Advertisement

ಸರ್ವಿಸ್‌ ರಸ್ತೆ ಹೆದ್ದಾರಿ ಸೇರುವಲ್ಲಿ ಮುರಿದ ಚರಂಡಿ ಸ್ಲ್ಯಾಬ್

10:30 AM Mar 23, 2022 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಮುಂದುವರಿದಂತೆ ಅದರ ಅವ್ಯವಸ್ಥೆಯೂ ಮುಂದು ವರಿಯುತ್ತಿದ್ದು, ಬಂಟ್ವಾಳ ತಾಲೂಕು ಕೇಂದ್ರವಾದ ಬಿ.ಸಿ.ರೋಡ್‌ ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣ ಮುಂಭಾಗದಲ್ಲಿ ಸರ್ವಿಸ್‌ ರಸ್ತೆ ಹೆದ್ದಾರಿಯನ್ನು ಸೇರುವಲ್ಲಿ ಚರಂಡಿ ಸ್ಲ್ಯಾಬ್ ಗಳು ಮುರಿದು ಅಪಾಯವನ್ನು ಆಹ್ವಾನಿಸುತ್ತಿದ್ದೆ.

Advertisement

ಬಿ.ಸಿ.ರೋಡ್‌ ನಗರದಿಂದ ಮಂಗಳೂರು ಕಡೆಗೆ ಸಾಗುವ ವಾಹನಗಳು ಇದೇ ಸ್ಥಳದಲ್ಲಿ ಹೆದ್ದಾರಿಯನ್ನು ಸೇರುತ್ತಿದ್ದು, ಈ ಭಾಗದಲ್ಲಿ ಅವ್ಯವಸ್ಥೆ ಇದೆ. ಚರಂಡಿಯ ಸ್ಲ್ಯಾಬ್ ಗಳನ್ನು ಸರಿಯಾಗಿ ಜೋಡಿಸದ ಪರಿಣಾಮ ಇಂತಹ ಸ್ಥಿತಿ ಉಂಟಾಗಿದೆ.

ಇಲ್ಲಿನ ಅವ್ಯವಸ್ಥೆಯ ಪರಿಣಾಮದಿಂದ ಈಗಾಗಲೇ ಅನೇಕ ವಾಹನಗಳು ಸ್ಲ್ಯಾಬ್ ಮುರಿದ ಹೊಂಡಕ್ಕೆ ಬಿದ್ದು ತೊಂದರೆ ಅನುಭವಿಸಿದೆ. ಆದರೆ ಕಳೆದ ಕೆಲವು ಸಮಯಗಳಿಂದ ಅಲ್ಲಿನ 2-3 ಕಡೆಗಳಲ್ಲಿ ಸ್ಲ್ಯಾಬ್ ಸಂಪೂರ್ಣ ಮುರಿದು ದೊಡ್ಡ ಗಾತ್ರದ ಹೊಂಡಗಳು ಸೃಷ್ಟಿಯಾಗಿದೆ. ಹೀಗಾಗಿ ವಾಹನದವರು ಸ್ವಲ್ಪ ಎಚ್ಚರ ತಪ್ಪಿದರೂ ಹೊಂಡಕ್ಕೆ ಬೀಳುವುದು ಖಚಿತ ಎಂಬ ಪರಿಸ್ಥಿತಿ ಇದೆ.

ಅಪಾಯದ ಸಾಧ್ಯತೆ

ಜತೆಗೆ ಇದು ಪಾದಚಾರಿಗಳಿಗೂ ಅಪಾಯಕಾರಿಯಾಗಿದ್ದು, ಎಚ್ಚರ ತಪ್ಪಿ ಬಿದ್ದರೆ ಕಾಲು ಮುರಿದುಕೊಳ್ಳಬೇಕಾದ ಸ್ಥಿತಿ ಇದೆ. ರಾತ್ರಿ ವೇಳೆ ಅಲ್ಲಿ ಹೊಂಡವಿರುವುದು ಗಮನಕ್ಕೆ ಬರುವ ಸಾಧ್ಯತೆ ಕಡಿಮೆ ಇದ್ದು, ಹೀಗಾಗಿ ಅಪಾಯದ ಸಾಧ್ಯತೆ ಹೆಚ್ಚು. ಪ್ರಾರಂಭದಿಂದಲೂ ಇಂತಹ ಸಮಸ್ಯೆ ಇದ್ದು, ಅದನ್ನು ಸರಿಪಡಿಸದ ಕಾರಣ ಸ್ಲ್ಯಾಬ್ ಮುರಿದು ದೊಡ್ಡ ಹೊಂಡ ಸೃಷ್ಟಿಯಾಗಿದೆ.

Advertisement

ಹೊಂಡಕ್ಕೆ ಬ್ಯಾರಿಕೇಡ್‌-ಹಲಗೆ

ಚರಂಡಿಯ ಸ್ಲ್ಯಾಬ್ ಮುರಿದು ಹೊಂಡ ಸೃಷ್ಟಿಯಾಗಿರುವ ಪರಿಣಾಮ ಅದಕ್ಕೆ ಯಾವುದೇ ವಾಹನಗಳು ಅಥವಾ ನಡೆದುಕೊಂಡು ಹೋಗುವ ಪಾದಚಾರಿಗಳು ಬೀಳದಂತೆ ಎಚ್ಚರಿಕೆ ನೀಡುವ ದೃಷ್ಟಿಯಿಂದ ಒಂದು ಹೊಂಡಕ್ಕೆ ಹಳೆಯದಾದ ಬ್ಯಾರಿಕೇಡನ್ನು ಹೊಂಡದೊಳಗೆ ಇಳಿಸಲಾಗಿದೆ. ಮತ್ತೂಂದಕ್ಕೆ ಹಲಗೆಯನ್ನು ಇರಿಸಿ ಅಪಾಯವನ್ನು ತಪ್ಪಿಸುವ ಪ್ರಯತ್ನ ನಡೆಸಲಾಗಿದೆ.

ಈ ಭಾಗದಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಜತೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣನಿಂದ ಬಸ್‌ಗಳು ಹೆದ್ದಾರಿಯನ್ನು ಸಂಧಿಸುವ ಸ್ಥಳವೂ ಇದೇ ಆಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಪುರಸಭಾ ಆಡಳಿತ ಮಂಡಳಿ ಈ ಕುರಿತು ಗಮನಹರಿಸಿ ಸಮಸ್ಯೆಯ ಗಂಭೀರತೆಯನ್ನು ಅರಿತು ದುರಸ್ತಿ ಕಾರ್ಯ ನಡೆಸುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ನಾಗರಿಕರ ತಾಳ್ಮೆ ಪರೀಕ್ಷೆ ಬೇಡ

ಈ ಪ್ರದೇಶದಲ್ಲಿ ಒಂದೆರಡು ಕಡೆ ಚರಂಡಿಯ ಸ್ಲಾಬ್‌ ಮುರಿದು ಹೊಂಡಗಳು ಸೃಷ್ಟಿಯಾಗಿದ್ದು, ಅದಕ್ಕೆ ಯಾರೂ ಬೀಳದಂತೆ ಅಡ್ಡಲಾಗಿ ಇಟ್ಟಿರುವ ಬ್ಯಾರಿಕೇಡ್‌ ಹಾಗೂ ಹಲಗೆಯ ಮೇಲೆ ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಬರವಣಿಗೆಯ ಮೂಲಕ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ರಟ್ಟಿನ ಮೂಲಕ ‘ ನಾಗರಿಕರ ತಾಳ್ಮೆ ಪರೀಕ್ಷೆ ಬೇಡ-ಅಧಿಕಾರಿಗಳೇ, ರಾಜಕಾರಣಿಗಳೇ ‘ ಎಂದು ಬರೆದು ಹಾಕಿದ್ದಾರೆ.

ಸಮಸ್ಯೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ

ಬೇರೆ ಬೇರೆ ಸಮಸ್ಯೆಗಳ ಕುರಿತು ಹೆದ್ದಾರಿಯವರಿಗೆ ಪತ್ರ ಬರೆದರೂ, ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸ್ಲ್ಯಾಬ್ ಮುರಿದಿರುವ ಸಮಸ್ಯೆಯನ್ನು ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಪುರಸಭೆಯಿಂದ ಸಾಧ್ಯವಾಗುವುದಾದರೆ ದುರಸ್ತಿ ಪಡಿಸಲಾಗುವುದು. -ಮೊಹಮ್ಮದ್‌ ಶರೀಫ್‌, ಅಧ್ಯಕ್ಷರು, ಬಂಟ್ವಾಳ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next