ಸುಮಾರು 18 ವರ್ಷಗಳ ಹಿಂದೆ ಕನ್ನಡದಲ್ಲಿ “ಫ್ರೆಂಡ್ಸ್’ ಎನ್ನುವ ಮ್ಯೂಸಿಕಲ್ ಹಿಟ್ ಚಿತ್ರ ತೆರೆಗೆ ಬಂದಿದ್ದು, ನಿಮಗೆ ನೆನಪಿರಬಹುದು. ಎಂ.ಡಿ ಶ್ರೀಧರ್ ನಿರ್ದೇಶನದ ಈ ಚಿತ್ರದಲ್ಲಿ ವಾಸು, ಮಾಸ್ಟರ್ ಆನಂದ್, ಶರಣ್, ಹರಿದಾಸ್ ಹೀಗೆ ಹಲವು ಕಲಾವಿದರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರದ ದಿನಗಳಲ್ಲಿ “ಫ್ರೆಂಡ್ಸ್’ ಚಿತ್ರದಲ್ಲಿ ಅಭಿನಯಿಸಿದ್ದ ವಾಸು, ಮಾಸ್ಟರ್ ಆನಂದ್, ಶರಣ್ ನಾಯಕ ನಟರಾಗಿ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡರು. ಈಗ ಆ ಚಿತ್ರದಲ್ಲಿ ಅಭಿನಯಿಸಿದ್ದ ಮತ್ತೂಬ್ಬ ನಟ ಹರಿ ಕೂಡ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಎಂ.ಆರ್.ಪಿ’, “ಮೋಸ್ಟ್ ರೆಸ್ಪಾನ್ಸಬಲ್ ಪರ್ಸನ್’ ಎಂಬ ಟ್ಯಾಗ್ ಲೈನ್ ಇರುವ ಈ ಚಿತ್ರದಲ್ಲಿ ಹರಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಅದ್ಧೂರಿಯಾಗಿ ಹೊರಬಂದಿದೆ.
ನಟ ಶರಣ್, ನಿರ್ದೇಶಕ ದಿನಕರ್ ತೂಗುದೀಪ “ಎಂ.ಆರ್.ಪಿ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು. ಚಿತ್ರ ಸಾಹಿತಿ ಕವಿರಾಜ್ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಮಾತನಾಡಿದ ನಟ ಶರಣ್, “ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಹರಿ ಮತ್ತು ನನ್ನ ಗೆಳೆತನ ತುಂಬ ಹಳೆಯದು. ನಾವಿಬ್ಬರೂ ಒಟ್ಟಿಗೆ ಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ನಾವು ಜೊತೆಯಾಗಿ ಅಭಿನಯಿಸಿದ್ದ ಬಹುತೇಕ ಸಹ ನಟರು ಈಗ ನಾಯಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗ ಆ ಸಾಲಿಗೆ ಹರಿ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಅವರಿಗೆ ಶುಭವಾಗಲಿ’ ಎಂದು ಹಾರೈಸಿದರು. ಚಿತ್ರದ ಟ್ರೇಲರ್ ಮೆಚ್ಚಿಕೊಂಡ ನಿರ್ದೇಶಕ ದಿನಕರ್ ತೂಗುದೀಪ ಕೂಡ ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಿಂದೆ “ನನ್ ಮಗಳೇ ಹೀರೊಯಿನ್’ ಚಿತ್ರವನ್ನು ನಿರ್ದೇಶಿಸಿದ್ದ ಬಾಹುಬಲಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ಬಾಹುಬಲಿ, “ತನ್ನ ದೈತ್ಯ ಕಾಯವನ್ನು ಇಟ್ಟುಕೊಂಡು ವ್ಯಕ್ತಿಯೊಬ್ಬ ಹೇಗೆ ಸವಾಲುಗಳನ್ನು ಎದುರಿಸುತ್ತಾನೆ. ಕೊನೆಗೆ ಹೇಗೆ ಎಲ್ಲರಿಗೂ ಇಷ್ಟವಾಗುತ್ತಾನೆ ಅನ್ನೊದು ಚಿತ್ರ. ಇಡೀ ಚಿತ್ರ ನವಿರಾದ ಹಾಸ್ಯದಲ್ಲಿ ಸಾಗುತ್ತದೆ. ನೋಡುಗರಿಗೆ ಕಂಪ್ಲೀಟ್ ಮನರಂಜನೆ ನೀಡುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರಕ್ಕೆ ಎಲ್ ಎಂ ಸೂರಿ ಛಾಯಾಗ್ರಹಣ, ಕೆ.ಎಂ ಪ್ರಕಾಶ ಸಂಕಲನವಿದೆ. ಚಿತ್ರದ ಮೂರು ಹಾಡುಗಳಿಗೆ ಹರ್ಷವರ್ಧನ ರಾಜ್ ಸಂಗೀತವಿದೆ. ಸಂಚಿತ್ ಹೆಗ್ಡೆ, ರವೀಂದ್ರ ಸೂರಗಾವಿ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನಾಗೇಂದ್ರ ಪ್ರಸಾದ್, ಹೃದಯಶಿವ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. “ಎಂಎನ್ ವೈ ಪಿಕ್ಚರ್’ ಬ್ಯಾನರ್‌ನಲ್ಲಿ ಎಂ.ಡಿ ಶ್ರೀಧರ್, ಎ.ವಿ ಕೃಷ್ಣಕುರ್ಮಾ (ಕೆ.ಕೆ), ಮೋಹನ ಕುಮಾರ ಎನ್.ಜಿ, ರಂಗಸ್ವಾಮಿ ಕೆ.ಆರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನು “ಎಂ.ಆರ್.ಪಿ’ ಚಿತ್ರದಲ್ಲಿ ಹರಿ ಅವರಿಗೆ ನಾಯಕಿಯಾಗಿ, ಚೈತ್ರಾ ರೆಡ್ಡಿ ಅಭಿನಯಿಸಿದ್ದಾರೆ. ಉಳಿದಂತೆ ವಿಜಯ ಚೆಂಡೂರ್, ಸುಧಾ ಬೆಳವಾಡಿ, ಪ್ರಕಾಶ ತುಮಿನಾಡ್, ಬಲರಾಜವಾಡಿ, ಮೋಹನ ಜುನೇಜಾ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾರಂಭದ ವೇದಿಕೆಯಲ್ಲಿ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು “ಎಂ.ಆರ್.ಪಿ’ ಚಿತ್ರದ ಅನುಭವ ಮತ್ತು ವಿಶೇಷತೆಗಳ ಬಗ್ಗೆ ಮಾತನಾಡಿದರು. ಸದ್ಯ ಟ್ರೇಲರ್ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೇ ಮಾರ್ಚ್ ವೇಳೆಗೆ “ಎಂ.ಆರ್.ಪಿ’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.