Advertisement

ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕಿದೆ

12:26 AM Apr 09, 2019 | Lakshmi GovindaRaju |

ಬೆಂಗಳೂರು: ದೇಶಕ್ಕೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವವರು ನೀವಾಗಿದ್ದು, ಪುನಃ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕು ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಕರೆ ನೀಡಿದರು.

Advertisement

ಯಶವಂತಪುರದ ಮೇವಾರ್‌ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯಂತಹ ಜಾಗತಿಕ ನಾಯಕನನ್ನು ದೇಶಕ್ಕೆ ನೀಡಿದ ಕೊಡುಗೆ ನಿಮಗೆ ಸಲ್ಲುತ್ತದೆ. ಕೇಂದ್ರದಲ್ಲಿ ಸುಸ್ಥಿರ ಆಡಳಿತ ಹಾಗೂ ಸಮರ್ಥ ನಾಯಕತ್ವಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕಿದೆ ಎಂದು ಮನವಿ ಮಾಡಿರು.

ಮೋದಿಯವರು ದೇಶದ ಹಿತಕ್ಕಾಗಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಎಲ್ಲರಿಗೂ ಗೊತ್ತಿದೆ. ಜಿಎಸ್‌ಟಿ, ಸಾವಿರ ಹಾಗೂ ಐದು ನೂರು ರೂಪಾಯಿ ನೋಟು ಅಮಾನ್ಯಿàಕರಣ, ಉಜ್ವಲ, ಮುದ್ರಾ, ಜೆನರಿಕ್‌ ಔಷಧಿ, ಜನ್‌ಧನ್‌ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸಮರ್ಥ ಆಡಳಿತ ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಸಾಧನೆಗಳ ಕಿರುಹೊತ್ತಿಗೆ ಹೊರತಂದಿದ್ದು, ಅದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಭವ್ಯ ಭಾರತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರ ಮನವೊಲಿಸಿ ಎಂದು ಸಲಹೆ ನೀಡಿದರು.

ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ ನಂತರ ಪಾಕಿಸ್ತಾನದ ಬಾಲಾಕೋಟ್‌ಗೆ ನುಗ್ಗಿ ನಮ್ಮ ಸೈನಿಕರು ಉಗ್ರರನ್ನು ಸದೆಬಡಿದರು. ಪಾಕ್‌ ಬೆಂಬಲಕ್ಕೆ ಅದರ ಮಿತ್ರ ರಾಷ್ಟ್ರಗಳಾದ ಸೌದಿ ಅರೇಬಿಯಾ, ಚೀನಾಗಳೇ ಬರಲಿಲ್ಲ. ಇದಕ್ಕೆ ಮೋದಿಯವರು ವಿಶ್ವಮಟ್ಟದಲ್ಲಿ ಹೊಂದಿರುವ ವರ್ಚಸ್ಸು ಕಾರಣವಾಗಿದೆ ಎಂದು ವಿವರಿಸಿದರು.

Advertisement

ಮುಖವಾಡ ಹೇಳಿಕೆಗೆ ಸವಾಲು: ಬಿಜೆಪಿಯವರು ಮೋದಿಯವರ ಮುಖವಾಡ ಹಾಕಿಕೊಂಡು ಮತ ಕೇಳಲು ಬರುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ. ಮೋದಿಯವರ ಸಾಧನೆಗಳನ್ನು ಸಹಿಸಿಕೊಳ್ಳಲಾಗದೆ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಕಾಂಗ್ರೆಸಿಗರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಹೆಸರೇಳಿಕೊಂಡು ಮತಯಾಚನೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಸದಾನಂದಗೌಡರು ಸಜ್ಜನ ರಾಜಕಾರಣಿಯಾಗಿದ್ದು, ದುರಹಂಕಾರದ ರಾಜಕಾರಣ ಎಂದೂ ಮಾಡಿಲ್ಲ. ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಇಂತಹ ಒಳ್ಳೆಯ ವ್ಯಕ್ತಿಯನ್ನು ಪುನರಾಯ್ಕೆ ಮಾಡಲು ನಾವೆಲ್ಲ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಮುನಿರಾಜು, ನೆ.ಲ.ನರೇಂದ್ರ ಬಾಬು ಹಾಗೂ ಮುಖಂಡರಾದ ಡಿ.ಎಸ್‌.ವೀರಯ್ಯ, ಗೋವಿಂದರಾಜು, ತಿಪ್ಪೇಸ್ವಾಮಿ, ಎಲ್‌.ಕೆ.ರಾಜು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next