ಹನೂರು: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣ ಹಾಗೂ ತಾಲೂಕಿನಲ್ಲಿ ಮಾಂಸ ಮಾರಾಟ, ಬೀದಿಬದಿ ವ್ಯಾಪಾರವನ್ನು ಸಂಪೂರ್ಣವನ್ನು ನಿಷೇಧಿಸಲಾಗಿದ್ದು, ವ್ಯಾಪಾರಸ್ಥರು ಸಹಕರಿಸಬೇಕು ಎಂದು ನೋಡಲ್ ಅಧಿಕಾರಿ ಹೊನ್ನೇಗೌಡ ಮನವಿ ಮಾಡಿದರು.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹನೂರು ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ನಡೆದ ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಮತ್ತು ಮಾಂಸ ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿ, ಕೊರೊನಾ ಮಾನವರ ಪ್ರಾಣಕ್ಕೆ ಸಂಚಕಾರವನ್ನು ಉಂಟು ಮಾಡುತ್ತಿದೆ. ಇದನ್ನು ನಿಯಂತ್ರಿಸಬೇಕಾದರೆ ಕೇವಲ ಅಧಿಕಾರಿಗಳಿಂದ ಸಾಧ್ಯವಿಲ್ಲ.
ಸಾರ್ವಜನಿಕರು ಕೂಡ ಈ ರೋಗ ಹರಡದೆ ಇರುವ ನಿಟ್ಟಿನಲ್ಲಿ ಸಹಕರಿಸಬೇಕಾಗುತ್ತದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ಹಾಗೂ ಮಾಂಸದಂಗಡಿಯವರು, ಹೋಟೆಲ್ ಮಾಲೀಕರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅನಿವಾರ್ಯವಿದೆ. ಇರುವುದರಿಂದ ಇನ್ನೂ 15 ದಿನಗಳ ಕಾಲ ತಾವುಗಳು ಸಾರ್ವಜನಿಕರ ಹಿತದೃಷ್ಟಿಯಿಂದ ವ್ಯಾಪಾರವನ್ನು ಬಂದ್ ಮಾಡಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಹನೂರು ಪಟ್ಟಣದ ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯ ಮಾಂಸದಂಗಡಿಗಳು ಹಾಗೂ ಕೌದಳ್ಳಿ ಗ್ರಾಮದ ಮಾಂಸದಂಗಡಿಗಳ ವ್ಯಾಪಾರವನ್ನು ನಿರ್ಬಂದಿಸಬೇಕೆಂದು ತಿಳಿಸಿದ್ದಾರೆ. ಅಲ್ಲದೆ, ಗೋಬಿ ಮಂಜೂರಿ, ಪಾನಿಪುರಿ ಅಂಗಡಿಗಳು ತಳ್ಳುಗಾಡಿಯಲ್ಲಿ ಮಾರಾಟ ಮಾಡುವ ಮೀನು, ಮಾಂಸ ವ್ಯಾಪಾರಸ್ಥರು ವ್ಯಾಪಾರವನ್ನು ಮಾಡದೇ ಇರುವುದು ಒಳ್ಳೆಯದು ಎಂದು ತಿಳಿಸಿದರು.
ರೋಗ ತಡೆಗೆ ಮನವಿ: ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಾಧರ್ ಮಾತನಾಡಿ, ಕೊರೊನಾ ಅತ್ಯಂತ ತೀಕ್ಷಣವಾದ ವೈರಸ್ ಆಗಿದೆ. ಇದರಿಂದ ಸ್ವತಃ ಪ್ರಧಾನಿಗಳೇ ದೇಶದ ಜನತೆ 1 ದಿನ ಮನೆಯಿಂದ ಹೊರ ಬರದಂತೆ ಮನವಿ ಮಾಡಿದ್ದಾರೆ. ಕೊರೊನಾ ವೈರಸ್ 14 ಗಂಟೆಗಳ ಮನುಷ್ಯರ ಮೇಲೆ ಇರುತ್ತದೆ. ತದ ನಂತರ ಅದು ಬೇರೆ ಆವಾಸ ಸ್ಥಾನ ಹೊಂದುತ್ತದೆ.
ಈ ಹಿನ್ನೆಲೆಯಲ್ಲಿ ಸೋಂಕು ಇರುವವರು ಹೊರಗೆ ಬಾರದೆ ಇರುವುದರಿಂದ ರೋಗ ತಡೆಗಟ್ಟಬಹುದು ಎಂದು ತಿಳಿಸಿದರು. ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ಬಸವರಾಜು ಚಿಗರಿ, ಪಪಂ ಮುಖ್ಯಾಧಿಕಾರಿ ಮೂರ್ತಿ ಮತ್ತು ಬೀದಿ ಬದಿ ವ್ಯಾಪಾರಿಗಳು ಮತ್ತು ಹೋಟೆಲ್, ಮಾಂಸದಂಗಡಿ ಮಾಲೀಕರು ಭಾಗವಹಿಸಿದ್ದರು.