ಕಲಬುರಗಿ: ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಬೇಕಾಬಿಟ್ಟಿಯಾಗಿ ಮನೆ ಸುತ್ತಲಿನ ಪರಿಸರದಲ್ಲಿ ಜನರು ಕಸ ಚೆಲ್ಲುವುದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಸಿಬ್ಬಂದಿ ಕಸ ಚೆಲ್ಲುವ ಸ್ಥಳದಲ್ಲಿ ಮಟ್ಟಸಾಗಿ ಕಸ ಗೂಡಿಸಿ ಸ್ವಚ್ಛ ಮಾಡಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಕಸ ಚೆಲ್ಲುವವರ ಮನಪರಿವರ್ತನೆಗೆ ವಿನೂತನ ಹೆಜ್ಜೆ ಇಟ್ಟಿದ್ದಾರೆ.
ಇದು ನಿಜಕ್ಕೂಹೊಸಐಡಿಯಾ! ಸಾರ್ವಜನಿಕರು, ಮಹಿಳೆಯರು ಬೇಕಾಬಿಟ್ಟಿಯಾಗಿ ಕಸ ಚೆಲ್ಲಿ ಪರಿಸರ ಕಲುಷಿತಗೊಳಿಸುವುದನ್ನು ತಡೆಯವ ನಿಟ್ಟಿನಲ್ಲಿ ಈ ಮಾರ್ಗ ಅನುಸರಿಸಲಾಗುತ್ತಿದೆ. ವಿಲೇವಾರಿ ಅರಿವು ಮೂಡಿಸುವ ಮೂಲಕ ಸ್ವಚ್ಛ ಕಲಬುರಗಿ ಮಾಡಲು ಮುಂದಾಗಿದ್ದಾರೆ. ಈ ಹಿಂದೆ ವಾರ್ಡುವಾರು ಜಾಗೃತಿ ಮಾಡಿದರು. ಪೋಸ್ಟರ್‌ಗಳನ್ನು ಹಚ್ಚಿದರೂ, ಧನಿವರ್ಧಕ ಮೂಲಕ ಸಂದೇಶ ನೀಡಿದರೂ, ಕೆಲವು ಕಡೆಗಳಲ್ಲಿ ದಂಡದ ಪ್ರಯೋಗವೂ ಮಾಡಿದರೂ
ಜನತೆ ಕಸ ಚೆಲ್ಲುವುದನ್ನು ನಿಲ್ಲಿಸಲೇ ಇಲ್ಲ.
ರಂಗೋಲಿ ಹೊಸ ಐಡಿಯಾ: ಈಗ ಪಾಲಿಕೆಯ ಹೊಸ ಕಮಿಷನರ್ ಭುವನೇಶ ಪಾಟೀಲ ಹೊಸ ಐಡಿಯಾ ಮಾಡಿದ್ದಾರೆ. ಕಸ ಚೆಲ್ಲುವ ಸ್ಥಳಗಳಲ್ಲಿ ಸ್ವಚ್ಛ ಮಾಡಿ ಅಲ್ಲಿ ರಂಗೋಲಿ ಬಿಡಿಸುವುದು. ಕಸ ಚೆಲ್ಲಲು ಬರುವ ಜನರು ಅದನ್ನು ನೋಡಿಯಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲಬಾರದು ಎಂದು ಜಾಗೃತರಾದರೆ ಸಾಕು ನಾವು ಸಕ್ಸಸ್ ಎನ್ನುವುದು ಪಾಲಿಕೆ ಸಿಬ್ಬಂದಿ ಅಂಬೋಣವಾಗಿದೆ.
ಇದೆಲ್ಲದರ ಮಧ್ಯೆ ಕಳೆದ ಕೆಲವು ದಿನಗಳಿಂದ ನಗರದ ವಾರ್ಡ್ ನಂ. 2ರ ಕಪನೂರು ಮುಖ್ಯ ರಸ್ತೆ, ವಾರ್ಡ್ ನಂ.10ರ ಶಹಾಬಜಾರ್ ರಸ್ತೆ, ವಾರ್ಡ್ ನಂ. 45ಕೋರ್ಟ್ ರಸ್ತೆ, ಎಸ್‌ಆರ್‌ಎನ್ ಮೆಹತಾ ಶಾಲೆ ಹತ್ತಿರದ ರಸ್ತೆಗಳಲ್ಲಿ ಪಾಲಿಕೆಯ ಮಹಿಳಾ ಸಿಬ್ಬಂದಿ ಕಸವಿದ್ದ ಜಾಗೆಯಲ್ಲಿ ಸ್ವಚ್ಛಗೊಳಿಸಿ ವಿವಿಧ ಚಿತ್ತಾರದ ರಂಗೋಲಿ ಬಿಡಿಸಿದರು. ಈ ವೇಳೆ ಕಸ ಚೆಲ್ಲಲು ಬರುವ ವ್ಯಕ್ತಿ ಅಲ್ಲಿ ಕಸ ಚೆಲ್ಲಲು ಮನಸ್ಸು ಬಾರದೇ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುತ್ತಾನೆ ಎನ್ನುವುದು ಪಾಲಿಕೆಯ ಅನಿಸಿಕೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣಬಹುದು ಎನ್ನುವುದನ್ನು ಪಾಲಿಕೆ ಸಿಬ್ಬಂದಿ ಗಮನಿಸುತ್ತಿದ್ದಾರೆ.
ಪಾಲಿಕೆ ಸಿಬ್ಬಂದಿ ಅನಿಸಿಕೆ: ಇದೊಂದು ರೀತಿ ಖುಷಿ ಎನ್ನಿಸುವ ಕೆಲಸ. ಕಸಗೂಡಿಸುವ ನಾವು ಇನ್ಮುಂದೆ ರಸ್ತೆಗಳಲ್ಲಿ ರಂಗೋಲಿ ಹಾಕಿದರೆ ಕಸ ಗುಡಿಸೋದಾದರೂ ತಪ್ಪುತ್ತದೆ. ಜನರಿಗೆ ಈಚೆಗೆ ಹಲವಾರು ಬಾರಿ ಸರ್ಕಾರದವರು ಪ್ರಚಾರ ಮಾಡಿ ಹೇಳ್ತಿದ್ರೂ ಜನ ಕಸವನ್ನು ಎಲ್ಲಿ ಬೇಕಲ್ಲಿ ಬಿಸಾಡುತ್ತಿದ್ದಾರೆ. ಆದ್ದರಿಂದ ನಮ್ಮ ಕಮಿಷನರ್ ಹೊಸ ಐಡಿಯಾ ಮಾಡಿದ್ದಾರೆ. ನೋಡ್ಬೇಕು. ಜನಾ ಏನ್ಮಾಡ್ತಾರೋ..ಎಂದು ಪಾಲಿಕೆ ಸಿಬ್ಬಂದಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸೂರ್ಯಕಾಂತ್ ಎಂ.ಜಮಾದಾರ