
ವಿಜಯಲಕ್ಷ್ಮೀ ಶೆಟ್ಟಿ ಧನ್ಯಾ ಬಾಳೆಕಜೆ