Advertisement
ಆರ್.ಅಶೋಕ್: ಕ್ಷೇತ್ರ ಪುನರ್‌ವಿಂಗಡಣೆಗೆ ಮೊದಲು ಉತ್ತರಹಳ್ಳಿ ಕ್ಷೇತ್ರದಿಂದ ಎರಡು ಬಾರಿ ಹಾಗೂ ನಂತರ ಪದ್ಮನಾಭನಗರ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಆರ್.ಅಶೋಕ್, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು. ಸಾರಿಗೆ, ಗೃಹ, ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕೆಲಸ ಮಾಡಿದ್ದರು. “ಆಪರೇಷನ್ ಕಮಲ’ ಕಾರ್ಯಾಚರಣೆಯಡಿ ಬೆಂಗಳೂರು ನಗರ ಶಾಸಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Related Articles
Advertisement
ಜೆ.ಸಿ.ಮಾಧುಸ್ವಾಮಿ: ಜನತಾ ಪರಿವಾರ ಮೂಲದ ಜೆ.ಸಿ.ಮಾಧುಸ್ವಾಮಿ ನಾಲ್ಕು ಬಾರಿ ಶಾಸಕರಾಗಿದ್ದು, ಚಿಕ್ಕನಾಯಕನಹಳ್ಳಿ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಇವರು ಹಿಂದೆ ಸಂಯುಕ್ತ ಜನತಾದಳದಲ್ಲಿದ್ದು ನಂತರ ಯಡಿಯೂರಪ್ಪ ಅವರ ಕೆಜೆಪಿಗೆ ಸೇರಿದ್ದರು. 2018 ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಜಗದೀಶ್ ಶೆಟ್ಟರ್: ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರು, ಐದು ಬಾರಿ ಶಾಸಕರಾಗಿದ್ದಾರೆ. 2012ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1999ರಲ್ಲಿ ಹಾಗೂ 2014ರಿಂದ 18ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿರುವ ಅವರು, 2008-2009ರ ಅವಧಿಯಲ್ಲಿ ವಿಧಾನಸಭೆ ಸ್ಪೀಕರ್ ಆಗಿದ್ದರು.
ಎಸ್.ಸುರೇಶ್ ಕುಮಾರ್: ಬೆಂಗಳೂರಿನ ರಾಜಾಜಿನಗರ ಕ್ಷೇತ್ರದ ಶಾಸಕರಾದ ಎಸ್.ಸುರೇಶ್ ಕುಮಾರ್ ಅವರು ಬಿ.ಎಸ್ಸಿ, ಎಲ್.ಎಲ್.ಬಿ ಪದವೀಧರರು. ಐದನೇ ಬಾರಿ ಶಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ: ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿರುವ ಶಶಿಕಲಾ ಜೊಲ್ಲೆಯವರು ಪಿಯುಸಿವರೆಗೆ ಓದಿದ್ದಾರೆ. ಕೃಷಿ ಕುಟುಂಬದಿಂದ ಬಂದಿದ್ದು, ಇವರ ಪತಿ ಸದ್ಯ ಸಂಸದರಾಗಿದ್ದಾರೆ. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಇದೇ ಮೊದಲ ಬಾರಿಗೆ ಸಚಿವೆಯಾಗಿದ್ದಾರೆ.
ಪ್ರಭು ಬಿ.ಚೌವ್ಹಾಣ್: ಬೀದರ್ ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಬಿ.ಚೌವ್ಹಾಣ್ ಅವರು ಬಿ.ಎ.ಪದವೀಧರರಾಗಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಅವರಿಗೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ದೊರೆತಿದೆ.
ಎಚ್. ನಾಗೇಶ್: ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಎಚ್.ನಾಗೇಶ್ ಬಿ.ಇ, ಎಫ್ಐಇ ಪದವೀಧರರು. ಮೊದಲ ಬಾರಿ ಶಾಸಕರಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾಗಿದ್ದರು. ಬಿಜೆಪಿ ಸರ್ಕಾರದಲ್ಲೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಭಾಗ್ಯ ಇವರದ್ದಾಗಿದೆ.
ಕೋಟ ಶ್ರೀನಿವಾಸ ಪೂಜಾರಿ: ಉಡುಪಿ ಜಿಲ್ಲೆಯ ಕೋಟದವರಾದ ಶ್ರೀನಿವಾಸ ಪೂಜಾರಿಯವರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಮೂರು ಬಾರಿ ಹಾಗೂ ಒಮ್ಮೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ವಿಶೇಷ ಮಾಹಿತಿ ಹೊಂದಿದವರಾಗಿದ್ದಾರೆ. ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಮುಜರಾಯಿ ಇಲಾಖೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಬಿ.ಶ್ರೀರಾಮುಲು: 1999ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ ಶ್ರೀರಾಮುಲು, ಎರಡು ಬಾರಿ ಸಂಸದರು ಹಾಗೂ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಮೊಳಕಾಲ್ಮೂರು ಕ್ಷೇತ್ರ ಪ್ರತಿನಿಧಿಸುತ್ತಿರುವ ಅವರು ಸಚಿವರಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ 2011ರಲ್ಲಿ ಬಿಜೆಪಿ ತೊರೆದು ಬಿಎಸ್‌ಆರ್ ಪಕ್ಷ ಕಟ್ಟಿದ್ದರು. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತ್ತೆ ಬಿಜೆಪಿಗೆ ಬಂದು ಸಂಸದರಾಗಿ ಆಯ್ಕೆಯಾಗಿದ್ದರು.
ಗೋವಿಂದ ಕಾರಜೋಳ: ಜನತಾ ಪರಿವಾರದಿಂದ ರಾಜಕೀಯ ಆರಂಭಿಸಿರುವ ಇವರು, ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಿಜೆಪಿ ಸರ್ಕಾರದಲ್ಲಿ ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಜವಳಿ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಸಿ.ಸಿ. ಪಾಟೀಲ್: ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಇವರು, ಯಡಿಯೂರಪ್ಪ ಸಂಪುಟದಲ್ಲಿ ಎರಡನೇ ಬಾರಿಗೆ ಸಚಿವರಾಗಿದ್ದಾರೆ. 2008ರಲ್ಲಿ ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಕೆಎಸ್‌ಎಸ್‌ಐಡಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2010ರಿಂದ 12ರ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಬಸವರಾಜ ಬೊಮ್ಮಾಯಿ: ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿರುವ ಇವರು, 1998 ರಿಂದ 2004 ರವರೆಗೆ ಧಾರವಾಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಚುನಾವಣಾ ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ. 2008 ರಿಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1999ರಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಬಿಜೆಪಿ ಸರ್ಕಾರದಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈಗ ಎರಡನೇ ಬಾರಿಗೆ ಸಚಿವರಾಗಿದ್ದಾರೆ.
ಲಕ್ಷ್ಮಣ ಸವದಿ: ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಲಕ್ಷ್ಮಣ ಸವದಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹೇಶ್ ಕುಮಠಳ್ಳಿ ವಿರುದ್ಧ ಸೋಲು ಕಂಡಿದ್ದರು. ಆದರೂ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 2006-07 ರ ವರೆಗೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸಕ್ರೀಯರಾಗಿರುವ ಅವರು, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಜಮಖಂಡಿ ಹಾಗೂ ಬೈಲಹೊಂಗಲ ಸಂಗಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.