ಸಣ್ಣಮಟ್ಟದಲ್ಲಿ ಶುರುಮಾಡಿ ನಂತರ ವಿಸ್ತರಿಸಿಕೊಳ್ಳಬಹುದಾದ ಬಿಝಿನೆಸ್ಗಳಲ್ಲಿ ಫೋಟೋಗ್ರಫಿ ಸೇವೆಯೂ ಒಂದು. ಒಂದು ಎಂಟ್ರಿ ಲೆವೆಲ್ ಡಿಎಸ್‌ಎಲ್‌ಆರ್ ಕ್ಯಾಮೆರಾ, ಮೂರು ನಾಲ್ಕು ವಿವಿಧ ಬಗೆಯ ಲೆನ್ಸ್ ಗಳನ್ನು ಇರಿಸಿಕೊಂಡರೆ, ಫೋಟೋಗ್ರಫಿ ಬಿಝಿನೆಸ್‌ನಲ್ಲಿ ತೊಡಗಿಕೊಳ್ಳಬಹುದು. ಕೆಲಸದಲ್ಲಿ ವಿಶಿಷ್ಟತೆಯನ್ನು ಮೈಗೂಡಿಸಿಕೊಂಡರೆ ಹೆಚ್ಚು ಹೆಚ್ಚು ಆರ್ಡರ್‌ಗಳು ಸಿಗುವುದರಲ್ಲಿ ಅನುಮಾನ ವಿಲ್ಲ.
ಪ್ರಾರಂಭದಲ್ಲಿ ಸಹಾಯಕರ ಅಗತ್ಯವಿಲ್ಲದೆಯೂ ಕಾರ್ಯನಿರ್ವಹಿಸ ಬಹುದು. ಶುರುವಿನಲ್ಲಿ ಸ್ಟುಡಿಯೋ ಬೇಕೆಂದೇನೂ ಇಲ್ಲ. ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಫ್ರಿ ಲ್ಯಾನ್ಸರ್ ಫೋಟೋಗ್ರಾಫರ್‌ಗಳು ನಮ್ಮ ನಡುವೆ ಇದ್ದಾರೆ. ಅಲ್ಲದೆ, ಬೇರೆ ವೃತ್ತಿಗಳಲ್ಲಿ ತೊಡಗಿಕೊಂಡೇ ಬಿಡುವಿನ ವೇಳೆಯಲ್ಲಿ ಫೋಟೊಗ್ರಫಿ ಮಾಡುತ್ತಾ ಹಣ ಮಾಡುವವರೂ ಇದ್ದಾರೆ. ಈ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದ್ದಂತೆಯೇ ಹೆಚ್ಚಿನ ಬೆಲೆಯ ಉಪಕರಣಗಳನ್ನು ಖರೀದಿಸಿ, ವಿಡಿಯೊ ಶೂಟ್ ನಂಥ ಪ್ರಾಜೆಕ್ಟ್ ಗಳನ್ನೂ ಪಡೆದುಕೊಳ್ಳಬಹುದು.
ಫೋಟೊ ಕ್ಲಿಕ್ಕಿಸಿದ ನಂತರ, ಅದರ ಸಾಫ್ಟ್ ಕಾಪಿಯನ್ನು ಗಿರಾಕಿಗಳಿಗೆ ಒದಗಿಸುವುದರ ಜೊತೆಗೆ ಪ್ರಿಂಟೆಡ್ ಆಲ್ಬಂ ಅನ್ನೂ ನೀಡಿ, ಗಿರಾಕಿಗಳ ವಿಶ್ವಾಸ ಸಂಪಾದಿಸಬಹುದಾಗಿದೆ. ಇಂದಿನ ಡಿಜಿಟಲ್ ಜಮಾನದಲ್ಲಿಯೂ ಫೋಟೊ ಆಲ್ಬಂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಫೋಟೋ ಆಲ್ಬಂ ರೂಪಿಸುವಲ್ಲಿ ಆನ್‌ಲೈನ್ ಸೇವೆಗಳನ್ನು ಬಳಸಿಕೊಳ್ಳಬಹುದು. ಬಜೆಟ್‌ಗೆ ತಕ್ಕಂತೆ ಆಲ್ಬಂ ಪ್ಲ್ಯಾನ್ ಆರಿಸಿ, ಆನ್‌ಲೈನಿನಲ್ಲಿಯೇ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಪ್ರತಿ
ಪುಟ ಯಾವ ರೀತಿ ಬರಬೇಕು ಎನ್ನುವುದನ್ನು ವಿನ್ಯಾಸ ಮಾಡಬಹುದಾಗಿದೆ. 15 ದಿನಗಳ ಒಳಗೆ ಅಲ್ಬಂ ಡೆಲಿವರಿ ಆಗುತ್ತದೆ.