ಹಾಸನ: ಎಚ್.ಡಿ. ಕುಮಾರಸ್ವಾಮಿ ಮತ್ತು ನಾನು ಹೊಡೆದಾಡುತ್ತೇವೆ ಎಂದುಕೊಂಡಿದ್ದವರಿಗೆ ಭ್ರಮನಿರಸನವಾಗುವುದು ಖಚಿತ ಎಂದು ವಿರೋಧಪಕ್ಷದವರ ಟೀಕೆಗಳಿಗೆ ದಿಟ್ಟವಾಗಿ ಉತ್ತರ ಕೊಡುತ್ತಿದ್ದ ಎಚ್.ಡಿ.ರೇವಣ್ಣ ಅವರು, ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಭ್ರಮನಿರಸನಗೊಂಡಂತಿದೆ. ಹಾಸನ ಟಿಕೆಟ್ ವಿಚಾರದಲ್ಲಿ ನನ್ನನ್ನು ಕೇಳದೇ ನಿರ್ಧಾರ ಮಾಡುವುದಿಲ್ಲ ಎಂಬ ಅತಿಯಾದ ವಿಶ್ವಾಸದಲ್ಲಿದ್ದ ರೇವಣ್ಣ ಅವರಿಗೆ ಸಹೋದರ ಎಚ್.ಡಿ. ಕುಮಾರಸ್ವಾಮಿ ಅವರು ಟಿಕೆಟ್ ವಿಚಾರವಾಗಿ ಹಿಡಿದಿರುವ ಪಟ್ಟು ನುಂಗಲಾರದ ತುತ್ತಾಗಿದೆ.
ಮೂರು ದಶಕಗಳಿಂದ ಎಚ್. ಡಿ.ರೇವಣ್ಣ ಹಾಸನ ಜಿಲ್ಲೆಯ ರಾಜ ಕಾರಣವನ್ನು ನಿಭಾಯಿಸುತ್ತಲೇ ಬಂದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಚುನಾ ವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಇರಲಿ, ಬೃಹತ್ ಸಮಾವೇಶಗಳ ಆಯೋಜನೆಯಿರಲಿ ರೇವಣ್ಣ ಅವರ ನಿರ್ಧಾರಗಳೇ ಅಂತಿಮ ವಾಗಿರುತ್ತಿದ್ದವು. ರಾಜಕೀಯ ಸಂದಿಗ್ಧ ಪರಿಸ್ಥಿತಿಗಳು ಎದುರಾದಾಗ ಮಾತ್ರ ಎಚ್.ಡಿ.ದೇವೇಗೌಡ ಅವರು ಮಧ್ಯ ಪ್ರವೇಶಿಸಿ ಪರಿಹರಿ ಸುತ್ತಿದ್ದರು. ಕುಮಾರಸ್ವಾಮಿ ಅವರು ಹಾಸನದ ರಾಜಕಾರಣಕ್ಕೆ ಮಧ್ಯೆ ಪ್ರವೇಶಿಸಿದ್ದೇ ಇಲ್ಲ. ಆದರೆ, ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ದೇವೇಗೌಡರೇ ಅಸ ಹಾಯಕರಾಗಿರುವ ಪರಿಸ್ಥಿತಿ ನಿರ್ಮಾಣವಾದಂತಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭವಾನಿ ರೇವಣ್ಣ ಅವರು ಸ್ಪರ್ಧಿಯಾಗುವರು ಎಂಬುದು ಇತ್ತೀಚಿನ ಬೆಳವಣಿಗೆಗಳೇನೂ ಅಲ್ಲ. 4 ಬಾರಿ ಶಾಸಕರಾಗಿದ್ದ ಪ್ರಕಾಶ್ ನಿಧನರಾಗಿದ್ದಾಗ ಡಾ| ಸೂರಜ್ ರೇವಣ್ಣ ಅವರ ಹೆಸರು ಕೇಳಿಬಂದಿತ್ತು. ಆಗ ಸ್ವರೂಪ್ ಹೆಸರು ಪ್ರಸ್ತಾವ ವಾಗಿರಲಿಲ್ಲ. ವಿಚಿತ್ರವೆಂದರೆ, ಸ್ವರೂಪ್ ಅವರನ್ನು ಮುನ್ನೆಲೆಗೆ ತಂದಿದ್ದೇ ರೇವಣ್ಣ. ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಕೂರಿಸಿ ಬಿಜೆಪಿ ಶಾಸಕರ ಎದುರು ರಾಜಕೀಯ ಸಂಘರ್ಷಕ್ಕೆ ಅಣಿಗೊಳಿಸಿದ್ದರು. ಸೂರಜ್ ರೇವಣ್ಣ ಪರಿಷತ್ ಸದಸ್ಯರಾದ ಬಳಿಕ, ಭವಾನಿ ರೇವಣ್ಣ ಅವರ ಹೆಸರು ಕೇಳಿಬಂದಿತು. ಜತೆಗೇ ಎಚ್.ಪಿ. ಸ್ವರೂಪ್ ಅವರ ಹೆಸರೂ ಪ್ರಸ್ತಾವವಾಯಿತು. ಆರು ತಿಂಗಳ ಹಿಂದೆ ಹಾಸನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸ್ವರೂಪ್ ಬೆಂಬಲಿಗರು ಮಾಡಿದ ಗಲಾಟೆ ಬಳಿಕ ರೇವಣ್ಣ, ಸ್ವರೂಪ್‌ರನ್ನು ದೂರವಿಡುತ್ತಾ ಬಂದರು. ಆದರೆ, ಕುಮಾರಸ್ವಾಮಿ ಸ್ವರೂಪ್‌ಗೆ ಬೆಂಬಲ ನೀಡುತ್ತಾ ಬಂದರು. ಇಷ್ಟಾದರೂ ರೇವಣ್ಣ ಅವರು ಹಾಸನ ಕ್ಷೇತ್ರದ ಟಿಕೆಟ್ ಪಡೆಯುವುದು ಜಟಿಲವಾಗುವುದೆಂದು ಭಾವಿಸಿರಲೇ ಇಲ್ಲ. ಅಲ್ಲದೆ, ನನ್ನನ್ನು ಕೇಳಿಯೇ ತೀರ್ಮಾನ ಮಾಡುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿಯೇ ಇದ್ದರು. ಇನ್ನೊಂದೆಡೆ ಕುಮಾರಸ್ವಾಮಿಯವರು ಸ್ವರೂಪ್ ವಿಚಾರದಲ್ಲಿ ಒಂದಿಂಚೂ ಹಿಂದಕ್ಕೆ ಸರಿಯಲಿಲ್ಲ. ಈಗ ಎಚ್.ಡಿ. ರೇವಣ್ಣ ಅವರು ಕಂಗಾಲಾಗಿ ಹೋಗಿದ್ದಾರೆ.
ಈಗ ನಡೆದಿರುವ ಬೆಳವಣಿಗೆಗಳನ್ನು ಗಮನಿಸಿದರೆ ಭವಾನಿ ರೇವಣ್ಣ ಅವರ ರಾಜಕೀಯ ಪ್ರವೇಶವನ್ನು ತಡೆಯಬೇಕು. ಆ ಮೂಲಕ ಹಾಸನ ಜಿಲ್ಲೆಯ ರಾಜಕಾರಣವನ್ನು ನಿಯಂತ್ರಿಸಬೇಕು ಎಂಬುದೇ ಎಚ್.ಡಿ. ಕುಮಾರಸ್ವಾಮಿ ಗುರಿ ಎಂಬುದು ರೇವಣ್ಣ ಕುಟುಂಬದವರ ನಂಬಿಕೆ. ಭವಾನಿ ರೇವಣ್ಣ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದರಿಂದ ಕುಟುಂಬ ರಾಜಕಾರಣದ ಅಪವಾದ ಬರುತ್ತದೆ ಎಂಬುದಾದರೆ ಅನಿತಾ ಕುಮಾರಸ್ವಾಮಿ ಅವರು ಶಾಸಕರಾದಾಗ, ಈಗ ರಾಮನಗರ ಕ್ಷೇತ್ರದಲ್ಲಿ ನಿಖೀಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವುದರಿಂದ ಕುಟುಂಬ ರಾಜ ರಾಜಕಾರಣದ ಅಪವಾದ ಬರುವುದಿಲ್ಲವೇ? ದಶಕಗಳ ಕಾಲ ಹಾಸನ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ ರೇವಣ್ಣ ಅವರಿಗೆ ಒಂದು ಕ್ಷೇತ್ರದ ಟಿಕೆಟ್ ಘೋಷಣೆ ಅಧಿಕಾರವಿಲ್ಲವೇ? ಹಾಸನ ಜಿಲ್ಲೆಯ ರಾಜಕಾರಣವನ್ನೂ ಕುಮಾರಸ್ವಾಮಿ ಅವರು ನಿಯಂತ್ರಿಸುವುದಾದರೆ ಪಕ್ಷದಲ್ಲಿ ರೇವಣ್ಣ ಅವರ ಸ್ಥಾನಮಾನವೇನು ಎಂಬುದೂ ರೇವಣ್ಣ ಕುಟುಂಬದವರ ಪ್ರಶ್ನೆ.
ಈ ಪಶ್ನೆಗಳಿಗೆಲ್ಲ ಉತ್ತರ ಕೊಟ್ಟು ಬಿಕ್ಕಟ್ಟು ಪರಿಹರಿಸುವ ಜವಾಬ್ದಾರಿ ಪಕ್ಷದ ವರಿಷ್ಠ ದೇವೇಗೌಡರ ಮುಂದಿದೆ. ಇನ್ನು 2 -3 ದಿನಗಳಲ್ಲಿಯೇ ಬಿಕ್ಕಟ್ಟು ಪರಿಹರಿಸುವ ಅನಿವಾರ್ಯತೆಯೂ ಗೌಡರದ್ದಾಗಿದೆ.
ಪಕ್ಷೇತರರಾಗಿ ಸ್ಪರ್ಧೆ?
ಅತ್ತ ಸಹೋದರನಿಂದ ಮನ್ನಣೆ ಸಿಗುತ್ತಿಲ್ಲ. ಇತ್ತ ಪತ್ನಿ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಪುತ್ರರ ಒತ್ತಡ ತಡೆಯಲಾಗುತ್ತಿಲ್ಲ. ಇಷ್ಟು ವರ್ಷ ಹಾಸನದ ರಾಜನಂತೆ ಮೆರೆದು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಕಾರ್ಯಕರ್ತರು, ಬೆಂಬಲಿಗರಿಗೆ ಒತ್ತರ ಕೊಡಲಾಗುತ್ತಿಲ್ಲ. ಬೆಂಗಳೂರಿನ ಪದ್ಮನಾಭ ನಗರದ ಪರಿವಾರವೇ ನನ್ನನ್ನು ಕೈಬಿಡುತ್ತಿದೆಯೇನೋ ಎಂಬ ಅಸಹಾಯಕತೆ ರೇವಣ್ಣ ಅವರನ್ನು ಕಾಡುತ್ತಿರುವಂತಿದೆ. ಆದರೂ ಕಡೆ ಘಳಿಗೆಯವರೆಗೂ ಕಾದು ನೋಡುವ ತಂತ್ರವಾಗಿ ಮೌನಕ್ಕೆ ಶರಣಾಗಿದ್ದಾರೆ. ಹಾಸನದಲ್ಲಿ ಪತ್ನಿ ಭವಾನಿಗೆ ಟಿಕೆಟ್ ಕೊಡದಿದ್ದರೆ ಹೊಳೆನರಸೀಪುರದಲ್ಲಿ ನನಗೂ ಜೆಡಿಎಸ್ ಟಿಕೆಟ್ ಬೇಡ. ಇಬ್ಬರೂ ಪಕ್ಷೇತರರಾಗಿ ಸ್ಪರ್ಧೆಗಿಳಿಯುತ್ತೇವೆ ಎಂಬ ಸಂದೇಶವನ್ನು ಪದ್ಮನಾಭ ನಗರಕ್ಕೆ ರೇವಣ್ಣ ಅವರು ರವಾನಿಸಿದ್ದಾರೆ. ಈ ಸಂದೇಶವನ್ನೂ ಕಡೆಗಣಿಸಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ವರೂಪ್ ಅವರಿಗೆ ಏಕ ಪಕ್ಷೀಯವಾಗಿ ಟಿಕೆಟ್ ಘೋಷಣೆ ಮಾಡಿದರೆ ದೇವೇಗೌಡರೆದುರೇ ಸಹೋದರರ ರಾಜಕೀಯ ನಡೆ ಕವಲುದಾರಿಯತ್ತ ಎಂಬ ಆತಂಕ ಜೆಡಿಎಸ್ ಮುಖಂಡರನ್ನು ಕಾಡುತ್ತಿದೆ.
-ಎನ್. ನಂಜುಂಡೇಗೌಡ