ಬೆಂಗಳೂರು: ಮಗುವಿನ ಬೇಕು ಬೇಡಗಳನ್ನು ಒಬ್ಬ ತಾಯಿಯಿಂದ ಮಾತ್ರ ಅರಿಯಲು ಸಾಧ್ಯ. ಆದರೆ ತಾಯಿಯೇ ಇಲ್ಲದ ಮಕ್ಕಳ ಪರಿಸ್ಥಿತಿ ಒಮ್ಮೆ ಯೋಚಿಸಿ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾಗಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಮೊಗದಲ್ಲಿ ಕರ್ನಾಟಕದ ತಾಯಂದಿರು ಪ್ರೀತಿಯಿಂದ ಕಳುಹಿಸಿದ ಆಟಿಕೆಗಳು ನಗುವು ಮೂಡಿಸಿದೆ.
ಸಾಮಾನ್ಯವಾಗಿ ಯಾವುದೇ ಒಂದು ದೇಶವು ಯುದ್ಧ, ಭಯೋತ್ಪಾದನೆ ದಾಳಿಗಳಿಗೆ ತುತ್ತಾದ ಸಂದರ್ಭದಲ್ಲಿ ಅಲ್ಲಿನ ಜನರ ಸಹಾಯಕ್ಕಾಗಿ ಯುನೈಟೆಡ್ ನೇಷನ್ಸ್ ಆಫೀಸ್ ಡ್ರಗ್ಸ್ ಆ್ಯಂಡ್ ಕ್ರೈಮ್ ಮೂಲಕ ಹಲವು ರಾಷ್ಟ್ರಗಳು ನೊಂದವರಿಗೆ ಸಹಾಯ ಮಾಡಲು ಮುಂದಾಗುತ್ತವೆ. ಈ ಬಾರಿ ಭಯೋತ್ಪಾದಕ ದಾಳಿಯಲ್ಲಿ ಪೋಷಕರನ್ನು ಕಳೆದುಕೊಂಡ ಅಫ್ಘಾನಿಸ್ತಾನದ ಮಕ್ಕಳ ಮೊಗದಲ್ಲಿ ನಗು ಮೂಡಿಸಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವು ಭರವಸೆ ನೀಡಲು ಭಾರತವು ಕೈ ಜೋಡಿಸಿದೆ.
ಏಕೈಕ ರಾಜ್ಯದ ಹೆಗ್ಗಳಿಕೆ!: ಅಫ್ಘಾನಿಸ್ತಾನದ ಮಕ್ಕಳಿಗೆ ಮಾನವೀಯ ನೆಲೆಯಲ್ಲಿ ಆಟಿಕೆಗಳ ರಫ್ತುಗೆ ಆಯ್ಕೆ ಮಾಡಿದ ಏಕೈಕ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಸಂಜೀವಿನಿ-ರಾಜ್ಯ ಗ್ರಾಮೀಣ ಜೀವನೋಪಾಯ ಸಂಸ್ಥೆ ಇದರ ಜವಾಬ್ದಾರಿ ವಹಿಸಿಕೊಂಡು ಮರದ ಆಟಿಕೆಗಳಿಗೆ ವಿಶೇಷ ಮನ್ನಣೆ ಗಳಿಸಿದ ರಾಮನಗರ ಚನ್ನಪಟ್ಟಣದ ಗೊಂಬೆಗಳನ್ನು ಕೇಂದ್ರ ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ನ.9ರಂದು ವಿದೇಶಕ್ಕೆ ರವಾನೆಯಾಗಿದೆ.
ಚನ್ನಪಟ್ಟಣ ಗೊಂಬೆ ಯಾಕೆ?: ಮರದ ಆಟಿಕೆಗಳಿಗೆ ಕರ್ನಾಟಕದ ಚನ್ನಪಟ್ಟಣದ ಮರದ ಗೊಂಬೆಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳು ಜಿಐ ಟ್ಯಾಗ್ ಹೊಂದಿದ್ದು, ನೈಸರ್ಗಿಕ ಬಣ್ಣಗಳಿಂದ ತಯಾರಿಸಲಾಗುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜತೆಗೆ ಅಂತಾರಾಷ್ಟ್ರೀಯ ರಫ್ತಿಗೆ ಅಡೆತಡೆಗಳಿಲ್ಲದೇ ಕಸ್ಟಮ್ ಕ್ಲೀಯರ್ ಪಡೆಯಲು ಸಹಾಯಕವಾಗಿದೆ.
1.50 ಲಕ್ಷ ರೂ. ಮೊತ್ತದ ಆಟಿಕೆ: ಚನ್ನಪಟ್ಟಣದ “ಶ್ರೀ ಸಾಯಿ ಬಾಬಾ ಮಹಿಳಾ’ ಸ್ವಸಹಾಯ ಗುಂಪಿನ ಸುಮಾರು 10 ಮಂದಿ ಮಹಿಳೆಯರು ತಯಾರಿಸಿದ ಮರದ ಆಟಿಕೆಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಲಾಗಿದೆ. ವಿಶೇಷವಾಗಿ 3 ರಿಂದ 6 ವರ್ಷದೊಳಗಿನ ಮಕ್ಕಳ ಕಲಿಕೆಯ ಜತೆಗೆ ಮನೋರಂಜನೆಗೆ ಅಗತ್ಯವಿರುವ ಇಂಗ್ಲೀಷ್ ವರ್ಣ ಮಾಲೆ, ಸಂಖ್ಯೆಗಳು, ಮೆದುಳು ಚುರುಕುಗೊಳಿಸುವ ಆಟಿಕೆ, ಗೊಂಬೆಗಳು, ಮಕ್ಕಳಾಡುವ ಬ್ಲಾಕ್ಸ್‌ಗಳಿವೆ. ಬೆಂಗಳೂರು ಮೂಲಕ ಹೊಸದಿಲ್ಲಿ ಹಾಗೂ ಅಲ್ಲಿಂದ ಅಫ್ಘಾನಿಸ್ತಾನದ ಮಕ್ಕಳ ಕೈ ಸೇರಿವೆ.
“ಇನ್ನಷ್ಟು ರಾಷ್ಟ್ರ ಗಳಿಗೆಸಹಾಯ ಸಿಗಲಿದೆ: ಯುನೈಟೆಡ್ ನೇಷನ್ಸ್ ಆಫೀಸ್ ಡ್ರಗ್ಸ್ ಆ್ಯಂಡ್ ಕ್ರೈಮ್‌ನ ಅಫ್ಘಾನಿಸ್ತಾನ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಕರ್ನಾಟಕ ಜೀವನೋಪಾಯ ಮಿಶನ್‌ನಿಂದ ಕಳುಹಿಸಿದ ಆಟಿಕೆಗಳು ಪೋಷಕರನ್ನು ಕಳೆದುಕೊಂಡ ಮಕ್ಕಳ ಕೈ ಸೇರಿವೆ. ಇಂತಹ ಸಹಾಯ ಕರ್ನಾಟಕದಿಂದ ಇನ್ನಷ್ಟು ರಾಷ್ಟ್ರಗಳಿಗೆ ಸಿಗಲಿ ಎಂದು ಟ್ವೀಟ್ ಮಾಡಿದೆ.
ಇದೇ ಮೊದಲ ಬಾರಿಗೆ ಕರ್ನಾಟಕದಿಂದ ಪೋಷಕರನ್ನು ಕಳೆದುಕೊಂಡ ಅಫ್ಘಾನಿ ಸ್ತಾನದ ಅನಾಥ ಮಕ್ಕಳಿಗೆ ಚನ್ನಪಟ್ಟಣದ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ತಯಾರಿಸಿದ ಆಟಿಕೆಗಳನ್ನು ಕಳುಹಿಸಲಾಗಿದೆ. ಒಬ್ಬ ತಾಯಿಯಿಂದಲೇ ಮಗುವಿನ ಮನಸ್ಸು ಅರ್ಥ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಅಮ್ಮಂದಿರು ತಯಾರಿಸಿದ ಆಟಿಕೆ ಮಕ್ಕಳಿಗೆ ಕಳುಹಿಸಲಾಗಿದೆ.
-ಪಿ.ಐ. ಶ್ರೀವಿದ್ಯಾ, ನಿರ್ದೇಶಕಿ ಕೆಎಸ್‌ಆರ್‌ಎಲ್‌ಪಿಎಸ್.
– ತೃಪ್ತಿ ಕುಮ್ರಗೋಡು