Advertisement

Karnataka ಬರದ ಸವಾಲು; ರಾಜ್ಯ ಸರಕಾರ ಕಂಗಾಲು

01:12 AM Nov 08, 2023 | Team Udayavani |

ರಾಜ್ಯದ ಬರಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿ ನಾಯಕರು ಜಿಲ್ಲಾ ಪ್ರವಾಸ ಕೈಗೊಂಡು ರಾಜ್ಯ ಸರಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿದ್ದಾರೆ. ರಾಜ್ಯ ಸರಕಾರದ ವೈಫ‌ಲ್ಯ ಮರೆಮಾಚಲು ಸಿಎಂ ಸಿದ್ದರಾಮಯ್ಯ ಪದೇಪದೆ ಕೇಂದ್ರ ಹಾಗೂ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಕೇಂದ್ರದ ಜೊತೆ ಜಗಳ ಮಾಡುತ್ತಿಲ್ಲ, ನಮಗೆ ಬರಬೇಕಾದ್ದನ್ನು ಕೇಳುತ್ತಿದ್ದೇವೆ’ ಎಂದು ತಿರುಗೇಟು ಹೇಳಿದ್ದಾರೆ. ಬೆನ್ನಲ್ಲೇ, ಇಂಡಿ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ಕಷ್ಟ ಕಾಲದಲ್ಲಿ ನೀರು ಕೊಡದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿರುವುದು ರಾಜ್ಯ ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

Advertisement

ರೈತ ವಿರೋಧಿ ಧೋರಣೆ: ಬಿಜೆಪಿ ಆರೋಪ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಬರ ಅಧ್ಯಯನ ತಂಡ ಮಂಗಳವಾರ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ಪ್ರವಾಸ ಕೈಗೊಂಡು, ರೈತರೊಂದಿಗೆ ಸಂವಾದ ನಡೆಸಿತಲ್ಲದೆ, ರಾಜ್ಯ ಸರಕಾರದ ರೈತ ವಿರೋಧಿ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿತು. ಮೈಸೂರು ಜಿಲ್ಲೆಯಲ್ಲಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ತಂಡ ಹಾಗೂ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದ ತಂಡ ದಾವಣಗೆರೆ ಜಿಲ್ಲೆಯಾದ್ಯಂತ ಸಂಚರಿಸಿ ಬರದ ಭೀಕರತೆಯ ಮಾಹಿತಿ ಕಲೆ ಹಾಕಿತು. ಚಳ್ಳಕೆರೆಗೆ ಭೇಟಿ ನೀಡಿ ಅಲ್ಲಿನ ಸಣ್ಣ ಕೈಗಾರಿಕೆಗಳ ಉದ್ದಿಮೆದಾರರ ಜತೆ ಸಂವಾದ ನಡೆಸಿತು.

ಜಗಳ ಮಾಡುತ್ತಿಲ್ಲ, ನಮಗೆ ಬರಬೇಕಾದ್ದನ್ನು ಕೊಡಿ
ಹಾಸನ: ಕೇಂದ್ರದ ಜೊತೆ ನಾವು ಜಗಳ ಮಾಡುತ್ತಿಲ್ಲ. ನಮಗೆ ಬರಬೇಕಾದ್ದನ್ನು ಕೇಳುತ್ತಿದ್ದೇವೆ. ಸಂಕಷ್ಟ ಸಂದರ್ಭದಲ್ಲಿ ರಾಜ್ಯಗಳಿಗೆ ಮೀಸಲಿಡುವ ಎನ್‌ಡಿಆರ್‌ಎಫ್ನಿಂದ ರಾಜ್ಯದ ಬರ ಪರಿಹಾರ ಕಾರ್ಯಗಳಿಗೆ ನಾವು ಅನುದಾನ ಕೇಳುತ್ತಿದ್ದೇವೆಯೇ ಹೊರತು, ಕೇಂದ್ರವೇ ಹಣ ಭರಿಸಬೇಕು ಎಂದು ಕೇಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವರು ರಾಜ್ಯ ಸರಕಾರ ಕೇಂದ್ರದಿಂದ ಉಚಿತವಾಗಿ ಅನುದಾನ ಕೇಳುತ್ತಿದೆ ಎಂದು ಹೇಳುತ್ತಾರೆ. ಆದರೆ, ವರ್ಷಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಕೇಂದ್ರಕ್ಕೆ ಹೋಗಲಿದೆ. ಈ ಹಣವನ್ನು ರಾಷ್ಟ್ರೀಯ ಹಣಕಾಸು ಆಯೋಗದ ನಿರ್ದೇಶನದ ಪ್ರಕಾರ, ಇಂತಿಷ್ಟು ಹಣವನ್ನು ವಿವಿಧ ರೀತಿಯ ಸಂಕಷ್ಟಕ್ಕೆ ಸಿಲುಕುವ ರಾಜ್ಯಗಳಿಗೆ ಮೀಸಲಿಡಬೇಕು ಎಂಬ ನಿಯಮ ಇದೆ. ಅದನ್ನೇ ನಾವು ಕೇಳುತ್ತಿದ್ದೇವೆ. ಎಲ್ಲ ಕಾಲದಲ್ಲೂ ಇದು ನಡೆದು ಬಂದಿದೆ ಎಂದರು.

ಮೂರು ಜನ ಮಂತ್ರಿಗಳನ್ನು ದೆಹಲಿಗೆ ಕಳಿಸಿದೆ, ಆದರೆ ಯಾವುದೇ ಸಚಿವರೂ ಭೇಟಿಗೆ ಸಿಗಲಿಲ್ಲ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ನಾವು ಏನು ಮಾಡಬೇಕು ಎಂದು ಪ್ರಶ್ನಿಸಿದರು.

Advertisement

ರಾಜ್ಯ ಸರಕಾರದ ವಿರುದ್ಧ ಉಪವಾಸ ಸತ್ಯಾಗ್ರಹ
ಮಧುಗಿರಿ: ರಾಜ್ಯ ಸರಕಾರದ ಧೋರಣೆಯಿಂದ ರೈತರ ಬದುಕು ಬೀದಿಗೆ ಬಿದ್ದಿದ್ದು, ರಾಜಧಾನಿಯಲ್ಲಿ ಮುಂದಿನ ವಾರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಸಿಎಂ ಯುಡಿಯೂರಪ್ಪ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಮಾತನಾಡಿ, ರಾಜ್ಯ ಸರಕಾರ ರೈತರ ಹಿತ ಕಾಯುವಲ್ಲಿ ನಿರ್ಲಕ್ಷ್ಯ ತೋರಿದೆ. ಕೇಂದ್ರ ನೀಡುವ ಅಕ್ಕಿಯನ್ನೂ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಬೆಳೆನಾಶ, ಪರಿಹಾರ ವಿತರಣೆಯಲ್ಲಿ ವಿಳಂಬ ಹಾಗೂ ವಿದ್ಯುತ್‌ ಸಮಸ್ಯೆ ವಿರುದ್ಧ ಮುಂದಿನ ವಾರ ವಿಧಾನಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ತಂಡಗಳು ಬರ ಅಧ್ಯಯನಕ್ಕೆ ಇಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವರು ಬರ ಕುರಿತು ಸಭೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ. ಇಷ್ಟು ದಿನ ವಿದ್ಯುತ್‌ ನೀಡಲು ಮೀನಮೇಷ ಎಣಿಸುತ್ತಿದ್ದವರು ಈಗ ಏಳು ತಾಸು ವಿದ್ಯುತ್‌ ನೀಡಲು ಆದೇಶ ಮಾಡಿದ್ದಾರೆ. ಇದು ಬಿಜೆಪಿ ಬರ ಅಧ್ಯಯನಕ್ಕೆ ಮುಂದಾಗಿದ್ದರ ಪರಿಣಾಮ.
-ವಿಶ್ವೇಶ್ವರ ಹೆಗಡೆ ಕಾಗೇರಿ,
ಮಾಜಿ ಸ್ಪೀಕರ್‌

ರಾಜ್ಯ ಸರಕಾರ ಸಮರ್ಪಕವಾಗಿ ಬರ ಅಧ್ಯಯನ ನಡೆಸದೆ ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾ, ಸೋನಿಯಾ ಗಾಂಧಿ , ರಾಹುಲ್‌ಗಾಂಧಿ  ಮೆಚ್ಚಿಸಲು ಹೋಗಿ ರಾಜ್ಯದ ರೈತರನ್ನು ಬಲಿ ಕೊಡಲು ಮುಂದಾಗಿದೆ. ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸದೆ ವಾಸ್ತವ ಮರೆ ಮಾಚುತ್ತಿದ್ದಾರೆ. ಅವೈಜ್ಞಾನಿಕ ವರದಿ ನೀಡಿರುವುದರಿಂದ ಕೇಂದ್ರದಿಂದ ಬರ ಪರಿಹಾರದ ಹಣ ಬರುವುದು ವಿಳಂಬವಾಗಿದೆ.
-ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ

 

Advertisement

Udayavani is now on Telegram. Click here to join our channel and stay updated with the latest news.

Next