ಬೆಳ್ತಂಗಡಿ/ಉಡುಪಿ: ಹೊಸ ವರ್ಷದ ಆರಂಭದಲ್ಲಿ ನಾಡಿನಾದ್ಯಂತ ಭಕ್ತ ಸಮೂಹ ಕರಾವಳಿಯ ಧಾರ್ಮಿಕ ಕ್ಷೇತ್ರ ಸಂದರ್ಶಿಸಿ ದೇವರ ಆಶೀರ್ವಾದ ಪಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕಟೀಲು ಶ್ರೀ ದುರ್ಗಾಪರಮೇಶ್ವರೀ, ಉಡು ಪಿಯ ಶ್ರೀಕೃಷ್ಣ ಮಠ, ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಧರ್ಮಸ್ಥಳದಲ್ಲಿ ಹೊಸ ವರ್ಷಕ್ಕೆ ಫಲಪುಷ್ಪಗಳಿಂದ ದೇವಸ್ಥಾನ ಅಲಂಕರಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಸೇವೆ ಸಲ್ಲಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಸೌತಡ್ಕ ಶ್ರೀ ಮಹಾಗಣಪತಿ, ಕಟೀಲು ಶ್ರೀ ದುರ್ಗಾಪರಮೇಶರೀ ದೇಗುಲದಲ್ಲಿಯೂ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಹೊಸವರ್ಷದ ಸಲುವಾಗಿ ಜ. 1ರಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು.ಉಡುಪಿ ಶ್ರೀಕೃಷ್ಣಮಠ ಮತ್ತು ಮಲ್ಪೆ ಬೀಚ್‌ನಲ್ಲಿ ಶುಕ್ರವಾರ, ಶನಿವಾರ ಎರಡು ದಿನ ಹೆಚ್ಚಿನ ಜನ ಸಂದಣಿ ಹೆಚ್ಚಿತ್ತು.
ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಪ್ರವಾಸಿಗರು ಕಡಲ ತೀರದಲ್ಲಿ ನೂತನ ವರ್ಷವನ್ನು ಸಂಭ್ರಮಿಸಿದರು. ಕಡಲತೀರದ ಹೋಂ ಸ್ಟೇ, ರೆಸಾರ್ಟ್ ಭರ್ತಿಯಾಗಿತ್ತು. ಶ್ರೀಕೃಷ್ಣಮಠಕ್ಕೆ ಶನಿವಾರ ಸುಮಾರು 12,000 ಭಕ್ತರು ಆಗಮಿಸಿದ್ದು ಸುಮಾರು 10,000 ಜನರು ಭೋಜನ ಪ್ರಸಾದ ಸ್ವೀಕರಿಸಿದರು.