Advertisement

ತಾಪಂ ಅಧಿಕಾರಿಯ ಲಂಚ ಬೇಡಿಕೆ; ದಯಾಮರಣಕ್ಕೆ ಮನವಿ ಸಲ್ಲಿಸಿದ ದಂಪತಿ

06:32 PM Nov 09, 2022 | Team Udayavani |

ಸಾಗರ: ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಇಟ್ಟಿರುವ ಲಂಚದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲದ ನಮ್ಮ ಕುಟುಂಬಕ್ಕೆ ದಯಾಮರಣವನ್ನು ಹೊಂದಲು ಅನುಮತಿ ನೀಡಬೇಕು ಎಂದು ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ತಾಲೂಕಿನ ದಂಪತಿಯೋರ್ವರು ಮನವಿಯನ್ನು ಸಲ್ಲಿಸಿದ ವಿಲಕ್ಷಣ ಘಟನೆ ಬುಧವಾರ ನಡೆದಿದೆ.

Advertisement

ಇಲ್ಲಿನ ಕುಗ್ವೆ ಸಮೀಪದ ವೀಳಾಸರ ನಿವಾಸಿಯಾದ ಶ್ರೀಕಾಂತ ನಾಯ್ಕ ಅವರು ಎಸಿ ಪಲ್ಲವಿ ಸಾತೇನಹಳ್ಳಿ ಅವರಿಗೆ ಮನವಿ ಸಲ್ಲಿಸಿ, ಕಳೆದ ಹತ್ತು ತಿಂಗಳಿಂದ ಇಲ್ಲಿನ ತಾಪಂ ಇಓ ಅವರು ಲಂಚಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಜಮೀನಿಗೆ ಯೋಜನಾ ಅಯೋಗದಿಂದ ಭೂ ಪರಿವರ್ತನೆ ಮಂಜೂರಾತಿಯನ್ನು ಮಾಡಿಸಿಕೊಂಡಿದ್ದೇವೆ. ನಗರ ಪ್ರದೇಶಕ್ಕೆ ಹತ್ತಿರವಿರುವ ಕಾರಣ ಭೂಮಿ ಬೆಲೆಬಾಳುತ್ತದೆ. ಅದಕ್ಕೆ ತಾಲೂಕು ಪಂಚಾಯ್ತಿಯಿಂದ ನಿವೇಶನ ಬಿಡುಗಡೆ ಮಾಡಲು ಒಪ್ಪಿಗೆ ಪಡೆಯಲು ಅಲೆಯುತ್ತಿದ್ದೇವೆ. ಆದರೆ ಅಧಿಕಾರಿಗಳು ನಿವೇಶನ ಬಿಡುಗಡೆ ಮಾಡಲು ೧೦ ಲಕ್ಷ ರೂ.ಗಳ ಲಂಚದ ಬೇಡಿಕೆಯನ್ನು ಇಟ್ಟಿದ್ದಾರೆ. ನಾವು ಬಡ ಜಮೀನು ಮಾಲಿಕರಾಗಿರುವುದರಿಂದ ಲಂಚವನ್ನು ನೀಡಲಾಗಿಲ. ಲಂಚ ಕೇಳಿದ ವಿಚಾರ ಸಾರ್ವಜನಿಕವಾಗಿ ಬಹಿರಂಗವಾಗಿದೆ ಎಂದು ತಾಲೂಕು ಪಂಚಾಯ್ತಿ ಅಧಿಕಾರಿಗಳು ದ್ವೇಷದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಲ್ಲಸಲ್ಲದ ಕಾರಣವನ್ನು ಹೇಳಿ ಕಚೇರಿ ಅಲೆದಾಟ ಮಾಡಿಸುತ್ತಿದ್ದಾರೆ ಎಂದು ದಂಪತಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.

ಇದರಿಂದ ನಮ್ಮ ಆರೋಗ್ಯದಲ್ಲಿಯೂ ಏರುಪೇರು ಆಗುವಂತಾಗಿದೆ. ಭೂ ಮಂಜೂರಾತಿಯಾದ ಜಾಗದಲ್ಲಿ ನಿವೇಶನ ಬಿಡುಗಡೆ ಮಾಡಬಾರದು ಎಂಬ ಯಾವ ಕಾನೂನಿನಲ್ಲಿ ತಡೆಯಾಜ್ಞೆ  ಇಲ್ಲದಿದ್ದರೂ ದ್ವೇಷದಿಂದ ದಿನಕ್ಕೊಂದು ಕಾನೂನು ಕಾರಣ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಮೂರು ತಿಂಗಳಿಂದ ಜಿಲ್ಲಾಧಿಕಾರಿ ಕಛೇರಿ ಅಲೆದಾಟ ನಡೆಸಿದ್ದೇವೆ. ಭ್ರಷ್ಟ ವ್ಯವಸ್ಥೆಯಿಂದ ಜೀವನವೇ ಮುಳುಗಿಹೋಗುವ ಹಂತಕ್ಕೆ ತಲುಪಿದೆ. ಈ ಹಂತದಲ್ಲಿ ನಮ್ಮ ಕುಟುಂಬಕ್ಕೆ ದಯಾಮರಣವೇ ಗತಿಯಾಗಿದೆ ಎಂದು ಶ್ರೀಕಾಂತ್ ನಾಯ್ಕ್ ದಂಪತಿಗಳು ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next