ಧಾರವಾಡ: ‘ಮರಣದ ಮೃದಂಗ’ದ ರಸ್ತೆ ಎಂದೇ ಕರೆಯಲ್ಪಡುತ್ತಿರುವ ಧಾರವಾಡ ಬೈಪಾಸ್ ನಲ್ಲಿ ರವಿವಾರ ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ.
ರಾಷ್ಟ್ರೀಯ ಹೆದ್ದಾರಿ 4 ರ ಹಳಿಯಾಳ ಸೇತುವೆ ಬಳಿ ಕ್ಯಾರಕೊಪ್ಪದ ಸಮೀಪ ಈ ಅವಘಡ ಸಂಭವಿಸಿದ್ದು, ವೇಗವಾಗಿ ಹೋಗುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೋರ್ವ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ಬೆಳಗಾವಿ ಕಡೆಯಿಂದ ಹೋಗುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದ್ದು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮೃತರೆಲ್ಲರೂ ಅರಸೀಕೆರೆ ಚೆನ್ನರಾಯಪಟ್ಟಣ ಮೂಲದವರು ಎನ್ನಲಾಗಿದೆ.
ಇದನ್ನೂ ಓದಿ:ಗಿಲ್ OUT or NOT OUT? ಟಿವಿ ಅಂಪೈರ್ ವಿವಾದಾತ್ಮಕ ನಿರ್ಧಾರ; ಐಸಿಸಿ ನಿಯಮದಲ್ಲಿ ಏನಿದೆ?
ಮೃತರನ್ನು ಕೆ.ಆರ್.ನಗರದ ಪುಟ್ಟೇಗೌಡ (33 ವ), ಹೊಳೆನರಸಿಪುರದ ದೀಪಕ್ ( 24 ವ) ಹಾಗೂ ಹೊಳೆನರಸಿಪುರದ ಚಂದನಗೌಡ (22 ವ) ಎನ್ನಲಾಗಿದೆ. ಗಾಯಗೊಂಡ ಇನ್ನೊಬ್ಬನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.