Advertisement

2024ರ ಲೋಕಸಭೆ ಎಲೆಕ್ಷನ್‌ನ ಪ್ರಚಾರದ ಸಂಪೂರ್ಣ ಚಿತ್ರಣ

11:01 PM Jun 03, 2024 | Team Udayavani |

ದೇಶದ ಮೊದಲ ಸಂಸತ್‌ ಚುನಾವಣೆ ಬಳಿಕ ಸುದೀರ್ಘ‌ವಾಗಿ ನಡೆದ ಪ್ರಸಕ್ತ ಲೋಕಸಭೆ ಎಲೆಕ್ಷನ್‌ ಪ್ರಚಾರವು ಸಾಕಷ್ಟು ಗಮನ ಸೆಳೆದಿದೆ. ಅಭಿವೃದ್ಧಿ ಕಾರ್ಯಕ್ರಮಗಳು, ದೂರದೃಷ್ಟಿ ವಿಚಾರಗಳು ಹಿನ್ನೆಲೆಗೆ ಸರಿದು, ಅನಗತ್ಯ ವಿಚಾರಗಳೇ ರಾರಾಜಿಸಿದವು. ವಾದ-ವಿವಾದ, ಕೀಳು ಮಟ್ಟದ ಹೇಳಿಕೆಗಳು, ವೈಯಕ್ತಿಕ ನಿಂದನೆಗಳು ಮುನ್ನೆಲೆಗೆ ಬಂದವು. ಈ ಹಿನ್ನೆಲೆಯಲ್ಲಿ ಇಡೀ ಚುನಾವಣೆಯ ಪ್ರಚಾರವನ್ನು ಐದಂಶಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಓದಿ.

Advertisement

ಪ್ರಚಾರ ಕೇಂದ್ರ ಬಿಂದು ವಿಷಯಗಳು
1. ಮುಸ್ಲಿಮರಿಗೆ ಮೀಸಲಾತಿ
ಇಡೀ ಚುನಾವಣೆಯನ್ನು ಗಮನಿಸಿದರೆ ಮುಸ್ಲಿಮರಿಗೆ ಮೀಸಲು ವಿಷಯವೇ ಹೈಲೆಟ್‌ ಆಗಿತ್ತು. ಮೋದಿ ತಮ್ಮ ಎಲ್ಲ ಭಾಷಣದಲ್ಲೂ ಈ ವಿಷಯವನ್ನು ಪ್ರಸ್ತಾವಿಸಿದ್ದಾರೆ. ಕರ್ನಾಟಕವನ್ನು ಉಲ್ಲೇಖೀಸಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿ ಕಸಿದು ಮುಸ್ಲಿಮರಿಗೆ ಧರ್ಮದ ಆಧಾ ರದ ಮೇಲೆ ನೀಡಲಿದೆ ಎಂದು ಹೇಳುತ್ತಾ ಬಂದರು. ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಮಾಡಲ್ಲ ಎಂದು ವಿಪಕ್ಷ ನಾಯಕರು ಲಿಖೀತವಾಗಿ ಭರವಸೆ ನೀಡಬೇಕು ಎಂದು ಸವಾಲು ಹಾಕಿದರು.

2.ಸಂವಿಧಾನ ಬದಲಾವಣೆ
ಆಶ್ಚರ್ಯ ಎಂದರೆ, ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡೂ ಪರಸ್ಪರ ಸಂವಿಧಾನ ಬದಲಾವಣೆ ಆರೋಪವನ್ನು ಮಾಡಿ ದವು. 3ನೇ ಅವಧಿಗೆ ಬಿಜೆಪಿ ಅಧಿಕಾರಕ್ಕೇರಿದರೆ ಸಂವಿಧಾನ ಬದಲಾ ವಣೆ ಮಾಡಿ, ಮೀಸಲಾತಿಯನ್ನು ರದ್ದುಪಡಿಸಲಿದೆ ಎಂದು ಪ್ರಚಾರ ಮಾಡಿತು. ಇದಕ್ಕೆ ಪ್ರತಿಯಾಗಿ ಬಿಜೆಪಿ, ಐಎನ್‌ಡಿಐಎ ಒಕ್ಕೂಟವು ಸಂವಿಧಾನ ಬದಲಾವಣೆ ಮಾಡಿ, ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಲಿದೆ ಎಂದು ಆರೋಪಿಸಿತು. ಈ ವಿಷಯವು ಆಡಳಿತ- ವಿಪಕ್ಷಗಳ ನಾಯಕರ ಭಾಷಣದ ಮುಖ್ಯ ವಿಷಯವಸ್ತುವಾಗಿತ್ತು.

3. 400 ಸೀಟು ಗೆಲ್ಲುವ ಬಿಜೆಪಿ ದಾವೆ
ಚುನಾವಣೆ ಘೋಷಣೆ ಮೊದಲು, ಚುನಾವಣೆ ಆರಂಭ ದ ಬಳಿಕವೂ 400 ಸೀಟು ಗೆಲ್ಲುವ ಗುರಿ ಬಿಜೆಪಿಯು ಚುನಾವಣ ಮುಖ್ಯ ವಿಷಯವನ್ನಾಗಿಸಿತ್ತು. ಹಾಗಿದ್ದೂ, ಮೊದಲೆರಡು ಹಂತದ ಚುನಾವಣೆ ಬಳಿಕ 400 ಸೀಟು ಗೆಲ್ಲುವ ಗುರಿ ಮಾತುಗಳು ಸ್ವಲ್ಪ ಹಿನ್ನಡೆಗೆ ಸರಿಯಿತು. ಆದರೂ ಇಡೀ ಚುನಾವಣೆಯ ಈ ವಿಷಯ ಸುತ್ತ ಗಿರಕಿ ಹೊಡೆಯಿತು. ಬಿಜೆಪಿ 400 ಸೀಟು ಗೆಲ್ಲುತ್ತದೆ ಎನ್ನುವುದು ಒಂದು ವಾದವಾದರೆ, ಬಿಜೆಪಿ 400 ಸೀಟು ಗೆಲ್ಲುವುದು ಸಾಧ್ಯವೇ ಇಲ್ಲ ಎಂಬುದು ಮತ್ತೂಂದು ವಾದವಾಗಿತ್ತು.

4. ರಾಮ ಮಂದಿರ
ಉತ್ತರ ಭಾರತದಲ್ಲಿ ರಾಮ ಮಂದಿರ ನಿರ್ಮಾಣವು ಚುನಾವಣೆಯ ಕೇಂದ್ರ ಬಿಂದುವಾಗಿತ್ತು. ರಾಮ ಮಂದಿರ ನಿರ್ಮಾಣದ ಭರವಸೆ ಈಡೇರಿಸಲಾಗಿದೆ ಎಂದು ಬಿಜೆಪಿ ಪ್ರತಿ ಪ್ರಚಾರ ಸಭೆಯಲ್ಲಿ ಹೇಳುತ್ತಾ, ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ವಿರೋಧವಾಗಿತ್ತು ಎಂಬ ಸಂಗತಿಯನ್ನು ಪ್ರಸ್ತಾವಿಸುತ್ತಿದ್ದರು. ಅಲ್ಲದೇ, ಆಮಂತ್ರಣವನ್ನು ವಿರೋಧಿಸಿದ್ದಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ವಿಶೇಷವಾಗಿ ಹಿಂದಿ ಹಾರ್ಟ್‌ಲ್ಯಾಂಡ್‌ ರಾಜ್ಯಗಳಲ್ಲಿ ರಾಮ ಮಂದಿರ ನಿರ್ಮಾಣವು ಹೆಚ್ಚು ಚರ್ಚೆಗೀಡಾಗಿತ್ತು.

Advertisement

5.ನಿರುದ್ಯೋಗ ಮತ್ತು ಬೆಲೆ ಏರಿಕೆ
ಈ ಬಾರಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಚುನಾವಣೆಯ ಅಸ್ತ್ರವಾಗಿದ್ದು ಸುಳ್ಳಲ್ಲ. ಐಎನ್‌ಡಿಐಎ ಕೂಟ ತಮ್ಮ ಇಡೀ ಪ್ರಚಾರವನ್ನು ಈ ವಿಷಯಗಳನ್ನೇ ಕೇಂದ್ರೀಕರಿಸಿದ್ದವು. ನಿರುದ್ಯೋಗ ತಪ್ಪಿಸಲು ಮತ್ತು ಬೆಲೆ ಏರಿಕೆಯನ್ನು ತಡೆಯಲು ಹತ್ತು ವರ್ಷದಲ್ಲಿ ಬಿಜೆಪಿ ಸರಕಾರ ಹೇಗೆ ವಿಫ‌ಲವಾಗಿವೆ ಎಂಬುದನ್ನು ಮತದಾರರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದವು. ಈ ವಿಷಯದಲ್ಲಿ ಬಿಜೆಪಿ ಪಕ್ಷವು ಕೊಂಚ ಹಿನ್ನಡೆಯನ್ನು ಅನುಭವಿಸಿದರೂ, ಉದ್ಯೋಗ ಸೃಷ್ಟಿಗಾಗಿ ಕೈಗೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಮಾತನಾಡಿತು.

ಪ್ರಚಾರಕ್ಕೆ ತಿರುವು ಕೊಟ್ಟ ಐದಂಶಗಳು

1.ಸ್ಯಾಂ ಪಿತ್ರೋಡಾ ಹೇಳಿಕೆ
ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷರಾಗಿದ್ದ ಸ್ಯಾಂ ಪಿತ್ರೋಡಾ ಅವರು ಟಿವಿಗೆ ನೀಡಿದ ಸಂದರ್ಶನದಲ್ಲಿ ಆಸ್ತಿ ಹಂಚಿಕೆಯ ಬಗ್ಗೆ ಪ್ರಸ್ತಾವಿಸಿದ್ದರು. ಅಮೆರಿಕದಲ್ಲಿ ಆಸ್ತಿ ಮೇಲೆ ತೆರಿಗೆ ಪದ್ಧತಿಯನ್ನು ಪ್ರಸ್ತಾವಿಸಿ, ಈ ಮಾತು ಹೇಳಿದ್ದರು. ಬಿಜೆಪಿಯು ಪಿತ್ರೋಡಾ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಇಡೀ ಚುನಾವಣೆಯ ದಿಕ್ಕನ್ನೇ ಬದಲಿಸಿತು. ಅಂತಿಮವಾಗಿ ಕಾಂಗ್ರೆಸ್‌ ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡು, ಅವರಿಂದ ರಾಜೀನಾಮೆ ಪಡೆಯಿತು.

2.ಮೋದಿ ಕಾ ಪರಿವಾರ್‌
ವಿಪಕ್ಷಗಳ ವಿರುದ್ಧ ಮೋದಿ ಪರಿವಾರ ವಾದ ಆರೋಪವನ್ನು ಮಾಡುವುದು ಹೊಸದಲ್ಲ. ಅದರಂತೆ, ಬಿಹಾರದಲ್ಲಿ ಲಾಲು ಕುಟುಂಬದ ವಿರುದ್ಧ ಅವರು ಆರೋಪ ಮಾಡಿದ್ದರು. ಮೋದಿ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಆರ್‌ಜೆಡಿ ನಾಯಕ, ಲಾಲು ಪ್ರಸಾದ್‌ ಯಾದವ್‌ ಅವರು ಮೋದಿಗೆ ಕುಟುಂಬವೇ ಇಲ್ಲ ಎಂದು ಲೇವಡಿ ಮಾಡಿ ದ್ದರು. ಇದೇ ಹೇಳಿಕೆಯನ್ನು ಪ್ರಚಾರದ ದಿಕ್ಕು ಬದಲಿಸಲು ಬಿಜೆಪಿ ಬಳಸಿಕೊಂ ಡಿತು. ಚಾಯ್‌ ಪೇ ಚರ್ಚಾ ರೀತಿಯಲ್ಲೇ “ಮೋದಿ ಕಾ ಪರಿವಾರ್‌’ ಘೋಷಣೆಯನ್ನು ಮೊಳಗಿಸಿ, ಚುನಾವಣ ಪ್ರಚಾರದ ಸರಕನ್ನಾಗಿಸಿತು.

3.ಪುರಿ ಜಗನ್ನಾಥ ಮೋದಿ ಭಕ್ತ
ಪುರಿ ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿಯ ವಕ್ತಾರ ಸಂಬೀತ್‌ ಪಾತ್ರಾ ಅವರು ಪುರಿ ಜಗನ್ನಾಥನೇ ಮೋದಿಯ ಭಕ್ತ ಎಂದು ಹೇಳಿದ್ದು, ಭಾರೀ ವಿವಾದಕ್ಕೆ ಕಾರಣವಾಯಿತು. ವಿಶೇಷವಾಗಿ ಒಡಿಶಾದಲ್ಲಿ ಪ್ರಚಾರಕ್ಕೆ ಹೊಸ ತಿರುವು ನೀಡಿತು. ವಿಪಕ್ಷಗಳು ಬಿಜೆಪಿಯ ವಿರುದ್ಧ ಮುಗಿಬಿದ್ದವು. ಬಳಿಕ, ಸಂಬೀತ್‌ ಪಾತ್ರ ಅವರು ಪ್ರಾಯಶ್ಚಿತವಾಗಿ ಮೂರು ದಿನಗಳ ಕಾಲ ಉಪವಾಸ ಕೂಡ ಮಾಡಿದಿರೆನ್ನಿ! ಮೋದಿಯ ವ್ಯಕ್ತಿ ಪೂಜೆಗೆ ಬಿಜೆಪಿ ಮುಂದಾಗಿದೆ ಎಂದು ವಿಪಕ್ಷಗಳು ಪ್ರಚಾರ ಮಾಡಿದವು.

4.ದಿಲ್ಲಿ ಸಿಎಂ ಕೇಜ್ರಿವಾಲ್‌ ಬಿಡುಗಡೆ
ಚುನಾವಣೆ ದಿನಾಂಕ ಘೋಷಣೆಯಾಗುವ ಸಂದರ್ಭದಲ್ಲಿ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲರನ್ನು ಇ.ಡಿ. ಬಂಧಿಸಿ ಜೈಲಿಗೆ ಕಳುಹಿಸಿತು. ದಿಲ್ಲಿ ಅಬಕಾರಿ ನೀತಿ ಹಗರಣ ಸಂಬಂಧ ಅವರು ಜೈಲುಪಾಲಾಗಿದ್ದರು. ಇದು ಚುನಾವಣ ವಿಷಯವಾಯಿತಲ್ಲದೇ ಅವರ ಬಿಡುಗಡೆಯು ಹೊಸ ತಿರುವು ನೀಡಿತು. ಸುಪ್ರೀಂ ಕೋರ್ಟ್‌ 21 ದಿನಗಳ ಕಾಲ ಅವರಿಗೆ ಮಧ್ಯಾಂತರ ಜಾಮೀನು ನೀಡಿ, ಪ್ರಚಾರಕ್ಕೆ ಅನುವು ಮಾಡಿಕೊಟ್ಟಿತು. ಇದರಿಂದ ದಿಲ್ಲಿ, ಪಂಜಾಬ್‌, ಹರಿಯಾಣ ರಾಜ್ಯಗಳಲ್ಲಿ ಚುನಾವಣ ರಂಗು ಬದಲಾಯಿತು ಎನ್ನಬಹುದು.

5.ಕಾಂಗ್ರೆಸ್‌ ಪ್ರಣಾಳಿಕೆ
ಬಹುಶಃ ಈ ಚುನಾವಣೆಯ ದೊಡ್ಡ ತಿರುವು ಎಂದರೆ ಅದು ಕಾಂಗ್ರೆಸ್‌ ಚುನಾವಣ ಪ್ರಣಾಳಿಕೆ. ಮಜಾ ಅಂದರೆ, ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಏನಿದೆ ಎಂದು ಹೇಳುವ ಬದಲು, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಏನಿದೆ ಎಂಬುದನ್ನೇ ಪ್ರಚಾರ ಮಾಡಿತು! ವಿಶೇಷವಾಗಿ, ಮುಸ್ಲಿಮರಿಗೆ ವೈಯಕ್ತಿಕ ಕಾನೂನು ಅನುಸರಿಸಲು ಅವಕಾಶ, ಆಸ್ತಿ ಮರು ಹಂಚಿಕೆಯಂಥ ವಿಷಯಗಳನ್ನು ಎತ್ತಿ ಬಿಜೆಪಿ ಹೆಚ್ಚು ಪ್ರಚಾರ ಮಾಡಿತು. ಬಿಜೆಪಿಯ ಈ ನಡೆ ಯಾವ ಫ‌ಲ ಕೊಡಲಿದೆ ಕಾದು ನೋಡಬೇಕು.

ಸದ್ದು ಮಾಡಿದ ಪದಗಳು!

1. ಮಂಗಳಸೂತ್ರ
ರಾಜಸ್ಥಾನದ ರ್ಯಾಲಿಯಲ್ಲಿ ಮೋದಿ, ಕಾಂಗ್ರೆಸ್‌ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಕಿತ್ತುಕೊಳ್ಳಲಿದೆ ಎಂದು ಆರೋಪಿಸಿದ್ದರು. ಆಸ್ತಿ ಹಂಚಿಕೆ ಸಂಬಂಧ ಅವರು ಈ ಆರೋಪ ಮಾಡಿದ್ದರು. ಇದು ಚುನಾವಣ ಪೂರ್ತಿ ಚರ್ಚಾ ವಿಷಯವಾಯಿತು.

2.ಮೋದಿ ನಿವೃತ್ತಿ ಪ್ರಸ್ತಾವ
ಜೈಲಿನಲ್ಲಿದ್ದ ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಜಾಮೀನು ಮೇಲೆ ಹೊರ ಬಂದು, ಮೋದಿ ನಿವೃತ್ತಿ ಆಗಲಿದ್ದಾರೆಂದು ಹೊಸ ಬಾಂಬ್‌ ಸಿಡಿಸಿದರು. ಕೇಜ್ರಿಯ ಈ ಹೇಳಿಕೆಗೆ ಇಡೀ ಬಿಜೆಪಿ ಪ್ರತಿಕ್ರಿಯಿಸಬೇಕಾ ಯಿತು. ಮೋದಿಗೆ 75 ವರ್ಷ ತುಂಬಿದ ಬಳಿಕ ಅವರು ನಿವೃತ್ತರಾಗಲಿದ್ದಾರೆ. ಅಮಿತ್‌ ಶಾ ಪಿಎಂ ಆಗಲಿದ್ದಾರೆ ಎಂದು ಹೇಳಿದರು.

3.ಶೆಹಜಾದೆ, ಶೆಹನ್‌ಷಾ
ಮೋದಿ, ರಾಹುಲ್‌ ಗಾಂಧಿ ಮತ್ತು ಅಖೀಲೇಶ್‌ ಸಿಂಗ್‌ ಅವರನ್ನು ಶೆಹಜಾದೆ ಎಂದು ಕರೆದರು. ಭಾಷಣದಲ್ಲಿ ಈ ನಾಯಕರ ಹೆಸರನ್ನೂ ಎಲ್ಲೂ ಪ್ರಸ್ತಾವಿಸುತ್ತಿರಲಿಲ್ಲ. ಬದಲಿಗೆ ಶೆಹಜಾದೆ ಎನ್ನುತ್ತಿದ್ದರು. ಮೋದಿಯ ಈ ಪದ ಪ್ರಯೋಗಕ್ಕೆ ತಿರುಗೇಟು ನೀಡಿದ್ದ ಪ್ರಿಯಾಂಕಾ ಗಾಂಧಿ, “ಶಹೆನ್‌ಷಾ’ ಎಂದು ಲೇವಡಿ ಮಾಡಿದ್ದರು.

4.ಸುಳ್ಳಿನ ಸರ್ದಾರ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಕುರಿತು ಠಂಕಿಸಿದ ಈ ಪದ ಕೂಡ ಹೆಚ್ಚು ಬಳಕೆಯಲ್ಲಿತ್ತು. ಪ್ರಧಾನಿ ಮೋದಿ ಅವರು ಕೇವಲ ಸುಳ್ಳು ಭರವಸೆ ನೀಡುತ್ತಾರೆ. ಕಾಂಗ್ರೆಸ್‌ ಪಕ್ಷ, ನಾಯಕರ ಕುರಿತು ಕೇವಲ ಸುಳ್ಳು ಹೇಳುತ್ತಾರೆಂದು ಹೇಳುವಾಗ ಖರ್ಗೆ ಅವರು, ಮೋದಿಯನ್ನು “ಸುಳ್ಳಿನ ಸರ್ದಾರ’ ಎಂದು ವ್ಯಂಗ್ಯವಾಗಿ ಕರೆದಿದ್ದರು.

5.ಎಕ್ಸ್‌ ರೇ
ಕಾಂಗ್ರೆಸ್‌ ಬಳಸಿದ ಈ ಪದ ಪ್ರಚಾರಕ್ಕೆ ಕಿಚ್ಚು ಹೊತ್ತಿಸಿತು. ವಿಪಕ್ಷ ಕೂಟ ಅಧಿಕಾರಕ್ಕೆ ಬಂದ ಮೇಲೆ ಸಮೀಕ್ಷೆ ಕೈಗೊಂಡು, ಆಸ್ತಿ ಮರು ಹಂಚಿಕೆಯ ಪ್ರಸ್ತಾವ ಮಾಡಲಿದೆ ಎಂದು ಬಿಜೆಪಿ ಆರೋಪಿಸಿತು. ಕಾಂಗ್ರೆಸ್‌ ಎಕ್ಸ್‌ರೇ ಪದವನ್ನು ಬಿಜೆಪಿಯ ಮೋದಿ ಸೇರಿ ಅನೇಕರು ನಾಯಕರು ತಮ್ಮ ಪ್ರಚಾರದಲ್ಲಿ ಬಳಸಿಕೊಂಡರು.

5 ಹೊಸ ಪದಗುತ್ಛಗಳು!
1.ವೋಟ್‌ ಜೆಹಾದ್‌
ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಸಂಬಂಧಿ ಹಾಗೂ ಎಸ್ಪಿ ಅಭ್ಯರ್ಥಿ ಮರಿಯಾ ಆಲಂ, ಚುನಾವಣ ಪ್ರಚಾರದಲ್ಲಿ ವೋಟ್‌ ಜೆಹಾದ್‌ ಮೂಲಕ ಇಂಡಿಯಾ ಕೂಟ ಗೆಲ್ಲಿಸಬೇಕೆಂದು ಹೇಳಿದರು. ಬಳಿಕ ಮೋದಿ ಅವರು ಇಡೀ ಚುನಾವಣೆ ಪೂರ್ತಿ ವೋಟ್‌ ಜೆಹಾದ್‌ ಪದವನ್ನು ಬಳಸಿ, ವಿಪಕ್ಷಗಳ ವಿರುದ್ಧ ಹರಿಹಾಯ್ದರು.

2.ಟೆಂಪೋ ಕೋಟ್ಯಧೀಶ್ವರರು
ರಾಹುಲ್‌ ಗಾಂಧಿ ಅವರು, ಅಂಬಾನಿ, ಅದಾನಿ ವಿರುದ್ಧ ಮಾತನಾಡುತ್ತಿ ದ್ದರು. ಈಗೇಕೆ ಮೌನವಾಗಿದ್ದಾರೆ. ಅವರ ಕಪ್ಪು ಹಣ ಟೆಂಪೋ ಮೂಲಕ ಕಾಂಗ್ರೆಸ್‌ಗೆ ತಲುಪಿದೆಯೇ ಎಂದು ಮೋದಿ ಮೇ 8ರ ರ್ಯಾಲಿಯಲ್ಲಿ ಪ್ರಶ್ನಿಸಿದ್ದರು. ಪ್ರತಿಯಾಗಿ ರಾಹುಲ್‌, “ಟೆಂಪೋ ಕೋಟ್ಯ ಧೀಶ್ವರರು’ ಲೇವಡಿ ಮಾಡಲಾರಂಭಿಸಿದರು!

3. “ವಿಷ’ಗುರು ಮೋದಿ
ಬಿಜೆಪಿಯು ವಿಶ್ವಗುರು ಪದವನ್ನು ಪ್ರಚಾರದ ವೇಳೆ ಬಳಸುತ್ತಾ ಬಂತು. ಮೋದಿ ಕೂಡ ಸಾಕಷ್ಟು ನಿಂದನಾತ್ಮಕ ಪದಗಳನ್ನು ಬಳಸಿದ್ದಾರೆ. ಇದನ್ನೇ ಟೀಕಿಸಲು ಕಾಂಗ್ರೆಸ್‌ ಜೈರಾಂ ರಮೇಶ್‌ ಅವರು, ಮೋದಿ ಬಳಸುತ್ತಿರುವ ದ್ವೇಷಪೂರಿತ ಮಾತುಗಳನ್ನು ಕೇಳಿದದರೆ, ಅವರನ್ನು “ವಿಷ’ಗುರು ಎಂದು ಕರೆಯಬಹುದು ಎಂದು ಛೇಡಿಸಿದ್ದರು.

4.ಅನುಭವಿ ಚೋರ್‌!
ಕೇಜ್ರಿವಾಲ್‌ರನ್ನು ಗುರಿಯಾಗಿಸಿ ಕೊಂಡು ಮೋದಿ, ಅನುಭವಿ ಕಳ್ಳನಿಗೆ ಸಾಕ್ಷ್ಯಗಳನ್ನು ಹೇಗೆ ನಾಶಮಾಡಬೇಕು ಎಂಬುದು ಗೊತ್ತಿರುತ್ತದೆ ಎಂದು ಕೇಜ್ರಿ ಕುರಿತು ಕೇಳಿದ ಪ್ರಶ್ನೆಗೆ ತಿಳಿಸಿದ್ದರು.ಹಗರಣದಲ್ಲಿ ಹಣ ಕೈ ಬದಲಾದ ಬಗ್ಗೆ ತನಿಖೆ ನಡೆದಿಲ್ಲ ಎಂದು ಕೇಜ್ರಿ ಹೇಳುತ್ತಿದ್ದರು. ಈ ಕುರಿತು ವಿವರಿಸುವಾಗ ಮೋದಿ ಅನುಭವಿ ಚೋರ್‌ ಎನ್ನುತ್ತಾರೆ.

5.ಖಟಾಖಟ್‌ ಖಟಾಖಟ್‌
ಖಟಾಖಟ್‌ ಖಟಾಖಟ್‌ ಪದವು ಈ ಚುನಾವಣೆ ಹೈಲೈಟ್‌. ಇಂಡಿಯಾ ಕೂಟ ಗೆದ್ದ ತತ್‌ಕ್ಷಣ ವರ್ಷಕ್ಕೆ 1 ಲಕ್ಷವರೆಗೂ ಹಣ ಬರುತ್ತದೆ ಎಂದು ಹೇಳುತ್ತಾರೆ. ಅದನ್ನು ವಿವರಿಸುವಾಗ ಅವರು ಖಟಾಖಟ್‌ ಖಟಾಖಟ್‌ ಹಣ ಬಂದು ಬೀಳುತ್ತದೆ ಎನ್ನುತ್ತಾರೆ.ಇದನ್ನೇ ಪ್ರಧಾನಿ ಮೋದಿ ಕೂಡ ತಮ್ಮ ಭಾಷಣದಲ್ಲಿ ಬಳಸಿಕೊಂಡಿದ್ದರು.

ಎಂ4 ಎಫೆಕ್ಟ್!
ಮುಜ್ರಾ, ಮಂಗಳಸೂತ್ರ,  ಮಟನ್‌ ಈ ಪದಗಳನ್ನು ಮೋದಿ ತಮ್ಮ ಭಾಷಣದಲ್ಲಿ ಹೆಚ್ಚಾಗಿ ಬಳಸಿದರು. ಮುಸ್ಲಿಮರನ್ನು ಓಲೈಸಲು ಐನ್‌ಡಿಐಎ ಕೂಟದ ನಡೆಗಳು ಇದಾಗಿವೆ ಎಂದು ಹೇಳಿದರು. ಅವುಗಳನ್ನು ನಾವು ಎಂ4 ಎಫೆಕ್ಟ್ ಎಂದು ಕರೆದಿದ್ದೇವೆ.

-ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next