ಬೆಂಗಳೂರು: “ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಸಂಹಿತೆ ಕೊರತೆಯಿದ್ದು ಹಿರಿಯ ವೈದ್ಯರು ಕಿರಿಯರಿಗೆ ಈ ಬಗ್ಗೆ ತಿಳಿವಳಿಕೆ ನೀಡುವ ಅಗತ್ಯವಿದೆ,” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಹೋಮಿಯೊಪತಿ ವೈದ್ಯ ಡಾ.ಬಿ.ಟಿ. ರುದ್ರೇಶ್ ಅವರ “ಡಾ.ಬಿ.ಟಿ. ರುದ್ರೇಶ್ ಡೈರಿ’ ಬಿಡುಗಡೆ ಮಾಡಿ ಮಾತನಾಡಿದ ಅವರು, “ಆಸ್ಪತ್ರೆಯಲ್ಲಿ ರೋಗಿ ಸಾವನ್ನಪ್ಪಿದರೆ, ಪೂರ್ತಿ ಹಣ ಪಾವತಿಸುವವರೆಗೂ ಮೃತ ದೇಹ ಕೊಡುವುದಿಲ್ಲ ಎಂದು ಹೇಳುವ ಮಟ್ಟಿಗೆ ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ಸಂಹಿತೆ ಕುಸಿದಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಜನ ಸಾಮಾನ್ಯರಲ್ಲಿ ತಿಳಿವಳಿಕೆ ಕೊರತೆ ಇರುವುದನ್ನೆ ದುರ್ಬಳಕೆ ಮಾಡಿಕೊಳ್ಳುವವರು ವೈದ್ಯ ವೃತ್ತಿಗೆ ನಾಲಾಯಕ್ಕು. ಇಂಥವರು ವೈದ್ಯಕೀಯ ಪದವೀಧರರಷ್ಟೇ ಹೊರತು, ವೈದ್ಯರಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸಂಶೋಧನೆಗಳು, ಅನ್ವೇಷಣೆಗಳು ನಡೆದಿವೆ. ಆದರೆ, ಅವು ರೋಗಿಗಳಿಗೆ ಎಟುಕದೆ ಹೋದರೆ ಏನು ಪ್ರಯೋಜನ. ಬರೀ ಲಾಭ-ನಷ್ಟ ಲೆಕ್ಕಾಚಾರವೇ ವೃತ್ತಿ ಆಗಬಾರದು,” ಎಂದರು.
“ಒಂದೆಡೆ ಎಂಬಿಬಿಎಸ್ ವೈದ್ಯರು ಹಳ್ಳಿಗಳಿಗೆ ಹೋಗುವುದಿಲ್ಲ ಎನ್ನುತ್ತಾರೆ. ಮತ್ತೂಂದೆಡೆ ಇತರೆ ವೈದ್ಯ ಪದ್ಧತಿಗಳನ್ನು ಅನುಸರಿಸುತ್ತಿರುವ ವೈದ್ಯರನ್ನು ನಿಯೋಜಿಸಲಿಕ್ಕೂ ಬಿಡುತ್ತಿಲ್ಲ. ಹಾಗಾದರೆ, ಹಳ್ಳಿಯ ರೋಗಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ವೈದ್ಯರ ಈ ಮನಃಸ್ಥಿತಿ ಬದಲಾಗಬೇಕು. ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು,” ಎಂದು ಕಿವಿಮಾತು ಹೇಳಿದರು.
ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, “ಸಾವನ್ನು ನೇರವಾಗಿ ಎದುರಿಸುವವರು ವೈದ್ಯ ಮಾತ್ರ. ಆದ್ದರಿಂದ ಸಾವಿನ ಜತೆಗೆ ಹೋರಾಡುತ್ತಿರುವ ರೋಗಿಯ ಕಾಯಿಲೆಯನ್ನು ಸವಾಲಾಗಿ ಸ್ವೀಕರಿಸಿ ಗುಣಪಡಿಸುವುದು ನಿಜವಾದ ವೈದ್ಯನ ಕರ್ತವ್ಯ,” ಎಂದು ತಿಳಿಸಿದರು. “ನಮಗೆ ಗೊತ್ತಿಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೂಂದು ಪರ್ಯಾಯ ಇದೆ ಎಂಬುದನ್ನು ತೋರಿಸಿಕೊಟ್ಟವರು ಡಾ.ಬಿ.ಟಿ. ರುದ್ರೇಶ್.
ಸಾವಿನ ಜತೆ ಗಂಭೀರ ಸಂಭಾಷಣೆಯಲ್ಲಿ ತೊಡಗಿರುವ ವೈದ್ಯ ಡಾ.ರುದ್ರೇಶ್. 20 ಲಕ್ಷಕ್ಕೂ ಅಧಿಕ ರೋಗಿಗಳಿಗೆ ಅವರು ಚಿಕಿತ್ಸೆ ನೀಡಿದ್ದಾರೆ. ಆ ಪೈಕಿ 16 ಸಂಗತಿಗಳನ್ನು ಮಾತ್ರ ಅವರ ಪುಸ್ತಕದಲ್ಲಿ ಕಾಣಬಹುದು. ಹಾಗಾಗಿ, ಇವು ಅತ್ಯಂತ ಅಪರೂಪದ ಸಂಗತಿಗಳಾಗಿವೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಮಾಜಿ ಸಚಿವ ಎಂ.ವಿ. ರಾಜಶೇಖರನ್, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.