ಎಚ್.ಡಿ.ಕೋಟೆ: ಮಳೆಯ ನಡುವೆಯೂ ಮಾರುಕಟ್ಟೆಗೆ ಹತ್ತಿ ಸಾಗಣೆಯಾಗುತ್ತಿದ್ದು, ಈ ಬಾರಿ ಹತ್ತಿ ಬೆಳೆಗಾರ ರೈತರಿಗೆ ಹತ್ತಿ ಬೆಲೆಯಲ್ಲಿ ಬಂಪರ್ ಬೆಲೆ ದೊರೆಯುತ್ತಿದೆ. ತಾಲೂಕಿನ ರೈತರ ವಾಣಿಜ್ಯ ಬೆಳೆ ಹತ್ತಿ, ಹತ್ತಿ ಬಿತ್ತನೆ ಬೀಜ ಖರೀದಿ ಸಂದರ್ಭದಲ್ಲಿ ಎಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಲ್ಲಿ ಗೋಲಿಬಾರ್ ನಡೆದಿರುವ ನಿದರ್ಶನವಿದೆ.
ಇಂದಿಗೂ ತಾಲೂಕಿನ ಬಹುಸಂಖ್ಯೆ ರೈತರು ಹತ್ತಿ ಬೆಳೆಯನ್ನೆ ಅವಲಂಭಿಸಿರುವುದು ವಿಶೇಷ. ಮುಂಗಾರು ಮಳೆ ಈ ಬಾರಿ ಸುಮಾರು 2 ತಿಂಗಳ ಮುಂಚಿತವಾಗಿ ಆರಂಭಗೊಂಡಿದ್ದು, ರೈತರು ಸಾಲಸೋಲ ಮಾಡಿ ಹತ್ತಿ ಬೇಸಾಯಕ್ಕೆ ಹೂಡಿಕೆ ಮಾಡಿದ್ದರು. ರೈತರ ನಿರೀಕ್ಷೆಯಂತೆ ಆರಂಭದ ದಿನಗಳಲ್ಲಿ ನಿರೀಕ್ಷೆ ಪ್ರಮಾಣದ ಮಳೆಯಾಯಿತು. ಹತ್ತಿ ಗಿಡ ಕೂಡ ಹುಲುಸಾಗಿ ಬೆಳೆಯುತ್ತಿದ್ದಂತೆಯೇ ಮಳೆ ಮಾಯವಾಗಿ ರೈತರು ಕಂಗಾಲಾಗುವಂತೆ ಮಾಡಿತ್ತು.
ತಾಲೂಕಾದ್ಯಂತ ನಿರಂತರ ಮಳೆ: ಬಳಿಕ ಮಳೆ ಕೈಕೊಟ್ಟಿತ್ತು ಹತ್ತಿ ಬೆಳೆ ಕೂಡ ನೀರಿಲ್ಲದ ಒಣಗಲಾರಂಭಿಸಿದೆ ಅಂದುಕೊಳ್ಳುತ್ತಿ ದ್ದಂತೆಯೇ ಅಂತಿಕ ಕ್ಷಣದಲ್ಲಿ ಮಳೆಯ ಆಗಮನವಾಗಿ ಕಳೆದ ಸುಮಾರು 15 ದಿನಗಳ ಹಿಂದಿನಿಂದ ತಾಲೂಕಾದ್ಯಂತ ನಿರಂತರ ಮಳೆ ಆರಂಭ ಗೊಳ್ಳುತ್ತಿದ್ದಂತೆಯೇ ನೀರಿಲ್ಲದೆ ನೆಲಕಚ್ಚುವ ಹಂತದಲ್ಲಿದ್ದ ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳು ಚೇತರಿಸಿಕೊಂಡು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು.
8 ಸಾವಿರ ಬಂಪರ್ ಬೆಲೆ: ಇನ್ನು ಕಳೆದ ಸಾಲಿನಲ್ಲಿ ಪ್ರತಿ ಕ್ವಿಂಟಲ್ ಹತ್ತಿಗೆ 5ರಿಂದ 6ಸಾವಿರ ಬೆಲೆ ಇತ್ತು. ಅದರಲ್ಲೂ ವಿಶೇಷವಾಗಿ ಆರ್‌ಸಿಎಚ್ ಮತ್ತು ಡಿಸಿಎಚ್ ತಳಿಗೆಳಿಗೆ ಹತ್ತಿಗೆ ಬೆಲೆಯಲ್ಲೂ ವೆತ್ಯಯ ಇತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಆರ್‌ಸಿಎಸ್ ಆಗಲಿ ಡಿಸಿಎಸ್ ಹತ್ತಿ ತಳಿಯಾಗಲಿ 8 ಸಾವಿರ ಬಂಪರ್ ಬೆಲೆ ಇದೆ. ಮಳೆಯ ನಡುವೆಯೂ ನೀರಿನ ಅಂಶ ಹತ್ತಿಗೆ ಸೇರಿದಂತೆ ರೈತರು ಹತ್ತಿ ಬಿಡಿಸಿ ತಂದು ಮನೆಯಲ್ಲಿಯೇ ತೇವಾಂಶ ಇಲ್ಲದಂತೆ ಒಣಗಿಸಿ ಮಾರುಕಟ್ಟೆಗೆ ಸ್ಥಳಾಂತರಿಸಿದರೆ ಪ್ರತಿ ಕ್ವಿಂಟಲ್ ಹತ್ತಿಗೆ 8 ಸಾವಿರ ಬೆಲೆ ಇದೆ. ತೇವಾಂಶದಿಂದ ಕೂಡಿದ ಹತ್ತಿಗೆ ಕೊಂಚ ಬೆಲೆಯಲ್ಲಿ ಇಳಿಕೆ ಕೂಡ ಇದೆ.
ಮಧ್ಯವರ್ತಿಗಳ ಹಾವಳಿ: ತಾಲೂಕಿನಲ್ಲಿ ಬೆಳೆದ ಹತ್ತಿಗೆ ನೆರೆಯ ತಮಿಳುನಾಡಿನ ತಿರುಪೂರಿನಲ್ಲಿ ವಿಶೇಷವಾದ ಬೇಡಿಕೆ ಇದೆ. ತಾಲೂಕಿನ ರೈತರ ವಾಣಿಜ್ಯ ಬೆಳೆ ಹತ್ತಿಯಾದರೂ ತಾಲೂಕಿನಲ್ಲಿ ಇಲ್ಲಿಯ ತನಕ ಆಯ್ಕೆಯಾದ ಯಾವೊಬ್ಬ ರಾಜಕಾರಣಿಯೂ ರೈತರಿಗಾಗಿ ಹತ್ತಿ ಗಿರಣಿ ಅಥವಾ ಹತ್ತಿ ಮಾರುಕಟ್ಟೆ ಆರಂಭಿಸಿಲ್ಲ. ಇದರಿಂದ ಹತ್ತಿ ಮಾರುಕಟ್ಟೆ ಇಲ್ಲದೆ ರೈತರು ಬೆಳೆದ ಹತ್ತಿ ಮಧ್ಯವರ್ತಿಗಳ ಪಾಲಾಗುತ್ತಿದೆ. ಹತ್ತಿ ಇಳುವರಿ ಆರಂಭಗೊಳ್ಳುತ್ತಿದ್ದಂತೆಯೇ ನಾಯಿ ಕೊಡೆಗಳಂತೆ ಮಧ್ಯವರ್ತಿಗಳ ಹತ್ತಿ ಖರೀದಿ ತಾತ್ಕಾಲಿಕ ಅಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಮಧ್ಯವರ್ತಿಗಳು ಕೇಳಿದಷ್ಟು ಬೆಲೆಗೆ ರೈತರು ಹತ್ತಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ.
ತಾಲೂಕಿನಲ್ಲಿ ಹತ್ತಿ ಗಿರಣಿ ಆರಂಭಿಸಿ
ಹಲವು ರೈತರ ಹತ್ತಿ ಸಾಲವಾಗಿ ಖರೀದಿಸಿದ ಅದೆಷ್ಟೊ ಮಧ್ಯವರ್ತಿಗಳು ಹತ್ತಿ ಖರೀದಿಸಿದ ಹಣವನ್ನು ರೈತರಿಗೆ ನೀಡದೆ ರಾತ್ರೋರಾತ್ರಿ ಜಾಗ ಖಾಲಿ ಮಾಡಿರುವ ನಿದರ್ಶನಗಳಿವೆ. ಇನ್ನಾದರೂ ತಾಲೂಕಿನ ಚುನಾಯಿತಿ ಶಾಸಕರು ತಾಲೂಕಿನ ರೈತರ ಸಮಸ್ಯೆ ಅರಿತು ತಾಲೂಕಿನಲ್ಲಿ ಹತ್ತಿ ಗಿರಣಿಯೊಂದನ್ನು ಆರಂಭಿಸುವುದರಿಂದ ರೈತರ ಹತ್ತಿ ಖರೀದಿಗೆ ಅವಕಾಶ ಆಗುವುದರ ಜೊತೆಯಲ್ಲಿ ತಾಲೂಕಿನ ಹಲವು ಮಂದಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗವೂ ಲಭಿಸಿದಂತಾಗುತ್ತದೆ ಅಲ್ಲವೆ.
ತಾಲೂಕಿನ ಹತ್ತಿ ಬೆಳೆಗಾರರು ಬೆಳೆದ ಹತ್ತಿಯನ್ನು ತಾಲೂಕಿನ ಎಪಿಎಂಸಿಯಲ್ಲಿ ಖರೀದಿಸುವಂತಾಗ ಬೇಕು. ಹತ್ತಿ ಖರೀದಿಸುವ ಮಾರುಕಟ್ಟೆ ಇಲ್ಲದೆ ಮಧ್ಯವರ್ತಿಗಳ ಕಾಟ ಹೆಚ್ಚಾಗಿ ಹತ್ತಿ ಇಳುವರಿ ಸಂದರ್ಭದಲ್ಲಿ ಅಲ್ಲಲ್ಲಿ ಹತ್ತಿ ಖರೀದಿಸುವ ತಾತ್ಕಾಲಿಕ ಅಂಗಡಿಗಳ ತಲೆ ಎತ್ತುತ್ತಿವೆ. ಇದರಿಂದ ರೈತರಿಗೂ ಅನ್ಯಾಯವಾಗುತ್ತಿದೆ, ಬಹು ವರ್ಷ ಗಳಿಂದ ಹತ್ತಿ ಗಿರಣಿ ಆರಂಭಿಸಲು ಒತ್ತಾಯಿಸಿದರೂ ಉಪಯೋಗ ವಾಗಿಲ್ಲ. ಕೂಡಲೆ ತಾಲೂಕಿನ ಶಾಸಕರು ಸರ್ಕಾರದ ಗಮನ ಸೆಳೆದು ತಾಲೂಕಿನಲ್ಲೇ ಹತ್ತಿ ಗಿರಣಿ ಆರಂಭಿಸುವುದರಿಂದ ರೈತರು ನಿರುದ್ಯೋಗಿ ಗಳಿಗೆ ಅನುಕೂಲವಾಗುತ್ತದೆ.
● ಮಲಾರ ಪುಟ್ಟಯ್ಯ,
ಪ್ರಗತಿಪರ ರೈತ