ಮಹದೇವಪುರ: ಬೆಳ್ಳಂದೂರು ಕೆರೆ ಸಂರಕ್ಷಣೆಗೆ ವಾಸ್ತವದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ನೇಮಿಸಿರುವ ಸಮಿತಿಯು ಶನಿವಾರ ಪರಿಶೀಲಿಸಿತು.
ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಮತ್ತೆ ಬೆಂಕಿ ಹಾಗೂ ನೊರೆ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಎನ್‌ಜಿಟಿ, ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ ಸರ್ಕಾರ ಕ್ರಮ ಖಂಡಿಸಿ, ಪರಿಹಾರ ಕ್ರಮಗಳ ಪರಿಶೀಲನೆಗಾಗಿ ಹಿರಿಯ ವಕೀಲ ರಾಜ್ ಪಂಜ್ವಾನಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
ಎನ್‌ಜಿಟಿ ಸೂಚನೆ ಮೇರೆಗೆ ಶನಿವಾರ ಬೆಳ್ಳಂದೂರು ಕೆರೆಗೆ ಭೇಟಿ ನೀಡಿದ ಸಮಿತಿಯ ಸದಸ್ಯರು, ಬೆಳ್ಳಂದೂರು ಕೆರೆಯಂಚಿನಲ್ಲಿರುವ ಸನ್‌ಸಿಟಿ ಅಪಾರ್ಟ್‌ಮೆಂಟ್, ಬೆಳ್ಳಂದೂರು ಕೋಡಿ ಹಾಗೂ ಯಮಲೂರು ಕೋಡಿಗೆ ಭೇಟಿ ನೀಡಿ ನೊರೆ, ಒತ್ತುವರಿ ಹಾಗೂ ತ್ಯಾಜ್ಯ ಸುರಿಯದಂತೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು.
ಬೆಳ್ಳಂದೂರು ಕೆರೆಯಲ್ಲಿ ಜೊಂಡು ತೆರವು ಕಾರ್ಯ, ಕೆರೆಗೆ ಸುರಿಯಲಾಗುತ್ತಿರುವ ತ್ಯಾಜ್ಯ, ಕೆರೆಯ ಆಸುಪಾಸಿನಲ್ಲಿರುವ ಅಪಾರ್ಟ್‌ಮೆಂಟ್ ಹಾಗೂ ಕೈಗಾರಿಕೆಗಳಿಂದ ನೇರವಾಗಿ ಕೆರೆಗೆ ಹರಿದುಬರುತ್ತಿರುವ ರಾಸಾಯನಿಕ ನೀರು, ಕೆರೆಯ ಸುತ್ತಮುತ್ತಲಿನ ಭಾಗಗಳಲ್ಲಿ ನಿರ್ಮಿಸಲಾಗಿರುವ ತ್ಯಾಜ್ಯನೀರು ಶುದ್ಧೀಕರಣ ಘಟಕಗಳು ಸೇರಿದಂತೆ ಇನ್ನಿತರ ಮಾಹಿತಿ ಪಡೆದರು.
ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು ಪೂರೈಕೆಗಾಗಿ ಕೆರೆಯ ಬಫರ್ ಝೋನ್ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಸುತ್ತಿರುವುದಕ್ಕೆ ಕೆಲವರು ಆರೋಪಿಸಿದ್ದಾರೆ. ಕೆರೆಯಲ್ಲಿ ಎಷ್ಟು ಪ್ರಮಾಣದ ಜೋಂಡು ತೆರೆವುಗೊಳಿಸಲಾಗಿದೆ, ಕೆರೆಯ ಅಂಗಳದಲ್ಲಿ ತ್ಯಾಜ್ಯ ಸುರಿಯದಿರಲು ಕೈಗೊಂಡ ಕ್ರಮಗಳ ಕುರಿತು ಸಮಿತಿಯು ಬಿಡಿಎ, ಜಲಮಂಡಳಿ, ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ವರ್ತೂರು, ಅಗರ ಕೆರೆಗಳಿಗೆ ಭೇಟಿ ಸಾಧ್ಯತೆ: ನ್ಯಾಯಾಧೀಕರಣವು ಬೆಳ್ಳಂದೂರು, ವರ್ತೂರು ಹಾಗೂ ಅಗರ ಕೆರೆಗಳ ಪರಿಶೀಲನೆಗೆ ಸಮಿತಿ ನೇಮಿಸಿದ್ದು, ಅದರಂತೆ ಶನಿವಾರ ಬೆಳ್ಳಂದೂರು ಕೆರೆ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿರುವ ಸಮಿತಿಯು, ಭಾನುವಾರ ವರ್ತೂರು ಹಾಗೂ ಅಗರ ಕೆರೆಗಳಿಗೆ ಭೇಟಿ ನೀಡಿ ಸಂರಕ್ಷಣಾ ಕ್ರಮಗಳನ್ನು ಪರಿಶೀಲಿಸುವ ಸಾಧ್ಯತೆಯಿದೆ.