Advertisement

ಕ್ರೋಢ ಬೈಲೂರು: ಸಾರ್ವಜನಿಕ ಸಾರಿಗೆ ಸಂಪರ್ಕವೇ ಇಲ್ಲದ ಊರು​​​​​​​

12:30 AM Jan 19, 2019 | Team Udayavani |

ಕನಿಷ್ಠ ಪಕ್ಷ ಕುಂದಾಪುರ- ಸಿದ್ದಾಪುರಕ್ಕೆ ಸಂಚರಿಸುವ ಸರಕಾರಿ ಬಸ್‌ಗಳನ್ನಾದರೂ ಈ ಮಾರ್ಗದಲ್ಲಿ ಸಂಚರಿಸುವಂತೆ ಸಂಬಂಧ ಪಟ್ಟವರು ಗಮನ ಹರಿಸುವುದು ಅಗತ್ಯ.

Advertisement

ಅಂಪಾರು: ಕ್ರೋಢಬೈಲೂರಿಗೆ ಈ ಹಿಂದೆ 4-5 ಬಸ್‌ಗಳು ಹತ್ತಾರು ಬಾರಿ ಬರುತ್ತಿದ್ದವು. ಆದರೆ ಈಗ ಇಲ್ಲಿಗೆ ಬರುತ್ತಿದ್ದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಬೆಳಗ್ಗೆ ಒಂದು ಸರಕಾರಿ ಬಸ್‌ ಬಿಟ್ಟರೆ ಬೇರೆ ಯಾವ ಬಸ್‌ ಕೂಡ ಈಗ ಬರುತ್ತಿಲ್ಲ. ಸಾರ್ವಜನಿಕ ಸಾರಿಗೆ ಸಂಪರ್ಕವೇ ಇಲ್ಲದ ಊರಿನಂತಾಗಿದೆ ಕ್ರೋಢಬೈಲೂರು.

ಕ್ರೋಢಬೈಲೂರಿಗೆ ಮೊದಲು ಬೆಳಗ್ಗೆ 8.30ಕ್ಕೆ, ಅನಂತರ ಬೆಳಗ್ಗೆ 11 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ, ಸಂಜೆ 4ಕ್ಕೆ ಹಾಗೂ ಸಂಜೆ 5.30ಕ್ಕೆ ಹೀಗೆ ಸರಕಾರಿ ಹಾಗೂ ಖಾಸಗಿಯವರ ಬೇರೆ ಬೇರೆ ಬಸ್‌ಗಳು ಬರುತ್ತಿದ್ದವು. ಆದರೆ ಈಗ ಇದ್ಯಾವ ಬಸ್‌ಗಳು ಇಲ್ಲಿಗೆ ಬರುತ್ತಿಲ್ಲ. ಇದನ್ನೇ ನಂಬಿದ್ದ ಶಾಲಾ- ಕಾಲೇಜು ಮಕ್ಕಳು, ಕಚೇರಿ, ಇನ್ನಿತರ ಕಡೆಗಳಿಗೆ ಕೆಲಸಕ್ಕೆ ಹೋಗುವವರ ಸ್ಥಿತಿ ಹೇಳಲಾಗದಂತಾಗಿದೆ. ಉಡುಪಿ – ಕೊಲ್ಲೂರಿಗೆ ಹೋಗುವ ಖಾಸಗಿ ಬಸ್‌ವೊಂದು ಇಲ್ಲಿಗೆ ಬಂದು ಹೋಗುತ್ತಿತ್ತು. ಆದರೆ 15 ದಿನಗಳ ಹಿಂದೆ ಅದು ಕೂಡ ಸಂಚಾರ ನಿಲ್ಲಿಸಿದೆ. ಇದರಿಂದ ಈ ಊರಿಗೆ ಬಸ್‌ ಸಂಪರ್ಕವೇ ಇಲ್ಲದಂತಾಗಿದೆ. 

500 ಕ್ಕೂ ಅಧಿಕ ವಿದ್ಯಾರ್ಥಿಗಳು
ಕ್ರೋಢಬೈಲೂರಿನಿಂದ ಶಂಕರ ನಾರಾಯಣ ಹಾಗೂ ಇನ್ನಿತರ ಕಡೆಗಳಲ್ಲಿ   ವ್ಯಾಸಂಗ ಮಾಡುವ ಸುಮಾರು 500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಅವರೀಗ ಬಸ್‌ ಸೌಕರ್ಯವಿಲ್ಲದೆ ಯಾರ್ಯಾರದೋ ವಾಹನಗಳನ್ನು ಅಡ್ಡಹಾಕಿ ಸಂಚರಿಸುವಂತಾಗಿದೆ.  

8 ಕಿ.ಮೀ. ಅಂತರ
ಕ್ರೋಢಬೈಲೂರಿಗೆ ಹತ್ತಿರದ ದೊಡ್ಡ ಪೇಟೆಗಳೆಂದರೆ ಅಂಪಾರು ಹಾಗೂ ಶಂಕರನಾರಾಯಣ. ಇವರೆಡೂ ಪೇಟೆಗಳು ಕೂಡ ಕ್ರೋಢಬೈಲೂರಿನಿಂದ ಸಮಾನ ಅಂತರ ಅಂದರೆ ತಲಾ 8 ಕಿ.ಮೀ. ದೂರದಲ್ಲಿವೆ. ಇಲ್ಲಿನ ಜನ ಎಲ್ಲದಕ್ಕೂ ಅಂಪಾರು ಅಥವಾ ಶಂಕರನಾರಾಯಣವನ್ನೇ ಅವಲಂಬಿಸಿದ್ದು, ಈ ಮಾರ್ಗವಾಗಿ ಅಗತ್ಯವಾಗಿ ಬಸ್‌ ವ್ಯವಸ್ಥೆ ಕಲ್ಪಿಸಲಿ ಎನ್ನುವುದು ಇಲ್ಲಿನ ಜನರ ಒಕ್ಕೊರಲ ಮನವಿಯಾಗಿದೆ. 

Advertisement

ಸರಕಾರಿ ಬಸ್‌ ಆದರೂ ಬರಲಿ
ಕುಂದಾಪುರದಿಂದ ಸಿದ್ದಾಪುರಕ್ಕೆ ಹೋಗುವ ಬಸ್‌ಗಳಲ್ಲಿ ಕೆಲವಾದರೂ ಅಂಪಾರು ಆಗಿ ಬಂದು ಕ್ರೋಢಬೈಲೂರು ಮೂಲಕವಾಗಿ ಶಂಕರನಾರಾಯಣ ಮಾರ್ಗವಾಗಿ ಅಲ್ಲಿಂದ ಸಿದ್ದಾಪುರಕ್ಕೆ ಸಂಚರಿಸಲಿ. ಕನಿಷ್ಠ ಕುಂದಾಪುರ- ಸಿದ್ದಾಪುರಕ್ಕೆ ಸಂಚರಿಸುವ ಸರಕಾರಿ ಬಸ್‌ಗಳನ್ನಾದರೂ ಈ ಮಾರ್ಗದಲ್ಲಿ ಸಂಚರಿಸುವಂತೆ ಸಂಬಂಧಪಟ್ಟವರು ಗಮನವಹಿಸಲಿ. ನಮಗೆ ಅಂಪಾರು ಅಥವಾ ಶಂಕರನಾರಾಯಣಕ್ಕೆ ಹೋಗಬೇಕಾದರೆ ಬಸ್‌ ಬೇಕೇ ಬೇಕು. ಇಲ್ಲದಿದ್ದರೆ 8-10 ಕಿ.ಮೀ. ರಿಕ್ಷಾ ಅಥವಾ ಇನ್ನಿತರ ವಾಹನಗಳಲ್ಲಿ ಹೆಚ್ಚು ದುಡ್ಡು ತೆತ್ತು ತೆರಳಬೇಕಾಗಿದೆ. 
– ದೇವಪ್ಪ ಶೆಟ್ಟಿ, ಸ್ಥಳೀಯರು, ಕ್ರೋಢಬೈಲೂರು

ಬಸ್‌ ಸಂಪರ್ಕಕ್ಕೆ ಪ್ರಯತ್ನ
ಪರ್ಮಿಟ್‌ ತೆಗೆದುಕೊಂಡವರು ಹಾಗೇ ಏಕಾಏಕಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸುವಂತಿಲ್ಲ. ಅಲ್ಲಿನವರು ನನಗೆ ಆ ಬಸ್ಸಿನ ಸಂಖ್ಯೆ ಅಥವಾ ಇನ್ನಿತರ ದಾಖಲೆಗಳನ್ನು ನೀಡಿ ದೂರು ಸಲ್ಲಿಸಲಿ. ಅವರಿಗೆ ನೋಟಿಸ್‌ ನೀಡಿ, ಕ್ರೋಢಬೈಲೂರಿಗೆ ಮತ್ತೆ ಬಸ್‌ ವ್ಯವಸ್ಥೆ ಆರಂಭಿಸಲು ಸೂಕ್ತ  ಕ್ರಮ ಕೈಗೊಳ್ಳಲಾಗುವುದು. 
– ರಮೇಶ್‌ ವರ್ಣೇಕರ್‌, ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next