ಬೆಂಗಳೂರು: ಮರಗಳ ಗಣತಿ ಕಾರ್ಯ ನಡೆಸುವ ಸಂಬಂಧ ನ್ಯಾಯಾಲಯ ನೀಡಿದ ಆದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಗಡುವು ಮುಗಿದಿದ್ದರೂ ಮರಗಳ ಗಣತಿ ಕಾರ್ಯ ಆರಂಭಿಸದ ಬಿಬಿಎಂಪಿ ಮತ್ತು ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಈ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.
ಆಗ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮರಗಳ ಗಣತಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಹಲವು ತಪ್ಪುಗಳಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಹಾಗೂ ಬೀದಿಗಳಲ್ಲಿನ ಮರಗಳನ್ನು ಮಾತ್ರ ಎಣಿಕೆ ಮಾಡಲಾಗುವುದು. ಖಾಸಗಿ ಜಾಗ ಮತ್ತು ಆಸ್ತಿಗಳಲ್ಲಿನ ಮರಗಳನ್ನು ಗಣತಿಗೆ ಪರಿಗಣಿಸಲಾಗುವುದಿಲ್ಲ ಎಂದು ಒಪ್ಪಂದದಲ್ಲಿ ಹೇಳಲಾಗಿದೆ. ಇದು ಮರಗಳ ಸಂರಕ್ಷಣಾ ಕಾಯ್ದೆ ಹಾಗೂ ಹೈಕೋರ್ಟ್ ನೀಡಿರುವ ಆದೇಶಕ್ಕೆ ತದ್ವಿರುದ್ಧವಾಗಿದೆ. ಮುಖ್ಯವಾಗಿ ಗಡುವು ಮೀರಿ ಮೂರು ತಿಂಗಳಾದರೂ ಈವರೆಗೆ ಮರಗಳ ಗಣತಿ ಆರಂಭವಾಗಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಗಣತಿ ಕುರಿತು ನ್ಯಾಯಾಲಯ ಬಹಳ ಸರಳ ರೀತಿಯಲ್ಲಿ ಇದರ ಬಗ್ಗೆ ಆದೇಶ ಬರೆಸಿದೆ. ಹೀಗಿದ್ದಾಗ, ಬಿಬಿಎಂಪಿ ಮತ್ತು ಮರ ವಿಜ್ಞಾನ ಸಂಸ್ಥೆಯ ಒಪ್ಪಂದದಲ್ಲಿ ಕೇವಲ ಬಿಬಿಎಂಪಿ ವ್ಯಾಪ್ತಿಯ ರಸ್ತೆ ಮತ್ತು ಬೀದಿಗಳಲ್ಲಿನ ಮರಗಳ ಗಣತಿ ನಡೆಸಲಾಗುವುದು ಎಂಬ ಅಂಶ ಬಂದಿದ್ದಾದರೂ ಹೇಗೆ? ಬಿಬಿಎಂಪಿ ಆಯು ಕ್ತರು ಮತ್ತು ಮರ ವಿಜ್ಞಾನ ಸಂಸ್ಥೆಯ ಪರ ಸಹಿ ಹಾಕಿರುವ ಅರಣ್ಯ ಸಂರಕ್ಷಣಾಧಿಕಾರಿಗೆ ಕೋರ್ಟ್ ಆದೇಶ, ಕಾಯ್ದೆ ಏನಿದೆ ಎಂದು ತಿಳಿದುಕೊಳ್ಳದೆ ಸಹಿ ಮಾಡಿದ್ದಾರಾ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ, ಮರಗಳ ಗಣತಿಗೆ ನೀಡಿದ್ದ ಗಡುವು, ಬಿಬಿಎಂಪಿ ಹಾಕಿಕೊಂಡಿದ್ದ ಕಾಲಮಿತಿ ಮೀರಿದೆ. ಆದರೆ, ಗಣತಿ ಆರಂಭವಾಗಿಲ್ಲ. ಈ ನಡುವೆ, ಕಾಯ್ದೆ ಮತ್ತು ಕೋರ್ಟ್ ಆದೇಶಕ್ಕೆ ತದ್ವಿರುದ್ಧ ವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಎಲ್ಲ ವಿಚಾರಗಳಲ್ಲಿ ಎಲ್ಲೆಲ್ಲಿ ತಪ್ಪು ಆಗಿದೆ, ಹೇಗೆ ಆಗಿದೆ, ಅದಕ್ಕೆ ಕಾರಣವೇನು, ತಪ್ಪಿತಸ್ಥರ ವಿರುದ್ಧ ಏನು ಕ್ರಮ, ಮುಂದಿನ ತೀರ್ಮಾನ ಏನು ಎಂಬ ಬಗ್ಗೆ ವಿವರಗಳೊಂದಿಗೆ ಪ್ರಮಾಣ ಪತ್ರ ಸಲ್ಲಿಸುವಂತೆ ಬಿಬಿಎಂಪಿ ಹಾಗೂ ಮರ ವಿಜ್ಞಾನ ಸಂಸ್ಥೆಗೆ ಪೀಠ ನಿರ್ದೇಶನ ನೀಡಿತು.
ಅಲ್ಲದೆ ಈ ವಿಚಾರದಲ್ಲಿ ಸರ್ಕಾರ ಏನನ್ನು ಗಮನಿಸಿದೆ, ಮುಂದಿನ ತೀರ್ಮಾನವೇನು? ಬಿಬಿಎಂಪಿ ಮತ್ತು ಮರ ವಿಜ್ಞಾನ ಸಂಸ್ಥೆ ನಡುವಿನ ಒಪ್ಪಂದ ಮಾರ್ಪಾಡು ಸೇರಿದಂತೆ ವಿವರಣೆ ನೀಡುವಂತೆ ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಫೆ.11ಕ್ಕೆ ಮುಂದೂಡಿತು. ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ಗಣತಿಗೆ ಸಂಬಂಧಿಸಿದಂತೆ 2019ರ ಆ.20ರಂದು ಹೈಕೋರ್ಟ್ ವಿವರವಾದ ಆದೇಶ ಮಾಡಿತ್ತು. ಗಣತಿ ಕಾರ್ಯ ಆರಂಭಿಸುವುದಾಗಿ ಪಾಲಿಕೆ ಹೈಕೋರ್ಟ್‌ಗೆ ಮುಚ್ಚಳಿಕೆ ಸಲ್ಲಿಸಿತ್ತು.