ಬೆಂಗಳೂರು: ಪುಸ್ತಕಗಳು ಮುದ್ರಣ ಮಾತ್ರವಲ್ಲದೇ ಬೇರೆ ರೂಪದಲ್ಲೂ ಮಾರುಕಟ್ಟೆ ಪ್ರವೇಶಿಸುತ್ತಿರುವ ಈ ಹೊತ್ತಿನಲ್ಲಿ ಸರ್ಕಾರವೇ ಪುಸ್ತಕ ನೀತಿ ರೂಪಿಸಲು ಶಾಸನಬದ್ಧ ಸಮಿತಿ ರಚಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರವು ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಪುಸ್ತಕೋದ್ಯಮ- ಇತ್ತೀಚಿನ ಬೆಳವಣಿಗೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪ್ರಕಾಶಕರು, ಲೇಖಕರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.
ಹಾಗಾಗಿ ಸರ್ಕಾರವೇ ಶಾಸನಬದ್ಧ ಸಮಿತಿ ರಚಿಸಿ, ಅದರ ವರದಿ ಆಧಾರದ ಮೇಲೆ ನೂತನ ಪುಸ್ತಕ ನೀತಿ ಜಾರಿಗೊಳಿಸುವುದು ಸೂಕ್ತ. ಈ ಸಂಬಂಧ ಗ್ರಂಥಾಲಯ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಪ್ರಕಾಶಕರು ಒತ್ತಡ ಹೇರಬೇಕು ಎಂದು ತಿಳಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್.ಹೊಸಮನಿ, 2015ರಲ್ಲಿ ಪ್ರಕಟವಾದ ಪುಸ್ತಕಗಳ ಖರೀದಿ ದರ ಪಟ್ಟಿಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ. ಸರ್ಕಾರ ಈಗಾಗಲೇ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ವರ್ಷಾಂತ್ಯದೊಳಗೆ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಅಭಿನವ ಪ್ರಕಾಶನದ ರವಿಕುಮಾರ್ ಮಾತನಾಡಿ, “ಗ್ರಂಥಾಲಯ ಇಲಾಖೆ ಖರೀದಿಸುವ ಪುಸ್ತಕಗಳ ಬೆಲೆ ನಿಗದಿ ಅವೈಜ್ಞಾನಿಕ. ಹಾಗಾಗಿ ಪುಸ್ತಕ ಪ್ರಾಧಿಕಾರದ ನೇತೃತ್ವದಲ್ಲೇ ಪ್ರಕಾಶಕರ ಸಮಸ್ಯೆ ಆಲಿಸಲು ಪ್ರತ್ಯೇಕ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರು. ಪ್ರಾಧಿಕಾರದ ಡಾ.ವಸುಂಧರಾ ಭೂಪತಿ, ಕೇಂದ್ರೀಯ ತೆರಿಗೆ ಇಲಾಖೆ ಆಯುಕ್ತ ಜಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.