Advertisement

Friendship: ಕೈಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

03:37 PM Apr 24, 2024 | Team Udayavani |

ಒಂದು ಮಗು ಹುಟ್ಟಿ ಬೆಳೆದು ಶಾಲೆಗೆ ಹೋಗಲು ಆರಂಭಿಸಿದಾಗ ಅಲ್ಲಿ ಸಿಗುವ ಪಾಠಕ್ಕಿಂತಲೂ  ಅತ್ಯಮೂಲ್ಯ ಸಂಪತ್ತು ಗೆಳೆತನ. ಆ ಗೆಳೆತನ ನಿಜವೇ ಆಗಿದ್ದರೆ ಯಾರಿಂದಲೂ ಅದನ್ನು ಮುರಿಯಲು ಸಾಧ್ಯವಿಲ್ಲ. ಗೆಳೆತನ ಯಾವಾಗ ಹೇಗೆ ಆರಂಭವಾಗುತ್ತವೆ ಎಂದು ಯಾರಿಗೂ ತಿಳಿಯುವುದಿಲ್ಲ.

Advertisement

ಆದರೆ ಅದಕ್ಕಿರುವ ಶಕ್ತಿ ಅಪೂರ್ವ ಮತ್ತು ಅದೊಂದು ಬೆಲೆಕಟ್ಟಲಾಗದ ಭಾಂದವ್ಯ. ಅನೇಕ ಬಾರಿ ನಾವು ಸಂಕಷ್ಟದಲ್ಲಿ ಸಿಲುಕಿಕೊಂಡಾಗ ತಂದೆ-ತಾಯಿಗಿಂತ ಮೊದಲು ಗೆಳೆಯನ ಬಳಿ ಹೋಗಿ ಮುಜುಗರವಿಲ್ಲದೆ ನಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಳ್ಳುತ್ತೇವೆ. ಅದೇ ರೀತಿ ತಂದೆತಾಯಿಗೆ ತಮ್ಮ ಮಕ್ಕಳಿಗೆ ಒಳ್ಳೆಯ ಗೆಳೆಯರಿದ್ದಾರೆ ಎಂದಾದರೆ ಅವರೂ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.

ನಿಜವಾದ ಗೆಳೆಯರೆಂದರೆ ಹಣ, ಸಂಪತ್ತು, ಆಸ್ತಿಯಿದ್ದಾಗ ಅಥವಾ ನಾವು ಸಂತೋಷದಲ್ಲಿದ್ದಾಗ ಮಾತ್ರ ಬರುವವರಲ್ಲ. ಬದಲಿಗೆ ದುಃಖದಲ್ಲಿರುವಾಗ, ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತನ್ನ ಕೈಲಾದಷ್ಟು ನೆರವಾಗುವವನು. ಇಂತಹ ಒಬ್ಬ ಗೆಳೆಯ ನಮಗೆ ಸಿಕ್ಕದರೆ ನಾವೇ ಪುಣ್ಯವಂತರು ಎನ್ನಬಹುದು. ಗಮನಿಸಿ ನೋಡಿ ನೀವು ಸಂತೋಷದಿಂದ ಇದ್ದೀರಿ ಎಂದಾದರೆ ಹೆಚ್ಚಿನ ಬಾರಿ ಅದಕ್ಕೆ ನಿಮ್ಮ ಗೆಳೆಯರೇ ಕಾರಣರಾಗಿರುತ್ತಾರೆ.

ಅದೃಷ್ಟವಶಾತ್‌, ನನಗೂ ಜೀವನದಲ್ಲಿ ಅದ್ಭುತ ಗೆಳೆಯರು ಸಿಕ್ಕಿದ್ದಾರೆ. ಅವರ್ಯಾರೂ ಕಷ್ಟದ ಸಮಯದಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ಹೋದವರಲ್ಲ. ಒಳ್ಳೆಯ ಕೆಲಸ ಮಾಡಲು ಹೊರಟಾಗ ಅಪಹಾಸ್ಯ ಮಾಡಿದವರಿಲ್ಲ, ಪ್ರೋತ್ಸಾಹಿಸಿದವರೆ ಎಲ್ಲ. ನನ್ನ ಸಂತೋಷದಲ್ಲಿ ಬಹುದೊಡ್ಡ ಪಾತ್ರ ವಹಿಸಿರುವ ನನ್ನ ಗೆಳೆಯರು, ನನಗೆ ಅನೇಕ ಪಾಠಗಳನ್ನು ಹೇಳಿಕೊಟ್ಟಿದ್ದಾರೆ. ಹೊಸ ವಿಚಾರಗಳನ್ನು ಕಲಿಸಿದ್ದಾರೆ.

ಎಷ್ಟೋ ಮಂದಿ ಪ್ರೀತಿಯಲ್ಲಿ ಸೋತು, ಜೀವನವೇ ಮುಗಿಯಿತು ಎಂದು ಕೂತವರಿಗೆ ಬೈದು ಬುದ್ಧಿ ಹೇಳಿದ ಸ್ನೇಹಿತರನ್ನು ನೋಡಿದ್ದೇನೆ. ಇನ್ನು ತನಗೇನಾದರೂ ಆಗಲಿ ಚಿಂತೆಯಿಲ್ಲ, ನನ್ನ ಸ್ನೇಹಿತನಿಗೆ ಏನೂ ತೊಂದರೆಯಾಗಬಾರದು ಎಂದು ತೆರೆಮರೆಯಲ್ಲಿ ಕಷ್ಟಪಟ್ಟವರನ್ನು ಕಂಡಿದ್ದೇನೆ. ಹೀಗಾಗಿಯೇ ಈ ಗೆಳೆತನ ಎಂಬುದು ಯಾವುದೇ ಒಂದು ಸ್ವಾರ್ಥವಿಲ್ಲದ ಸಂಬಂಧ.

Advertisement

ಸ್ವಾಮಿ ವಿವೇಕಾನಂದರು ತಮಗೆ ಬಾಲ್ಯದಲ್ಲಿ ಕಷ್ಟಗಳು ಎದುರಾದಾಗ ಮನಸ್ಸನ್ನು ಅರ್ಥಮಾಡಿಕೊಂಡು ಸಹಾಯ ಮಾಡಿದ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತಾರೆ. ಸ್ನೇಹ ಎನ್ನುವುದು ಬಡವ-ಬಲ್ಲಿದ, ಜಾತಿ- ಧರ್ಮ, ವಯಸ್ಸಿನ ಹಂಗಿಲ್ಲದೆ ಎಲ್ಲೆಡೆ ಬೆಳೆಯುತ್ತದೆ. ಪ್ರತಿ ವ್ಯಕ್ತಿಯೂ ತನಗೆ ಧೈರ್ಯ ತುಂಬುವ, ಕಷ್ಟ-ಸುಖಗಳನ್ನು ಹಂಚಿಕೊಳ್ಳಬಲ್ಲ, ಕೆಟ್ಟ ಪರಿಸ್ಥಿತಿಯಲ್ಲಿ ನೈತಿಕ ಸ್ಥೈರ್ಯ ತುಂಬುವ ಸ್ನೇಹಿತರ ಬಳಗವನ್ನು ಸೃಷ್ಟಿಸಿಕೊಂಡಿರುತ್ತಾನೆ. ನೀವೂ ಅಷ್ಟೆ, ನಿಮ್ಮ ಗೆಳೆತನ ನಿಜವಾಗಿದ್ದರೆ ಎಂದಿಗೂ ಅದನ್ನು ಕಳೆದುಕೊಳ್ಳಬೇಡಿ.

- ಶೃತಿ ಬೆಳ್ಳುಂಡಗಿ

ವಿವಿ ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next