Advertisement

ಕುಸ್ತಿ ಅಖಾಡದಲ್ಲಿ ಬಿರುಗಾಳಿ ಎಬ್ಬಿಸಿದ ದೌರ್ಜನ್ಯ ಪ್ರಕರಣ

12:07 AM May 05, 2023 | Team Udayavani |

ಅಪ್ರಾಪ್ತಳ ಸಹಿತ ಏಳು ಮಂದಿ ಮಹಿಳಾ ಕುಸ್ತಿಪಟುಗಳ ಮೇಲೆ ಭಾರತೀಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬೃಜ್‌ ಭೂಷಣ್‌ ಶರಣ್‌ ಸಿಂಗ್‌ ಮತ್ತು ಕೆಲವೊಂದು ಕೋಚ್‌ಗಳು ಲೈಂಗಿಕ ದೌರ್ಜನ್ಯ ಎಸಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವಖ್ಯಾತಿಯ ಕುಸ್ತಿಪಟುಗಳ ಸಹಿತ ದೇಶದ ಹಲವಾರು ಕುಸ್ತಿಪಟುಗಳು ದಿಲ್ಲಿಯ ಜಂತರ್‌ಮಂತರ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

Advertisement

ಪ್ರತಿಭಟನೆಯ 11ನೇ ದಿನವಾದ ಬುಧವಾರ ರಾತ್ರಿ ಕಾಂಗ್ರೆಸ್‌ ಸಂಸದರು, ಆಪ್‌ ಶಾಸಕರು ಮತ್ತು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷರು ಪ್ರತಿಭಟನೆ ನಿರತ ಕುಸ್ತಿಪಟುಗಳಿಗೆ ಬೆಂಬಲ ನೀಡಲೆಂದು ಸ್ಥಳಕ್ಕಾಗಮಿಸಿದ ವೇಳೆ ಸ್ಥಳದಲ್ಲಿ ಪೊಲೀಸರು ಮತ್ತು ಪ್ರತಿಭಟನನಿರತರ ನಡುವೆ ತಳ್ಳಾಟ ನಡೆದಿದ್ದು ಈ ವೇಳೆ ಇಬ್ಬರು ಕುಸ್ತಿಪಟುಗಳಿಗೆ ಗಾಯಗಳಾಗಿವೆ. ಮದ್ಯಪಾನ ಮಾಡಿದ್ದ ಪೊಲೀಸರು ಪ್ರತಿಭಟನನಿರತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದರೆ, ದಿಲ್ಲಿ ಪೊಲೀಸರು ಕೆಲವು ರಾಜಕೀಯ ನಾಯಕರು ಅನುಮತಿ ಪಡೆಯದೆ ಪ್ರತಿಭಟನೆ ಸ್ಥಳಕ್ಕೆ ಹಾಸಿಗೆ, ಮಂಚಗಳೊಂದಿಗೆ ಬಂದಾಗ ಅದಕ್ಕೆ ತಡೆ ಒಡ್ಡಲಾಯಿತು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು ಯಾವುದೇ ದೌರ್ಜನ್ಯ ಎಸಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಘಟನೆಯ ಬಳಿಕ ಇಡೀ ಪ್ರಕರಣ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ. ವಿಪಕ್ಷಗಳ ಕುಮ್ಮಕ್ಕಿನಿಂದಾಗಿಯೇ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬುಧವಾರ ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ರಾಜಕೀಯ ನಾಯಕರು ಪಾಲ್ಗೊಂಡಿದ್ದು ಈ ಪ್ರತಿಭಟನೆಯ ಹಿಂದಿನ ರಾಜಕೀಯ ಷಡ್ಯಂತ್ರವನ್ನು ಬಯಲು ಮಾಡಿದೆ ಎನ್ನುವ ಮೂಲಕ ತನ್ನ ಹಳೇರಾಗವನ್ನು ಪುನರುಚ್ಚರಿಸಿದೆ. ಇದೇ ವೇಳೆ ಬುಧವಾರ ಪೊಲೀಸರು ತಮ್ಮ ಮೇಲೆ ನಡೆಸಿದ ದೌರ್ಜನ್ಯದಿಂದ ತೀರಾ ನೊಂದಿರುವ ಕುಸ್ತಿ ಪಟುಗಳು ಸರಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸದೇ ಇದ್ದಲ್ಲಿ ಈವರೆಗೆ ನಮಗೆ ಲಭಿಸಿರುವ ಎಲ್ಲ ಪದಕ, ಪ್ರಶಸ್ತಿಗಳನ್ನು ಸರಕಾರಕ್ಕೆ ಮರಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬಳಿಕ ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷರ ವಿರುದ್ಧ ನಾಮ್‌ ಕೆ ವಾಸ್ತೆ ಎಂಬಂತೆ ಎಫ್ಐಆರ್‌ ದಾಖಲಿಸಿಕೊಂಡಿದ್ದು ಅವರನ್ನು ತನಿಖೆಗೊಳಪಡಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕುಸ್ತಿ ಸಂಸ್ಥೆಯ ಅಧ್ಯಕ್ಷರು ಬಿಜೆಪಿ ಸಂಸದರಾಗಿರುವುದರಿಂದ ಸರಕಾರ ಕುಸ್ತಿಪಟುಗಳ ಪ್ರತಿಭಟನೆಗೆ ರಾಜಕೀಯ ಬಣ್ಣ ಹಚ್ಚುತ್ತಿದೆ ಎಂಬ ಆರೋಪ ಕುಸ್ತಿ ಪಟುಗಳು ಮತ್ತು ವಿಪಕ್ಷಗಳದ್ದಾಗಿದೆ. ಬೃಜ್‌ ಭೂಷಣ್‌ ಅವರ ವಿರುದ್ಧದ ಆರೋಪವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿದ್ದಲ್ಲಿ ಸತ್ಯಾಂಶ ಬೆಳಕಿಗೆ ಬರುತ್ತಿತ್ತು. ಒಂದು ವೇಳೆ ಕುಸ್ತಿಪಟುಗಳು ಯಾವುದಾದರೂ ಆಮಿಷಕ್ಕೊಳಗಾಗಿ ಅಥವಾ ಹುನ್ನಾರದಿಂದ ಕುಸ್ತಿ ಸಂಸ್ಥೆ ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದರೂ ಆ ಬಗ್ಗೆ ವಿಸ್ತೃತ ತನಿಖೆ ನಡೆಸಿ ಇಡೀ ಷಡ್ಯಂತ್ರವನ್ನು ಬಯಲಿಗೆಳೆಯಬಹುದಿತ್ತು. ಇವೆರಡು ಕಾರ್ಯಕ್ಕೂ ಮುಂದಾಗದೇ ತನಿಖೆಯ ನೆಪದಲ್ಲಿ ಕಾಲಹರಣ ಮಾಡಿ ಪ್ರಕರಣವನ್ನು ಗೋಜಲುಮಯವಾಗಿಸಿದ ಸರಕಾರದ ನಡೆ ಖಂಡನೀಯ. ಪ್ರಕರಣದಲ್ಲಿ ಯಾವುದೇ ಷಡ್ಯಂತ್ರವಿದ್ದರೂ ಅದನ್ನು ಬಯಲಿಗೆಳೆದು ಆರೋಪಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕಾದುದು ತಮ್ಮ ಕರ್ತವ್ಯ ಎಂಬುದನ್ನು ಪೊಲೀಸರು ಮತ್ತು ಸರಕಾರ ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next