ರಾಮನಗರ: ರಾಷ್ಟ್ರೀಯ ಶಿಕ್ಷಣ ನೀತಿ 2019 ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕರಡು ಪ್ರತಿಯ ಸಮಗ್ರ ಅಧ್ಯಯನ, ಚರ್ಚೆಗಳು, ವಿಶ್ಲೇಷಣೆಗಳು ಆಗಬೇಕಾಗಿವೆ. ಶಿಕ್ಷಣ ತಜ್ಞರು,ರು, ಸಾರ್ವಜನಿಕರು ಸಹ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ಗುಣಮಟ್ಟದ ಶಿಕ್ಷಕರು ತುರ್ತು ಅಗತ್ಯ: ಇಂದು ಗುಣಮಟ್ಟದ ಶಿಕ್ಷಕರು ಲಭ್ಯವಾಗುತ್ತಿಲ್ಲ ಎಂಬ ಮಾಹಿತಿ ಇದೆ. ರಾಜ್ಯ ಸರ್ಕಾರಕ್ಕೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾಗಿತ್ತು. ಆದರೆ, ಸರ್ಕಾರಕ್ಕೆ ಸಿಕ್ಕಿದ್ದು ಕೇವಲ 2 ಸಾವಿರ ಗುಣಮಟ್ಟದ ಶಿಕ್ಷಕರು. ಅಂದರೆ ಗುಣಮಟ್ಟದ ಶಿಕ್ಷಕರ ಕೊರತೆ ಇದೆ ಎಂಬುದು ದೃಢಪಟ್ಟಿದೆ. ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಕರ ತುರ್ತು ಅಗತ್ಯವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನೇಕ ಸಮಸ್ಯೆಗಳಿವೆ. ಕಡ್ಡಾಯ ಶಿಕ್ಷಣ ನೀತಿ (ಆರ್.ಟಿ.ಇ) ಅಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಮಕ್ಕಳು ಬರ್ತಾರೆ, ಆದರೆ, ಸರ್ಕಾರದಿಂದ ಹಣ ಬರ್ತಿಲ್ಲ ಎಂದು ತಿಳಿಸಿದರು.
ಮಾನಸಿಕ ಹಿಂಸೆಯ ನಡುವೆ ಗುಣಮಟ್ಟದ ಶಿಕ್ಷಣ: ಕ್ಯಾಮ್ಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಮಾನಸಿಕ ಹಿಂಸೆಯ ನಡುವೆ ಶಾಲೆ ಗುಣಮಟ್ಟ ಕಾಪಾಡುತ್ತಿವೆ. ಆರ್.ಟಿ.ಒ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾನೂನು ವಿಚಾರಗಳನ್ನು ಮೊದಲು ತಿಳಿದುಕೊಂಡು ನಂತರವಷ್ಟೇ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಪ್ರಶ್ನಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2019ರ ಬಗ್ಗೆ ಮಾತನಾಡಿದ ಅವರು, ಬಹಳಷ್ಟು ಅಂಶಗಳು ಚೆನ್ನಾಗಿದೆ. ಆದರೆ, ಅಷ್ಟೇ ಗೊಂದಲಗಳು ಇವೆ. ಗುಣಮಟ್ಟದ ಶಿಕ್ಷಣಕ್ಕೆ ಖಾಸಗಿ ಶಾಲೆಗಳು ಬದ್ಧವಾಗಿವೆ ಎಂದು ಹೇಳಿದರು.
Advertisement
ನಗರದ ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಅಸೋಸಿಯೇಟೆಡ್ ಮ್ಯಾನೇಜಮೆಂಟ್ ಆಫ್ ಇಂಗ್ಲಿಷ್ ಸ್ಕೂಲ್ಸ್ ಇನ್ ಕರ್ನಾಟಕ (ಕ್ಯಾಮ್ಸ್) ಹಾಗೂ ರಾಮನಗರ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಆರ್‌ಡಿಯುಎಸ್‌ಎಂ ಎ) ಸಂಯುಕ್ತ ಆಶ್ರಯದಲ್ಲಿ ನಡೆದ ರಾಮನಗರ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ಸಭೆಯನ್ನು ಉದ್ಘಾಟಿಸಿದ ಅವರು ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒತ್ತು ನೀಡಬೇಕಾಗಿದೆ. ರಾಮನಗರ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳ ಮುಖ್ಯಸ್ಥರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಧ್ಯಯನ ಮಾಡಿ, ಸಲಹೆಗಳನ್ನು ಕ್ಯಾಮ್ಸ್ ಸಂಘಟನೆಗೆ ತಲುಪಿಸಿ ಎಂದರು.
Related Articles
Advertisement
ಕ್ಯಾಮ್ಸ್ ಅಧ್ಯಕ್ಷ ಎಂ.ಎ.ಆನಂದ್ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘಟನೆ ಇನ್ನು ಬಲಗೊಳ್ಳುವ ಅವಶ್ಯಕತೆ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್‌ಡಿಯುಎಸ್‌ಎಂಎ ಅಧ್ಯಕ್ಷ ಪಟೇಲ್ ಸಿ ರಾಜು ವಹಿಸಿದ್ದರು.
ಈ ವೇಳೆಯಲ್ಲಿ ಕ್ಯಾಮ್ಸ್ ನಿರ್ದೇಶಕ ವೆಂಕಟಸುಬ್ಬಯ್ಯ ಚೆಟ್ಟಿ, ಎಂ.ಎಚ್.ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಚ್.ಚಂದ್ರಶೇಖರ್ ಉಪಸ್ಥಿತಿರಿದ್ದರು. ಪ್ರದೀಪ್ ನಿರೂಪಿಸಿದರು. ರಮೇಶ್ ಗುಪ್ತ ವಂದಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ರಾಷ್ಟ್ರೀಯ ಶಿಕ್ಷಣ ನೀತಿ 2019ರ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಚರ್ಚೆ ನಡೆಸಿದರು.
ಹೊಸ ಶಾಲೆ ಮಂಜೂರು: ಕಠಿಣ ನೀತಿ, ನಿರ್ಧಾರ ಅಗತ್ಯ
ರಾಜ್ಯ ಪಠ್ಯಕ್ರಮದ ಶಾಲೆಗಳ ಆರಂಭದ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳು, ನೀತಿಗಳನ್ನು ಜಾರಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದರು. ಅಂಗಡಿಗಳಿಗೆ ಕೊಟ್ಟಂತೆ ಶಾಲೆಗಳನ್ನು ಆರಂಭಿಸಲು ಪರವಾನಗಿ ಕೊಡಲಾಗುತ್ತಿದೆ. ಹೀಗಾದರೆ ಗುಣಮಟ್ಟದ ಶಿಕ್ಷಣ ಸಿಗೋಲ್ಲ. ಐಸಿಎಸ್ಸಿ ಮತ್ತು ಸಿಬಿಎಸ್‌ಸಿ ಬೋರ್ಡುಗಳು ಪರವಾನಗಿ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಅನುಸರಿಸುತ್ತವೆ. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಕೂಡ ಇದೇ ರೀತಿಯ ಮಾನದಂಡಗಳನ್ನು ಅನುಸರಿಸಿ, ಹೊಸ ಶಾಲೆಗಳಿಗೆ ಅನುಮತಿ ಕೊಡಬೇಕು ಎಂದು ಹೇಳಿದರು.