Advertisement

ಗ್ರಾಮೀಣ ಪ್ರತಿಭೆ ಗುರುತಿಸಿ ಬೆಳಕಿಗೆ ತರುವಲ್ಲಿ ಶತಮಾನದ ಸಾರ್ಥಕ ಸೇವೆ

10:06 AM Dec 07, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1913 ಶಾಲೆ ಸ್ಥಾಪನೆ
ಮುಳಿಹುಲ್ಲಿನ ಛಾವಣಿಯ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆ

ಶಿರ್ವ: ಬೆಳ್ಳೆ ಚರ್ಚ್‌ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಎಂಬ ಹೆಸರನ್ನು ಪಡೆಯುವ ಮೊದಲು ಮೂಡುಬೆಳ್ಳೆಯಿಂದ ಸುಮಾರು 2 ಕಿ.ಮೀ. ದೂರದ ತಬೈಲಿನ ಬಂಡಸಾಲೆ ಎಂಬಲ್ಲಿ ಸಣ್ಣ ಮುಳಿಹುಲ್ಲಿನ ಕಟ್ಟಡದಲ್ಲಿ ದಿ| ದಾಸಪ್ಪಯ್ಯ ಮತ್ತು ಕುಪ್ಪಣ್ಣಯ್ಯ ಸಹೋದರರಿಂದ ನಡೆಸಲ್ಪಡುತ್ತಿದ್ದ ಶಾಲೆಯು ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಶತಮಾನದ ಸಾರ್ಥಕ ಸೇವೆ ಕಂಡಿದೆ. ಶಾಲೆಯ ಸ್ಥಾಪನೆಯ ಬಗ್ಗೆ ನಿಖರ ದಾಖಲೆಗಳಿಲ್ಲದ್ದರೂ, ಮೂಡುಬೆಳ್ಳೆಯಲ್ಲಿ ಸಂತ ಲಾರೆನ್ಸರ ಚರ್ಚ್‌ ಸ್ಥಾಪಿಸಿದ್ದ ರೆ| ಫಾ| ಕಾಶ್ಮೀರ್‌ ಫೆರ್ನಾಂಡಿಸ್‌ ಅವರು 1913ರಲ್ಲಿ ದಿ| ದಾಸಪ್ಪಯ್ಯನವರಿಂದ ಶಾಲೆಯ ಆಡಳಿತವನ್ನು ವಹಿಸಿಕೊಂಡರು. 3 ವರ್ಷಗಳ ಕಾಲ ದಾಸಪ್ಪಯ್ಯನವರೇ ಮುಖ್ಯ ಶಿಕ್ಷಕರಾಗಿ ನಿಸ್ವಾರ್ಥ ಸೇವಾ ಮನೋಭಾವನೆಯಿಂದ ದುಡಿದಿದ್ದರು. 1931ರಲ್ಲಿ ಚರ್ಚ್‌ನ ಆಡಳಿತಕ್ಕೆ ಒಳಪಟ್ಟ ಬಳಿಕ ಶಾಲೆಗೆ ಶಾಶ್ವತ ಮಂಜೂರಾತಿ ದೊರಕಿತು. ವಂ|ಅಂಬುದಿಯಸ್‌ ಡಿ‡’ಸೋಜಾ ಅವರ ಕಾಲದಲ್ಲಿ ಶಾಲೆಯು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಕೆಥೋಲಿಕ್‌ ಶಿಕ್ಷಣ ಮಂಡಳಿಗೆ ಹಸ್ತಾಂತರಗೊಂಡಿತು.

ಶಾಲೆಯ ವಿಶೇಷತೆಗಳು
ನಿವೃತ್ತ ಮುಖ್ಯ ಶಿಕ್ಷಕ ದಿ| ಪೀಟರ್‌ ರಫಾಯಲ್‌ ಅರಾನ್ಹಾ 1998ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ,2001ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು 2003ರಲ್ಲಿ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪಡೆದು ಗ್ರಾಮೀಣ ಶಾಲೆಯ ಹೆಸರನ್ನು ಉತ್ತುಂಗಕ್ಕೇರಿಸಿದ್ದರು. 2003ರಲ್ಲಿ ನಿವೃತ್ತ ಶಿಕ್ಷಕಿ ಸ್ಟೆಲ್ಲಾ ಫೆರ್ನಾಂಡಿಸ್‌ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದಿದ್ದರು.

1913ರಲ್ಲಿಯೇ ನಿರ್ಮಾಣಗೊಂಡಿದ್ದ ಶಾಲಾ ಕಟ್ಟಡ ಶತಮಾನೋತ್ಸವ ಸಂದರ್ಭದಲ್ಲಿ ದುರಸ್ತಿ ಕಂಡಿದೆ. ಶತಮಾನೋತ್ಸವದ ಯೋಜನೆಯಾಗಿ ನೂತನ ಶೌಚಾಲಯ, ಅಕ್ಷರ ದಾಸೋಹ ಅಡುಗೆ ಕೋಣೆ, ತರಗತಿ ಕೊಠಡಿಗಳ ನವೀಕರಣ, ಕ್ರೀಡಾಂಗಣ ದುರಸ್ತಿ, ಆವರಣಗೋಡೆ ಮತ್ತು ಕಂಪ್ಯೂಟರ್‌ ಆಧಾರಿತ ಕಲಿಕಾ ಕೇಂದ್ರಗಳು ನಿರ್ಮಾಣಗೊಂಡಿವೆ. ಪ್ರಸ್ತುತ ಶಾಲೆಯಲ್ಲಿ 148 ವಿದ್ಯಾರ್ಥಿಗಳಿದ್ದು 3 ಶಿಕ್ಷಕರು ಹಾಗೂ 4 ಗೌರವ ಶಿಕ್ಷಕರಿದ್ದಾರೆ.

Advertisement

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಭಾರತೀಯ ನೌಕಾಪಡೆಯ ವಿಶಿಷ್ಟ ಸೇವಾ ಪದಕ ವಿಜೇತ ಕೊಮೊಡೋರ್‌ ಜೆರೋಮ್‌ ಕ್ಯಾಸ್ತಲಿನೋ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಂಗಳೂರು ಆಕಾಶವಾಣಿಯ ನಿವೃತ್ತ ಹಿರಿಯ ಉದ್ಘೋಷಕ ಮುದ್ದು ಮೂಡುಬೆಳ್ಳೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ, ಹಿರಿಯ ಸ್ವಾತಂತ್ರ್ಯ ಸೇನಾನಿ, ಆಯುರ್ವೇದ ಪಂಡಿತ ದಿ| ಪಂ|ಎಸ್‌.ಕೆ. ಸುವರ್ಣ, ಡಾ| ನೋರ್ಬರ್ಟ್‌ ಲೋಬೋ, ಡಾ| ಜಯಪ್ರಕಾಶ್‌ ಹೆಗ್ಡೆ, ರಾಷ್ಟ್ರೀಯ ವಾಲಿಬಾಲ್‌ ಆಟಗಾರ್ತಿ ಶ್ರೇಯಾ ಆಚಾರ್ಯ, ಮಾಜಿ ಜಿ.ಪಂ. ಅಧ್ಯಕ್ಷ ಜೆರಾಲ್ಡ್‌ ಫೆರ್ನಾಂಡಿಸ್‌, ಮಾಜಿ ಜಿ.ಪಂ.ಸದಸ್ಯೆ ಐಡಾ ಗಿಬ್ಟಾ ಡಿ‡’ಸೋಜಾ, ಮಾಜಿ ತಾ.ಪಂ. ಅಧ್ಯಕ್ಷ ದೇವದಾಸ್‌ ಹೆಬ್ಟಾರ್‌, ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ತಾ.ಪಂ. ಸದಸ್ಯೆ ಸುಜಾತಾ ಸುವರ್ಣ, ಗೇರುಬೀಜ ಉದ್ಯಮಿ ನಾಗರಾಜ ಕಾಮತ್‌ ಸೇರಿದಂತೆ ಹಲವಾರು ಬಿಷಪರು, ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆವಿದ್ಯಾರ್ಥಿಗಳನ್ನು ಈ ಶಿಕ್ಷಣ ಸಂಸ್ಥೆ ನೀಡಿದೆ.

ಒಂದನೇ ತರಗತಿಯಿಂದಲೇ ಆಂಗ್ಲ ಭಾಷಾ ತರಗತಿಗಳನ್ನು ನಡೆಸುತ್ತಿದ್ದು, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ದೈಹಿಕ ಶಿಕ್ಷಕರಿಲ್ಲದಿದ್ದರೂ ಪ್ರತಿವರ್ಷ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವರೆಗಿನ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
-ಸಿ| ಐರಿನ್‌ ವೇಗಸ್‌, ಮುಖ್ಯ ಶಿಕ್ಷಕಿ

ಹಿಂದಿನಿಂದಲೂ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿ ಸ್ನೇಹಿ ಶಾಲೆ ಎಂದು ಪರಿಸರದಲ್ಲಿ ಖ್ಯಾತಿ ಪಡೆದಿದ್ದ ಶಾಲೆಯಲ್ಲಿ ಯಾವುದೇ ಜಾತಿ, ಮತ, ವರ್ಗದ ಭೇದವಿಲ್ಲದೆ ಶಿಸ್ತು, ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಅವಕಾಶ ಸಿಗುತ್ತಿತ್ತು.
-ಮುದ್ದು ಮೂಡುಬೆಳ್ಳೆ, ಹಳೆವಿದ್ಯಾರ್ಥಿ

-  ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next