Advertisement

Udupi ದೀಪಾವಳಿಗೆ ಮೊದಲೇ ಸ್ಥಳೀಯ ಉದ್ಯಮಿಗಳಿಗೆ ಬಂಪರ್‌ ಉಡುಗೊರೆ

12:40 AM Nov 02, 2023 | Team Udayavani |

ಬ್ರಹ್ಮಾವರ: ಉಡುಪಿ ಜಿಲ್ಲೆಗೆ ದೀಪಾವಳಿ ಹಬ್ಬಕ್ಕಿಂತ ಮೊದಲೇ ಬಂಪರ್‌ ಉಡುಗೊರೆ ದೊರೆತಿದೆ! ಅದೇನೆಂದರೆ, ಜಿಲ್ಲೆಯ ಹಲವು ಉತ್ಪನ್ನಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಅತಿಥಿಗಳಿಗೆ, ಸಚಿವರಿಗೆ ಮತ್ತಿತರ ಗಣ್ಯರಿಗೆ ಕೊಡುವ ದೀಪಾವಳಿ ಉಡುಗೊರೆ ಇತ್ಯಾದಿಗೆ ರಾಜ್ಯದಲ್ಲೇ ಪ್ರಥಮವಾಗಿ ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಸ್ವಸಹಾಯ ಸಂಘಗಳ ಒಕ್ಕೂಟದ ಉತ್ಪನ್ನಗಳು ಹಾಗೂ ತೆಂಗುಬೆಳೆಗಾರರ ಸಂಸ್ಥೆಯೊಂದರ ಉತ್ಪನ್ನ ಆಯ್ಕೆಯಾಗಿದೆ.

Advertisement

ಕೇಂದ್ರ ಸರಕಾರದ ಹಣಕಾಸು ಸಚಿವಾಲಯದಿಂದ ಸಾಂಪ್ರದಾಯಿಕವಾಗಿ ದೇಶ, ವಿದೇಶದ ಗಣ್ಯರಿಗೆ ನೀಡುವ ದೀಪಾವಳಿ ಉಡುಗೊರೆಗೆ ಉಡುಪಿ ಕಲ್ಪರಸ ಉತ್ಪಾದಕ ಸಂಸ್ಥೆ (ಉಕಾಸ) ತೆಂಗಿನ ಹೂವಿನಿಂದ ತೆಗೆದ ರಸ (ಕಲ್ಪ ರಸ) ವನ್ನು ಬಳಸಿ ರೂಪಿಸಿದ ಬೆಲ್ಲ ಆಯ್ಕೆಯಾಗಿದೆ. 1 ಕೆಜಿ ತೂಕದ ಸುಮಾರು 500 ಬಾಟಲಿಗಳನ್ನು ದಿಲ್ಲಿಗೆ ಪೂರೈಸಲಾಗುತ್ತಿದೆ. ಭಾರತೀಯ ಕಿಸಾನ್‌ ಸಂಘದ ಮಾರ್ಗದರ್ಶನದಲ್ಲಿ ಉಕಾಸ ಸಂಸ್ಥೆ ಸ್ಥಾಪನೆಯಾಗಿದ್ದು, ಜಿಲ್ಲೆಯಲ್ಲಿ 70ಕ್ಕೂ ಹೆಚ್ಚು ತೆಂಗು ಉತ್ಪಾದಕರ ಸೌಹಾರ್ದ ಸಂಘಗಳು ಇದರಡಿ ಕಾರ್ಯ ನಿರತವಾಗಿವೆ. ಹಾಗೆಯೇ ಸಚಿವರು, ಅಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ನೀಡಲಾಗುವ ಉಡುಗೊರೆಗೆ ಜಿಲ್ಲೆಯ ಸಂಜೀವಿನಿ ಒಕ್ಕೂಟದ ಉತ್ಪನ್ನಗಳು ಆಯ್ಕೆಯಾಗಿವೆ. ಇವೆರಡೂ ಉಡುಪಿ ಜಿಲ್ಲೆಗೆ ಸಂದಿರುವ ದೀಪಾವಳಿ ಉಡುಗೊರೆಗಳು.

ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭವಾದ ಉಡುಪಿ ಸಂಜೀವಿನಿ ಸೂಪರ್‌ ಮಾರ್ಕೆಟ್‌ನ ಉತ್ಪನ್ನಗಳಿಗೆ ಮಾನ್ಯತೆ ಸಿಕ್ಕಿದೆ. ಈ ಮಾರುಕಟ್ಟೆಯಲ್ಲಿ 65 ಸ್ವ ಉದ್ಯೋಗಿ ಮಹಿಳೆಯರು ತಯಾರಿಸಿದ ವೈವಿಧ್ಯಮಯ 310 ಉತ್ಪನ್ನಗಳಿವೆ. ಅಕ್ರೂಟ್‌, ಚಿಕ್ಕಿ, ಉಪ್ಪಿನಕಾಯಿ, ಹೆಬ್ರಿ ಜೇನು, ಮಸಾಲಾ ಗೋಡಂಬಿ, ಬೆಲ್ಲ, ಗೃಹ ತಯಾರಿಯ ಚಾಕೋಲೇಟ್‌ಗಳಲ್ಲದೇ, ಕೊರಗ ಸಮುದಾಯದವರು ಹೆಣೆದ ಬುಟ್ಟಿ, ಸಿಬ್ಲಿದಲ್ಲಿ ಜೋಡಿಸಿ ಪ್ಯಾಕೆಟ್‌ ತಯಾರಿಸಲಾಗಿದೆ. ಯಾವುದೇ ಪ್ಲಾಸ್ಟಿಕ್‌, ರಟ್ಟು ಇತ್ಯಾದಿ ಬಳಸದೇ ರೂಪಿಸಿದ ಬುಟ್ಟಿಗಳೂ ಸರಕಾರವನ್ನು ಆಕರ್ಷಿಸಿದೆ. ಸಮೃದ್ಧಿ ಸಂಜೀವಿನಿ ಸಂಘದ ಸದಸ್ಯರ ಕ್ರಿಯಾಶೀಲತೆಗೆ ಅವಕಾಶ ದೊರೆತಿದೆ.

ಜಿಲ್ಲೆಯ 8 ಸಾವಿರಕ್ಕೂ ಹೆಚ್ಚು ಸಂಜೀವಿನಿ ಸಂಘಗಳ 94 ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರು ರೂಪಿಸಿದ ಸ್ಥಳೀಯ ಉತ್ಪನ್ನಗಳ ಮಳಿಗೆಯೇ ಸಂಜೀವಿನಿ ಸೂಪರ್‌ ಮಾರ್ಕೆಟ್‌ ಉಡುಪಿ ತಾಲೂಕು ಪಂಚಾಯತ್‌ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲಂಕಾರಿಕ/ಒಳಾಂಗಣ ಗಿಡಗಳು, ಗೇರು ಬೀಜ, ಗೃಹ ತಯಾರಿ ತಿಂಡಿ ತಿನಿಸುಗಳು, ಬಾಣಂತಿ ಮದ್ದು ಶುಂಠಿ ಚೈ ನಿಂದ ಹಿಡಿದು ವಿವಿಧ ಆಹಾರ ಉತ್ಪನ್ನಗಳು, ಧಾನ್ಯಗಳು, ಧಾನ್ಯಗಳ ಉತ್ಪನ್ನಗಳವರೆಗೂ ಎಲ್ಲವೂ ಲಭ್ಯ. ಹಾಗೆಯೇ ಆಕರ್ಷಕ ಕಲಾಕೃತಿಗಳು, ಉಡುಗೊರೆ ಉತ್ಪನ್ನಗಳೂ ಲಭ್ಯವಿದೆ. ಬಹಳ ಮುಖ್ಯವಾಗಿ ಉಡುಪಿಯ ವಿಶೇಷತೆಯೆಂದರೆ ಯಕ್ಷಗಾನ ಸ್ಮರಣಿಕೆ, ಜಿಐ ಟ್ಯಾಗ್‌ ಹೊಂದಿರುವ ಉಡುಪಿ ಕೈಮಗ್ಗದ ಸೀರೆ, ಉಡುಪಿ ಸಾರಿನ ಹಾಗೂ ಸಾಂಬಾರ್‌ ಪುಡಿಗಳು ಸಿಗುತ್ತಿವೆ.

ದೇಶದ ವಿವಿಧ ಭಾಗಗಳಿಂದ ಸಂಗ್ರಹಿಸುವ ವಿಶಿಷ್ಟ ಉತ್ಪನ್ನಗಳಲ್ಲಿ ನಮ್ಮ ಜಿಲ್ಲೆಯ ಉತ್ಪನ್ನಗಳು ಆಯ್ಕೆಯಾಗಿರುವುದು ಸಂತಸದ ವಿಚಾರ. ಇದು ಉಡುಪಿಗೂ ಹೆಮ್ಮೆಯ ಸಂಗತಿ. ಜತೆಗೆ ಸಂಜೀವಿನಿ ಉತ್ಪನ್ನ ತಯಾರಕರಿಗೆ ಹಾಗೂ ತೆಂಗು ಬೆಳೆಗಾರರಿಗೆ ಸಂದಿರುವ ಅವಕಾಶ.
– ಪ್ರಸನ್ನ ಎಚ್‌., ಸಿಇಒ, ಉಡುಪಿ ಜಿ.ಪಂ.

Advertisement

ನಮ್ಮ ಉತ್ಪನ್ನಗಳನ್ನು ರಾಜ್ಯಮಟ್ಟದಲ್ಲಿ ಗುರುತಿಸಿರುವುದು ಸಂತಸ ತಂದಿದೆ. ಸ್ವ ಉದ್ಯೋಗ, ಸ್ವಾವಲಂಬನೆ ನಿಟ್ಟಿನಲ್ಲಿ ನಮ್ಮೆಲ್ಲಾ ಸದಸ್ಯರ ಪರಿಶ್ರಮಕ್ಕೆ ಸಂದ ಗೌರವವಿದು.
– ಪ್ರಸನ್ನಾ ಪ್ರಸಾದ್‌ ಭಟ್‌ ಕನ್ನಾರು, ಅಧ್ಯಕ್ಷೆ, ಸಮೃದ್ಧಿ ಸಂಜೀವಿನಿ ಸಂಘ

ಕೇಂದ್ರ ಸರಕಾರವು ಗ್ರಾಮೀಣ ಉತ್ಪನ್ನಗಳನ್ನು ಗುರುತಿಸಿರುವುದಕ್ಕೆ ಸಂತಸವಾಗಿದೆ. ಇಂಥ ಕ್ರಮಗಳಿಂದ ತೆಂಗು ಬೆಳೆಗಾರರು ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗಲಿದೆ.
– ಸತ್ಯನಾರಾಯಣ ಉಡುಪ ಜಪ್ತಿ, ಉಕಾಸ ಅಧ್ಯಕ್ಷ

– ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next